ಪದ್ಯ ೮೩: ಯಾರೊಂದಿಗೆ ಅಂಜಿಕೆಯಿಂದ ನಡೆಯಬೇಕು?

ಗುರುವಿನಲಿ ತಂದೆಯಲಿ ತಾಯಲಿ
ಹಿರಿಯರಲಿ ದೈವದಲಿ ಪಾಪದ
ಇರುಬಿನಲಿ ಗೋವಿನಲಿ ತೀರ್ಥದಲಿ ತನ್ನುವನು
ಹೊರೆವ ದಾತಾರನಲಿ ಮಂತ್ರದ
ಪರಮ ಸೇವೆಗಳಲ್ಲಿ ಧರಣೀ
ಸುರರೊಳಂಜಿಕೆ ಹಿರಿದಿರಲು ಬೇಕೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗುರು, ತಂದೆ, ತಾಯಿ, ಹಿರಿಯರು, ಭಗವಂತ, ಪಾಪದ ತೊಡಕುಗಳಲಿ, ಗೋವು, ತೀರ್ಥಕ್ಷೇತ್ರಗಳಲಿ, ಸಲಹುವ ಒಡೆಯ, ಮಂತ್ರದಿಂದ ಮಾಡುವ ದೇವತಾಸೇವೆ, ಬ್ರಾಹ್ಮಣರು ಇವರಲ್ಲೆಲ್ಲಾ ಭಯಭಕ್ತಿಯಿಂದ ನಡೆಯಬೇಕೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಗುರು: ಆಚಾರ್ಯ; ತಂದೆ: ಪಿತ; ತಾಯಿ: ಮಾತೆ; ಹಿರಿಯರು: ದೊಡ್ಡವರು, ಶ್ರೇಷ್ಠರು; ದೈವ: ಭಗವಂತ; ಪಾಪ: ಪುಣ್ಯವಲ್ಲದ ಕಾರ್ಯ, ಕೆಟ್ಟ ಕೆಲಸ; ಇರುಬು: ತೊಡಕು, ಇಕ್ಕಟ್ಟು; ಗೋವು: ಹಸು; ತೀರ್ಥ: ಪವಿತ್ರವಾದ ಜಲ, ಪುಣ್ಯಕ್ಷೇತ್ರ; ಹೊರೆ: ರಕ್ಷಣೆ, ಆಶ್ರಯ; ದಾತಾರ: ಕೊಡುವವನು, ದಾನಿ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಪರಮ: ಶ್ರೇಷ್ಠ; ಸೇವೆ: ಊಳಿಗ, ಚಾಕರಿ; ಧರಣಿ: ಭೂಮಿ; ಧರಣೀಸುರ: ಬ್ರಾಹ್ಮಣ; ಅಂಜಿಕೆ: ಭಯ; ಹಿರಿದು: ಅತಿಶಯವಾದುದು, ಹೆಚ್ಚಾದುದು;

ಪದವಿಂಗಡಣೆ:
ಗುರುವಿನಲಿ +ತಂದೆಯಲಿ +ತಾಯಲಿ
ಹಿರಿಯರಲಿ +ದೈವದಲಿ +ಪಾಪದ
ಇರುಬಿನಲಿ+ ಗೋವಿನಲಿ+ ತೀರ್ಥದಲಿ +ತನ್ನುವನು
ಹೊರೆವ +ದಾತಾರನಲಿ +ಮಂತ್ರದ
ಪರಮ+ ಸೇವೆಗಳಲ್ಲಿ+ ಧರಣೀ
ಸುರರೊಳ್+ಅಂಜಿಕೆ +ಹಿರಿದಿರಲು +ಬೇಕೆಂದನಾ +ಮುನಿಪ

ಅಚ್ಚರಿ:
(೧) ೧೧ ರೀತಿಯ ಜನರಬಳಿ ಭಯಭಕ್ತಿಯಿಂದ ನಡೆಯಬೇಕೆಂದು ತಿಳಿಸುವ ಪದ್ಯ

ಪದ್ಯ ೮೧: ಗಂಡನು ಯಾರನ್ನು ತೊರೆಯುವುದುತ್ತಮ?

ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು
ಒಡರಿಸ್ಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣ್ದ ದಿಟ್ಟೆ ಹತ್ತನು
ಹಡೆದಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೧ ಪದ್ಯ)

ತಾತ್ಪರ್ಯ:
ಹೆಂಡತಿಯಾದವಳು ತನ್ನ ಮನೆ ಅವಳ ಮನೆಯಕೆಲಸಗಳನ್ನು ಬಿಟ್ಟು, ಹೆಜ್ಜೆ ಹೆಜ್ಜೆಗೂ ಬೇರೆಯವರ ಮನೆಯಲ್ಲಿ ಬಾಯ್ಬಡಿದು ಮಾತನಾಡುತ್ತಾ, ತನಗೆ ಒಬ್ಬ ಗಂಡನಿರುವನೆಂಬುದನ್ನು ಮರೆತು, ಅವನನ್ನು ಎಡವಿದರೂ ಗಮನಿಸದಿರುವ ದಿಟ್ಟ ಹೆಂಗಸು ತನ್ನಿಂದ ಹತ್ತು ಮಕ್ಕಳನ್ನು ಪಡೆದಿದ್ದರೂ ಶ್ರೇಷ್ಠ ಪುರುಷನು ಆಕೆಯನ್ನು ತೊರೆಯುವುದು ಉತ್ತಮ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಮಡದಿ: ಹೆಂಡತಿ; ನಿಜ: ಸ್ವಂತ; ನಿಳಯ: ಆಲಯ,ಮನೆ; ಬಿಟ್ಟು: ತೊರೆದು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ, ಯಾವಾಗಲೂ; ಪರ: ಬೇರೆ; ಗೃಹ: ಮನೆ; ಬಾಯನುಬಡಿದು: ಹರಟು, ಬೊಬ್ಬೆಹಾಕು; ಮನೆ: ಆಲಯ; ವಾರ್ತೆ: ವಿಷಯ; ಬೀದಿ: ರಸ್ತೆ; ಕಲಹ: ಜಗಳ; ಒಡರು: ಮಾಡು, ರಚಿಸು; ಪತಿ: ಗಂಡ; ಎಡಹು: ತಪ್ಪುಮಾಡು, ಮುಗ್ಗರಿಸು; ಕಾಣದ: ಗೋಚರಿಸದ; ಹತ್ತು: ದಶ; ಹಡೆದು: ಪಡೆದು, ಜನ್ಮನೀಡು; ವರ್ಜಿಸು: ತೊರೆ; ಉತ್ತಮ: ಒಳ್ಳೆಯ, ಶ್ರೇಷ್ಠ; ಪುರುಷ: ಗಂಡ;

ಪದವಿಂಗಡಣೆ:
ಮಡದಿ +ನಿಜ+ನಿಳಯವನು +ಬಿಟ್ಟ್+ಅಡಿ
ಗಡಿಗೆ +ಪರ+ಗೃಹದೊಳಗೆ +ಬಾಯನು
ಬಡಿದು +ಮನೆಮನೆ+ವಾರ್ತೆಯೆನ್ನದೆ +ಬೀದಿ+ಕಲಹವನು
ಒಡರಿಚುವ +ಪತಿಯೊಬ್ಬನ್+ಉಂಟೆಂದ್
ಎಡಹಿ +ಕಾಣ್ದ +ದಿಟ್ಟೆ +ಹತ್ತನು
ಹಡೆದಡೆಯು+ ವರ್ಜಿಸುವುದ್+ಉತ್ತಮ +ಪುರುಷರುಗಳೆಂದ

ಅಚ್ಚರಿ:
(೧) ಅಡಿಗಡಿ, ಮನೆಮನೆ – ಜೋಡಿ ಪದಗಳ ಬಳಕೆ
(೨) ಪತಿ, ಮಡದಿ – ಗಂಡ ಹೆಂಡತಿಗೆ ಉಪಯೋಗಿಸಿದ ಪದ

ಪದ್ಯ ೮೦: ಗೃಹಸ್ಥೆಯ ಲಕ್ಷಣವೇನು?

ಇರುಳು ಹಗಲನವರತ ಪತಿ ಪರಿ
ಚರಿಯವನು ಮಾಡುತ್ತ ಪರಪುರು
ಷರನು ನೆನೆಯದೆ ಹಲವು ಸಂತತಿಗಳಿಗೆ ತಾಯಾಗಿ
ಇರುತ ದೇವ ಬ್ರಾಹ್ಮರನು ತಾ
ನಿರುತ ಸತ್ಕರಿಸುತ್ತಲಂತಃ
ಪುರದಲೆಸೆಯೆ ಗೃಹಸ್ಥೆಯೆನಿಸುವಳರಸ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೦ ಪದ್ಯ)

ತಾತ್ಪರ್ಯ:
ಹಗಲು ರಾತ್ರಿ ಎನದೆ ಸದಾ ಪತಿಯ ಸೇವೆ ಮಾಡುತ್ತಾ, ಪರಪುರುಷರನ್ನು ನೆನೆಯದೆ ಹಲವು ಮಕ್ಕಳಿಗೆ ಜನ್ಮನೀಡಿ, ನಿತ್ಯವೂ ದೇವ ಬ್ರಾಹ್ಮಣರನ್ನು ಸತ್ಕರಿಸುತ್ತಾ ಅಂತಃಪುರದಲ್ಲಿರುವವಳು ಗೃಹಸ್ಥೆಯೆನಿಸುತ್ತಾಳೆ ಎಂದು ಗೃಹಸ್ಥೆಯ ಲಕ್ಷಣವನ್ನು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಇರುಳು: ರಾತ್ರಿ; ಹಗಲು: ಬೆಳಗ್ಗೆ; ಅನವರತ: ಯಾವಾಗಲು; ಪತಿ: ಗಂಡ; ಪರಿಚರಿಯ: ಸೇವೆ; ಮಾಡು: ಆಚರಿಸು; ಪರ: ಬೇರೆ; ಪುರುಷ: ಗಂಡು; ನೆನೆ: ಜ್ಞಾಪಿಸು; ಹಲವು: ಬಹಳ; ಸಂತತಿ: ಮಕ್ಕಳು; ತಾಯಿ: ಮಾತೆ; ಇರುತ: ಜೀವಿಸುತ; ದೇವ: ಸುರ; ಬ್ರಾಹ್ಮರ: ವಿಪ್ರ; ನಿರುತ: ಧರ್ಮ, ಶ್ರದ್ಧೆ; ಸತ್ಕರಿಸು: ಗೌರವಿಸು; ಅಂತಃಪುರ: ಹೆಂಗಸರ ವಾಸಸ್ಥಾನ; ಎಸೆ: ಶೋಭಿಸು; ಗೃಹಸ್ಥೆ: ಹೆಂಡತಿ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಇರುಳು +ಹಗಲ್+ಅನವರತ +ಪತಿ +ಪರಿ
ಚರಿಯವನು +ಮಾಡುತ್ತ +ಪರಪುರು
ಷರನು +ನೆನೆಯದೆ +ಹಲವು +ಸಂತತಿಗಳಿಗೆ+ ತಾಯಾಗಿ
ಇರುತ+ ದೇವ +ಬ್ರಾಹ್ಮರನು +ತಾ
ನಿರುತ+ ಸತ್ಕರಿಸುತ್ತಲ್+ಅಂತಃ
ಪುರದಲ್+ಎಸೆಯೆ +ಗೃಹಸ್ಥೆ+ಯೆನಿಸುವಳ್+ಅರಸ+ ಕೇಳೆಂದ

ಅಚ್ಚರಿ:
(೧) ಇರುತ, ನಿರುತ – ಪ್ರಾಸ ಪದಗಳ ಬಳಕೆ
(೨) ಇರುಳು ಹಗಲು – ವಿರುದ್ಧ ಪದಗಳು