ಪದ್ಯ ೬೩: ಬ್ರಾಹ್ಮಣೋತ್ತಮರ ಪಾದೋದಕ ಏಕೆ ಪವಿತ್ರವಾದುದು?

ಶರಧಿಯೊಳು ಹರಿ ಯೋಗನಿದ್ರೆಯೊ
ಳಿರಲು ಭೃಗುವೈತಂದು ಲಕ್ಷ್ಮೀ
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಹಾಲಿನ ಸಮುದ್ರದಲ್ಲಿ ವಿಷ್ಣುವು ಯೋಗನಿದ್ರೆಯಲ್ಲಿ ಮುಳುಗಿರಲು ಭೃಗು ಮಹರ್ಷಿಯು ಅವನನ್ನು ನೋಡಲು ಬಂದು, ಬಂದ ಬ್ರಾಹ್ಮಣನನ್ನು ಆಹ್ವಾನಿಸಲಿಲ್ಲವೆಂದು ಕೋಪಗೊಂಡು ವಿಷ್ಣುವಿನ ವಕ್ಷಸ್ಥಳವನ್ನು ಒದೆಯುತ್ತಾನೆ. ವಿಷ್ಣುವು ಭೃಗು ಮಹರ್ಷಿಯ ಪಾದಕ್ಕೆ ನೋವಾಯಿತೇನೋ ಎಂದು ಅದನ್ನು ತನ್ನ ಎದೆಯ ಮೇಲಿಟ್ಟು ಒತ್ತಿ ಆ ಪಾದಗಳ ಮಹಿಮೆಯನ್ನು ಮೆರೆದನು. ಬ್ರಾಹ್ಮಣೋತ್ತಮರ ಪಾದೋದಕಕ್ಕಿಂತ ಹೆಚ್ಚಿನ ತೀರ್ಥವಿಲ್ಲವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಶರಧಿ: ಸಮುದ್ರ; ಹರಿ: ವಿಷ್ಣು; ಯೋಗ: ಹೊಂದಿಸುವಿಕೆ, ಮನಸ್ಸು ಹಾಗೂ ಇಂದ್ರಿಯಗಳನ್ನು ನಿಗ್ರಹಿಸಿ ಏಕಚಿತ್ತದಿಂದ ಧ್ಯಾನ ಮಾಡುವಿಕೆ; ನಿದ್ರೆ: ಶಯನ; ಲಕ್ಷ್ಮೀ; ಶ್ರೀದೇವಿ; ಲಕ್ಷ್ಮೀಧರ: ವಿಷ್ಣು; ವಕ್ಷ: ಹೃದಯ; ಸ್ಥಳ: ಜಾಗ; ಒದೆ: ದೂಕು; ಮುನಿ: ಋಷಿ; ಚರಣ: ಪಾದ; ಸಿರಿ: ಲಕ್ಷ್ಮೀ; ಉದರ: ಮಧ್ಯಭಾಗ, ಹೊಟ್ಟೆ; ಒತ್ತು: ಸ್ಪರ್ಶ; ಧರಣಿ: ಭೂಮಿ; ಸುರ: ದೇವ; ಧರಣೀಸುರ: ಬ್ರಾಹ್ಮಣ; ಮೆರೆ:ಪ್ರಸಿದ್ಧವಾಗು, ಪ್ರಖ್ಯಾತವಾಗು; ತೀರ್ಥ: ಪವಿತ್ರವಾದ ಜಲ; ಪಾದ: ಚರಣ; ಧರೆ: ಭೂಮಿ; ಬುಧ: ವಿದ್ವಾಂಸ, ಬ್ರಾಹ್ಮಣ; ಅಧಿಕ: ಹೆಚ್ಚು;

ಪದವಿಂಗಡಣೆ:
ಶರಧಿಯೊಳು+ ಹರಿ +ಯೋಗ+ನಿದ್ರೆಯೊಳ್
ಇರಲು +ಭೃಗುವೈತಂದು +ಲಕ್ಷ್ಮೀ
ಧರನ+ ವಕ್ಷಸ್ಥಳವನ್+ಒದೆಯಲು +ಮುನಿಯ +ಚರಣವನು
ಸಿರಿ+ಯುದರದೊಳಗ್+ಒತ್ತಿ +ಧರಣೀ
ಸುರರ+ ಮೆರೆದನು+ ತೀರ್ಥ+ಪಾದವ
ಧರೆಯೊಳಗೆ+ ಬುಧರಿಂದ್+ಅಧಿಕವಹ+ ತೀರ್ಥವಿಲ್ಲೆಂದ

ಅಚ್ಚರಿ:
(೧) ಹರಿ, ಲಕ್ಷ್ಮೀಧರ; ಲಕ್ಷ್ಮೀ, ಸಿರಿ – ಸಮಾನಾರ್ಥಕ ಪದ
(೨) ಧರಣೀಸುರ, ಬುಧ – ಸಾಮ್ಯಪದಗಳ ಬಳಕೆ

ಪದ್ಯ ೬೨: ಯಾರು ಕೃತಾರ್ಥರು?

ಎತ್ತಲಾನು ಸುತೀರ್ಥವೆಂಬುದ
ಚಿತ್ತವಿಸುವೊಡೆ ಸರ್ವತೀರ್ಥದ
ಸತ್ವವನು ಸನ್ನಿಹಿತನಾಗವಧರಿಸು ನೀನದನು
ವಿಸ್ತರಿಸುವೆನು ವಿಪ್ರಪಾದ ವಿ
ಮುಕ್ತ ವಿಮಳೋದಕವನಾವನು
ನೆತ್ತಿಯಲಿ ಧರಿಸಿದವನವನು ಕೃತಾರ್ಥನಹನೆಂದ (ಉದ್ಯೋಗ ಪರ್ವ, ೪ ಸಂಧಿ, ೬೨ ಪದ್ಯ)

ತಾತ್ಪರ್ಯ:
ನಿನಗೆ ಎಲ್ಲಿಯಾದರು ಒಳ್ಳೆಯ ತೀರ್ಥವೆಲ್ಲಿದೆಯೆಂದು ತಿಳಿಯ ಬಯಸಿದರೆ, ಸರ್ವತೀರ್ಥಗಳ ಸತ್ವವೆಲ್ಲಿದೆಯೆಂದು ತಿಳಿಯಬಯಸಿದರೆ ಗಮನವಿಟ್ಟು ಕೇಳು, ಬ್ರಾಹ್ಮಣನ ಪಾದಗಳನ್ನು ತೊಳೆದು ಅದನ್ನು ತಲೆಗೆ ಪ್ರೋಕ್ಷಿಸಿಕೊಂಡವನೆ ಧನ್ಯ ಅವನು ಎಲ್ಲಾ ಬಯಕೆಗಳನ್ನು ಪಡೆಯುತ್ತಾನೆೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಎತ್ತ: ಎಲ್ಲಿಯಾದರು; ಸುತೀರ್ಥ: ಪವಿತ್ರವಾದ ಜಲ, ನೀರು; ಚಿತ್ತ: ಮನಸ್ಸು; ಚಿತ್ತವಿಸು: ತಿಳಿದು ಬಂದರೆ; ಸರ್ವ: ಎಲ್ಲಾ; ಸತ್ವ: ಸಾರ; ಸನ್ನಿಹಿತ: ಹತ್ತಿರ; ಅವಧಿರಿಸು: ಮನಸ್ಸಿಟ್ಟು ಕೇಳು; ವಿಸ್ತರಿಸು: ವಿಸ್ತಾರವಾಗಿ; ವಿಪ್ರ: ಬ್ರಾಹ್ಮಣ; ಪಾದ: ಚರಣ; ವಿಮುಕ್ತ: ಬಿಡುಗಡೆಯಾದವನು, ಮುಕ್ತ; ವಿಮಳ: ನಿರ್ಮಲ; ಉದಕ: ನೀರು; ನೆತ್ತಿ: ತಲೆ; ಧರಿಸು: ಹಿಡಿ, ತೆಗೆದುಕೊಳ್ಳು; ಕೃತಾರ್ಥ: ಧನ್ಯ;

ಪದವಿಂಗಡಣೆ:
ಎತ್ತಲಾನು +ಸುತೀರ್ಥ+ವೆಂಬುದ
ಚಿತ್ತವಿಸುವೊಡೆ +ಸರ್ವ+ತೀರ್ಥದ
ಸತ್ವವನು +ಸನ್ನಿಹಿತನಾಗ್+ಅವಧರಿಸು+ ನೀನದನು
ವಿಸ್ತರಿಸುವೆನು +ವಿಪ್ರಪಾದ +ವಿ
ಮುಕ್ತ +ವಿಮಳ+ಉದಕವನ್+ಆವನು
ನೆತ್ತಿಯಲಿ +ಧರಿಸಿದವನ್+ಅವನು +ಕೃತಾರ್ಥನಹನೆಂದ

ಅಚ್ಚರಿ:
(೧) ‘ವಿ’ ಕಾರದ ಸಾಲು ಪದಗಳು – ವಿಸ್ತರಿಸುವೆನು ವಿಪ್ರಪಾದ ವಿಮುಕ್ತ ವಿಮಳೋದಕವನಾವನು
(೨) ಎತ್ತ, ಚಿತ್ತ, ಮುಕ್ತ – ಪ್ರಾಸ ಪದಗಳ ಬಳಕೆ
(೩) ಸುತೀರ್ಥ, ಸರ್ವತೀರ್ಥ – ತೀರ್ಥ ಪದದ ಬಳಕೆ

ಪದ್ಯ ೬೧: ಇಂದ್ರನು ಯಾವುದಕ್ಕೆ ಬೆಂಬಲವಾಗಿದ್ದಾನೆ?

ಪರಿಪರಿಯ ಯಜ್ಞವನು ವಿರಚಿಸಿ
ಸುರಪತಿಯ ಸಂತುಷ್ಟಿಪಡಿಸಲು
ಸುರಿವನವ ಸಂಪೂರ್ಣವಾಗಿ ಸುವೃಷ್ಟಿಯನು ಜಗಕೆ
ಹರಿಹಯನು ಸಸ್ಯಾಧಿಕಂಗಳ
ಹೊರೆಯಲೋಸುಗ ಮೈಗೆ ಮೈಯಾ
ಗಿರುತಿಹನು ಭುವನದ್ವಯ ದೊಳವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೬೧ ಪದ್ಯ)

ತಾತ್ಪರ್ಯ:
ಹಲವು ಬಗೆಯ ಯಜ್ಞವನು ರಚಿಸಿ ಇಂದ್ರನನ್ನು ತೃಪ್ತಿಪಡಿಸಿದರೆ, ಅವನು ಸಂಪೂರ್ಣವಾಗಿ ಸುವೃಷ್ಟಿಯನ್ನು ಧರೆಗೆ ಸುರಿಸುವನು. ಇಂದ್ರನು ಎರಡು ಲೋಕಗಳಲ್ಲೂ ಸಸ್ಯ ಸಮೃದ್ಧಿಗೆ ಬೆಂಬಲಿಗನಾಗಿದ್ದಾನೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಪರಿಪರಿ: ಹಲವಾರು; ಯಜ್ಞ: ಅಧ್ವರ; ವಿರಚಿಸಿ: ನಿರ್ಮಿಸಿ; ಸುರಪತಿ: ಇಂದ್ರ; ಪತಿ: ಯಜಮಾನ; ಸುರ: ದೇವತೆ; ಸಂತುಷ್ಟ: ಸಂತೋಷ, ಸಂತೃಪ್ತಿ; ಸುರಿ: ಹರಿಸು, ಕೊಡು; ಸಂಪೂರ್ಣ: ಎಲ್ಲಾ, ಪೂರ್ತಿ; ಸುವೃಷ್ಟಿ: ಮಳೆ, ವರ್ಷ; ಜಗ: ಜಗತ್ತು; ಹರಿಹಯ: ಇಂದ್ರ; ಸಸ್ಯ: ಗಿಡ, ಬಳ್ಳಿ; ಹೊರೆ: ರಕ್ಷಣೆ, ಆಶ್ರಯ; ಓಸುಗ: ಓಸ್ಕರ; ಮೈಗೆಮೈಯಾ: ಬೆಂಬಲ; ಭುವನ: ಜಗತ್ತು, ಪ್ರಪಂಚ;ದ್ವಯ: ಎರಡು; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪರಿಪರಿಯ +ಯಜ್ಞವನು +ವಿರಚಿಸಿ
ಸುರಪತಿಯ +ಸಂತುಷ್ಟಿಪಡಿಸಲು
ಸುರಿವನ್+ಅವ+ ಸಂಪೂರ್ಣವಾಗಿ +ಸುವೃಷ್ಟಿಯನು +ಜಗಕೆ
ಹರಿಹಯನು +ಸಸ್ಯಾಧಿಕಂಗಳ
ಹೊರೆಯಲ್+ಓಸುಗ +ಮೈಗೆ +ಮೈಯಾಗ್
ಇರುತಿಹನು+ ಭುವನದ್ವಯದೊಳ್ +ಅವನೀಶ +ಕೇಳೆಂದ

ಅಚ್ಚರಿ:
(೧) ಸುರಪತಿ, ಹರಿಹಯ – ಇಂದ್ರನನ್ನು ಸಂಭೋದಿಸಲು ಬಳಸಿದ ಪದ
(೨) ‘ಸ’ಕಾರದ ಸಾಲು ಪದಗಳು – ಸುರಪತಿಯ ಸಂತುಷ್ಟಿಪಡಿಸಲು ಸುರಿವನವ ಸಂಪೂರ್ಣವಾಗಿ ಸುವೃಷ್ಟಿಯನು
(೩) ಬೆಂಬಲಿಸುವನು ಎಂದು ಹೇಳಲು ಬಳಸಿದ ಪದ – ಮೈಗೆ ಮೈಯಾಗಿರುತಿಹನು

ಪದ್ಯ ೬೦: ಧರ್ಮದ ಮಹತ್ವವೇನು?

ಧರ್ಮದಾಧಾರದಲಿಹುದು ಜಗ
ಧರ್ಮವುಳ್ಳನನಾಶ್ರಯಿಸುವುದು
ಧರ್ಮವೇ ನೂಕುವುದು ಜನ್ಮಾಂತರದ ಪಾತಕವ
ಧರ್ಮವೇ ಸರ್ವಪ್ರತಿಷ್ಠಿತ
ಧರ್ಮವೆಂಬುದು ಪರಮಪದವಾ
ಧರ್ಮವನು ಬಿಟ್ಟಿಹುದು ಬದುಕಲ್ಲರಸ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ಧರ್ಮದ ಆಧಾರದ ಮೇಲೆ ಜಗತ್ತು ನಿಂತಿದೆ, ಜಗತ್ತು ಧರ್ಮಿಷ್ಠನನ್ನು ಆಶ್ರಯಿಸುತ್ತದೆ. ಅನೇಕ ಜನ್ಮಗಳ ಪಾಪವನ್ನು ಧರ್ಮವೇ ನಾಶಮಾಡುತ್ತದೆ. ಧರ್ಮವು ಎಲ್ಲೆಲ್ಲಿಯೂ ನೆಲೆಗೊಂಡಿದೆ. ಧರ್ಮವೇ ಶ್ರೇಷ್ಠವಾದ ಪದವಿ, ಆದ್ದರಿಂದ ಧರ್ಮವನ್ನು ಬಿಟ್ಟು ಬದುಕುವುದು ಜೀವನವಲ್ಲವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಧರ್ಮ: ಧಾರಣೆ ಮಾಡಿದುದು, ನಡತೆ; ಆಧಾರ: ಆಶ್ರಯ, ಅವಲಂಬನ; ಜಗ: ಜಗತ್ತು, ವಿಶ್ವ; ಆಶ್ರಯ: ಆಧಾರ; ನೂಕು: ತಳ್ಳು; ಜನ್ಮಾಂತರ: ಹುಟ್ಟು ಸಾವುಗಳ ದೂರ; ಪಾತಕ: ಪಾಪ; ಸರ್ವ: ಎಲ್ಲಾ; ಪ್ರತಿಷ್ಠೆ: ಗೌರವ,ಶ್ರೇಷ್ಠ; ಪರಮ: ಶ್ರೇಷ್ಠ; ಪದ: ಪದವಿ; ಬಿಟ್ಟು: ತೊರೆ; ಬದುಕು: ಜೀವನ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಧರ್ಮದ+ಆಧಾರದಲ್+ಇಹುದು +ಜಗ
ಧರ್ಮ+ ವುಳ್ಳನನ್ +ಆಶ್ರಯಿಸುವುದ
ಧರ್ಮವೇ+ ನೂಕುವುದು +ಜನ್ಮಾಂತರದ +ಪಾತಕವ
ಧರ್ಮವೇ +ಸರ್ವಪ್ರತಿಷ್ಠಿತ
ಧರ್ಮವೆಂಬುದು +ಪರಮಪದವ್+ಆ
ಧರ್ಮವನು +ಬಿಟ್ಟಿಹುದು +ಬದುಕಲ್+ಅರಸ +ಕೇಳೆಂದ

ಅಚ್ಚರಿ:
(೧) ಧರ್ಮ ಪದವು ೧-೬ ಸಾಲಿನ ಮೊದಲ ಪದವಾಗಿರುವುದು
(೨) ಆಧಾರ, ಆಶ್ರಯ – ಸಮಾನಾರ್ಥಕ ಪದ
(೩) ಧ್ಯೇಯ ವಾಕ್ಯಗಳನ್ನು ರೂಪಿಸಿರುವುದು