ಪದ್ಯ ೫೬: ಲೋಕಕ್ಕೆ ಸರ್ವಕ್ಕೂ ಯಾವುದು ಸಾಧನ?

ಧನವನುಳ್ಳ ಮಹಾತ್ಮನಾವುದ
ನೆನೆದೊಡದು ಕೈಸಾರುವುದು ನಿ
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ
ಧನಿಕನಂತೆ ಸಮಸ್ತ ಸುಖಸಂ
ಜನಿಸುವುದೆ ಸರ್ವಕ್ಕೆ ಸಾಧನ
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಈ ಭೂಮಿಯಲ್ಲಿ ಹಣವುಳ್ಳವನು ಮಹಾತ್ಮನೆಂದು ಕರೆಸಿಕೊಳ್ಳುತ್ತಾನೆ, ಆತ ಏನನ್ನು ಬಯಸಿದರು ಅದು ಅವನ ಕೈಗೆ ಸಿಗುತ್ತದೆ, ಅದೇ ನಿರ್ಧನಿಕನು ಬಯಸಿದ ಬಯಕೆ ವ್ಯರ್ಥವಾಗುತ್ತದೆ. ಧನಿಕನಿಗೆ ಸುಖವು ದೊರಕುತ್ತದೆ. ಲೋಕದಲ್ಲಿ ಸರ್ವಕ್ಕೂ ಸಾಧನವು ಹಣವಲ್ಲದೆ ಬೇರಿಲ್ಲ ಎಂದು ಹಣದ ಪ್ರಾಮುಖ್ಯತೆಯನ್ನು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಧನ: ಹಣ, ಅರ್ಥ; ಮಹಾತ್ಮ: ಸತ್ಪುರುಷ, ಶ್ರೇಷ್ಠ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಕೈಸಾರುವುದು: ಕೈಗೆ ಸಿಗುವುದು; ನಿರ್ಧನಿಕ: ಬಡವ; ಬಯಸು: ಆಸೆಪಡು; ಬಯಲು:ವ್ಯರ್ಥವಾದುದು; ಧನಿಕ: ಹಣವಂತ, ಶ್ರೀಮಂತ; ಸಮಸ್ತ: ಎಲ್ಲಾ; ಸುಖ: ಸಂತೋಷ; ಸಂಜನಿಸು: ಹುಟ್ಟು; ಸರ್ವಕ್ಕೆ: ಎಲ್ಲಕ್ಕೂ; ಸಾಧನ:ಗುರಿಮುಟ್ಟುವ ಪ್ರಯತ್ನ; ಭುವನ: ಭೂಮಿ; ಅನ್ಯ: ಬೇರೆ;

ಪದವಿಂಗಡಣೆ:
ಧನವನುಳ್ಳ +ಮಹಾತ್ಮನ್+ಆವುದ
ನೆನೆದೊಡ್+ಅದು +ಕೈಸಾರುವುದು +ನಿ
ರ್ಧನಿಕ +ಬಯಸಿದ +ಬಯಕೆ +ಬಯಲಹುದಲ್ಲದೇ +ಬೇರೆ
ಧನಿಕನಂತೆ+ ಸಮಸ್ತ+ ಸುಖಸಂ
ಜನಿಸುವುದೆ +ಸರ್ವಕ್ಕೆ +ಸಾಧನ
ಧನವದಲ್ಲದೆ+ ಭುವನದೊಳಗ್+ಅನ್ಯತ್ರವಿಲ್ಲೆಂದ

ಅಚ್ಚರಿ:
(೧) ನುಡಿವಾಕ್ಯ ನೀಡುವ ಪದ್ಯ – ಸರ್ವಕ್ಕೆ ಸಾಧನ ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ
(೨) ಧನಿಕ, ನಿರ್ಧನಿಕ – ವಿರುದ್ಧ ಪದ
(೩) ಬಯಕೆ, ಬಯಸು – ಸಾಮ್ಯಾರ್ಥ ಪದಗಳು
(೪) ‘ಸ’ಕಾರದ ಪದಗಳ ಜೋಡಣೆ – ಸಮಸ್ತ ಸುಖಸಂಜನಿಸುವುದೆ ಸರ್ವಕ್ಕೆ ಸಾಧನ

ನಿಮ್ಮ ಟಿಪ್ಪಣಿ ಬರೆಯಿರಿ