ಪದ್ಯ ೫೯: ಯಾವುದು ನಮ್ಮ ಬೆನ್ನು ಹತ್ತಿ ಬರುತ್ತದೆ?

ಕರಿತುರಗ ಮೊದಲಾದ ವಸ್ತುಗ
ಳರಮನೆಗಳಲಿ ಪುತ್ರ ಮಿತ್ರರು
ತರುಣಿಯರು ಸಹಭವರು ಗೋತ್ರಜರಡವಿಯೊಳಗಿಕ್ಕಿ
ತಿರುಗುವರು ನಿಜಸುಕೃತ ದುಷ್ಕೃತ
ವೆರಡು ಬೆಂಬಿಡವಲ್ಲದುಳಿದುದ
ನರಸ ಬಲ್ಲವರಾರು ಧರ್ಮರಹಸ್ಯ ವಿಸ್ತರವ (ಉದ್ಯೋಗ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ಆನೆ, ಕುದುರೆ ಮೊದಲಾದ ಸಂಪತ್ತುಗಳು ಅರಮನೆಯಲ್ಲೇ ಇರುತ್ತವೆ. ಮಕ್ಕಳು, ಸ್ನೇಹಿತರು, ಹೆಂಡತಿ, ಸಹೋದರರು, ಗೋತ್ರಜರು ಅಡವಿಯಲ್ಲಿಟ್ಟು ಹಿಂದಿರುಗುತ್ತಾರೆ. ತಾನು ಮಾದಿದ ಪುಣ್ಯ ಪಾಪಗಳು ಬೆನ್ನು ಹತ್ತಿ ಬರುತ್ತವೆ. ಉಳಿದುದೇನು? ಧರ್ಮರಹಸ್ಯವನ್ನು ಬಲ್ಲವರಾರು ಎಂದು ಸನತ್ಸುಜಾತರು ಕೇಳಿದರು.

ಅರ್ಥ:
ಕರಿ: ಆನೆ; ತುರಗ: ಕುದುರೆ; ಮೊದಲಾದ: ಆದಿಯಾಗಿ; ವಸ್ತು: ಸಾಮಗ್ರಿ; ಅರಮನೆ: ರಾಜರ ಮನೆ; ಪುತ್ರ: ಮಗ; ಮಿತ್ರ: ಸ್ನೇಹಿತ; ತರುಣಿ: ಹೆಣ್ಣು; ಸಹಭವ: ಸೋದರು; ಗೋತ್ರ: ವಂಶ, ಕುಲ; ಗೋತ್ರಜ: ಒಂದೆ ವಂಶದವರು; ಅಡವಿ: ಕಾಡು; ತಿರುಗು: ಓಡಾದು; ನಿಜ: ನೈಜ, ಸತ್ಯ; ಸುಕೃತ: ಒಳ್ಳೆಯ ಕೆಲಸ; ದುಷ್ಕೃತ: ಕೆಟ್ಟ ಕೆಲಸ; ಎರಡು: ದ್ವಂದ್ವ; ಬೆಂಬಿಡು: ಹಿಂಬಾಲಿಸದಿರು; ಉಳಿದ: ಮಿಕ್ಕ; ಅರಸ: ರಾಜ; ಬಲ್ಲವ:ತಿಳಿದವರು; ಧರ್ಮ: ಧಾರಣೆ ಮಾಡಿದುದು; ರಹಸ್ಯ: ಗೋಪ್ಯ; ವಿಸ್ತರ: ಹಬ್ಬುಗೆ, ವ್ಯಾಪ್ತಿ;

ಪದವಿಂಗಡಣೆ:
ಕರಿ+ತುರಗ +ಮೊದಲಾದ +ವಸ್ತುಗಳ್
ಅರಮನೆಗಳಲಿ +ಪುತ್ರ +ಮಿತ್ರರು
ತರುಣಿಯರು +ಸಹಭವರು +ಗೋತ್ರಜರ್+ಅಡವಿಯೊಳಗಿಕ್ಕಿ
ತಿರುಗುವರು +ನಿಜಸುಕೃತ +ದುಷ್ಕೃತ
ವೆರಡು +ಬೆಂಬಿಡವಲ್ಲದ್+ಉಳಿದುದನ್
ಅರಸ +ಬಲ್ಲವರಾರು+ ಧರ್ಮರಹಸ್ಯ+ ವಿಸ್ತರವ

ಅಚ್ಚರಿ:
(೧) ನುಡಿ ವಾಕ್ಯವನ್ನು ತಿಳಿಸುವ ಪದ್ಯ – ನಿಜಸುಕೃತ ದುಷ್ಕೃತವೆರಡು ಬೆಂಬಿಡವಲ್ಲದು
(೨) ಸುಕೃತ, ದುಷ್ಕೃತ – ವಿರುದ್ಧ ಪದಗಳು

ಪದ್ಯ ೫೮: ಯಾವುದು ಸ್ವಾರ್ಥದ ಮಾರ್ಗ?

ಮಾಡುವುದು ಧರ್ಮವನು ಸುಜನರ
ಕೂಡುವುದು ಪರಪೀಡೆಯೆಂಬುದ
ಮಾಡಲಾಗದು ಕರಣ ಮೂರರೊಳಲ್ಲದಾಟವನು
ಆಡಲಾಗದು ದಸ್ಯುಜನವನು
ಕೂಡಲಾಗದಿದೆಂಬ ಮಾರ್ಗವ
ನೋಡಿ ನಡೆವುದು ತನಗೆ ಪರಮ ಸ್ವಾರ್ಥಕರವೆಂದ (ಉದ್ಯೋಗ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ಸ್ವಾರ್ಥವಾಗಿ ಬದುಕಲು ಏನು ಮಾಡಬೇಕೆಂದು ತಿಳಿಸುವ ಪದ್ಯ. ಧರ್ಮಾಚರಣೆ ಮಾಡಬೇಕು, ಸುಜನರ ಸಂಗವನ್ನು ಮಾಡಬೇಕು, ಮಾತು ಮನಸ್ಸು ಮತ್ತು ದೇಹಗಳಿಂದ ನಿಷಿದ್ಧ ವ್ಯಾಪಾರವನ್ನು ಮಾಡಬಾರದು. ದುರ್ಜನರ ಒಡನಾಟ ಮಾಡಬಾರದು, ಈ ದಾರಿಯಲ್ಲಿ ನಡೆಯುವುದೇ ಸ್ವಾರ್ಥ.

ಅರ್ಥ:
ಮಾಡು: ಕಾರ್ಯರೂಪಕ್ಕೆ ತರುವುದು; ಧರ್ಮ: ಧಾರಣೆ ಮಾಡುವುದು, ನಡತೆ; ಸುಜನ: ಸಜ್ಜನ, ಶ್ರೇಷ್ಠ; ಕೂಡು: ಒಡನಾಟ, ಸ್ನೇಹ; ಪರಪೀಡೆ: ಇತರರ ದುಃಖ; ಕರಣ: ಕಿವಿ; ಮೂರು: ತ್ರಿ: ಕರಣ ಮೂರು: ಮಾತು, ಮನಸ್ಸು, ದೇಹ; ಅಲ್ಲದ: ನಿಷಿದ್ಧ; ಆಟ: ಕಾರ್ಯ; ಆಡಲಾಗದು: ಮಾಡಬಾರದು; ದಸ್ಯು: ಅನಾರ್ಯ ಜನಾಂಗದವನು, ಅನಾಗರೀಕ; ಮಾರ್ಗ: ದಾರಿ; ನೋಡಿ: ವೀಕ್ಷಿಸು; ನಡೆ: ಹೆಜ್ಜೆ ಹಾಕು; ಪರಮ: ಶ್ರೇಷ್ಠ; ಸ್ವಾರ್ಥಕರ: ತನ್ನ ಪ್ರಯೋಜನ, ಸ್ವಹಿತ;

ಪದವಿಂಗಡಣೆ:
ಮಾಡುವುದು +ಧರ್ಮವನು +ಸುಜನರ
ಕೂಡುವುದು +ಪರಪೀಡೆ+ಯೆಂಬುದ
ಮಾಡಲಾಗದು +ಕರಣ +ಮೂರರೊಳ್+ಅಲ್ಲದ್+ಆಟವನು
ಆಡಲಾಗದು+ ದಸ್ಯು+ಜನವನು
ಕೂಡಲಾಗದ್+ಇದೆಂಬ +ಮಾರ್ಗವ
ನೋಡಿ +ನಡೆವುದು +ತನಗೆ +ಪರಮ +ಸ್ವಾರ್ಥಕರವೆಂದ

ಅಚ್ಚರಿ:
(೧) ಮಾಡುವುದು, ಮಾಡಲಾಗದು; ಕೂಡುವುದು, ಕೂಡಲಾಗದು – ವಿರುದ್ಧ ಪದಗಳ ಬಳಕೆ ಪದ್ಯದ ಮೊದಲ ಸಾಲುಗಳ ಪದ
(೨) ಅಲ್ಲದ ಆಟವನು ಆಡಲಾಗದು – ‘ಅ’ ಕಾರದ ಸಾಲು ಪದಗಳು
(೩) ಕರಣ ಮೂರು – ಮಾತು ಮನಸ್ಸು ದೇಹ ವನ್ನು ಸೂಚಿಸುವ ಪದ
(೪) ಸುಜನ, ದಸ್ಯುಜನ – ವಿರುದ್ಧ ಪದ

ಪದ್ಯ ೫೭: ಅನರ್ಥದ ಪರಂಪರೆಯನ್ನು ಯಾವುದು ಉಂಟುಮಾಡುತ್ತದೆ?

ವ್ಯರ್ಥರುಗಳೊಡನಾಟ ತನ್ನಾ
ಸ್ವಾರ್ಥವಿಲ್ಲದರುಗಳ ಕೂಟ ಪ
ರಾರ್ಥದಿಂ ಜೀವಿಸಿದೊಡಾತನ ಬದುಕು ಲೋಕದೊಳು
ಅರ್ಥವಿಲ್ಲದ ಸಿರಿಯ ಸಡಗರ
ವರ್ಥಿಯಿಲ್ಲದ ಬಾಳುವೆಗಳಿವ
ನರ್ಥಪಾರಂಪರೆಯಲೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೫೭ ಪದ್ಯ)

ತಾತ್ಪರ್ಯ:
ವ್ಯರ್ಥವಾಗಿ ಜೀವಿಸುವವರ ಒಡನಾಟ, ತಮ್ಮನ್ನು ತಾವು ನೋಡಿಕೊಳ್ಳಲಾಗದವರ ಗೆಳೆತನ, ಪರರ ಹಣದಿಂದ ಬಾಳುವವನ ಬದುಕು, ಹಣವಿಲ್ಲದೆ ಮಾಡುವ ದುಂದು ವೆಚ್ಚ, ಒಂದು ದಾನ ಬೇಡುವವರಿಲ್ಲದ ಬಾಳು, ಇವೆಲ್ಲವೂ ಅನರ್ಥದ ಪರಂಪರೆಯನ್ನುಂಟು ಮಾಡುತ್ತದೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ವ್ಯರ್ಥ: ಹಾಳು; ಒಡನಾಟ: ಜೊತೆ, ಸ್ನೇಹ; ಸ್ವಾರ್ಥ: ತನ್ನ ಪ್ರಯೋಜನ, ಸ್ವಹಿತ; ಕೂಟ: ಜೊತೆ, ಗುಂಪು; ಪರಾರ್ಥ: ಬೇರೆಯವರ ಹಣ; ಜೀವಿಸು: ಬದುಕು; ಬದುಕು: ಬಾಳು; ಲೋಕ: ಜಗತ್ತು; ಅರ್ಥ: ಮನಸ್ಸಿನ ಭಾವ, ಆಶಯ; ಸಿರಿ: ಸಂಪತ್ತು; ಸಡಗರ: ಸಂಭ್ರಮ; ಅರ್ಥಿ:ಸಾರ; ಅನರ್ಥ: ಸಾರವಿಲ್ಲದ; ಪರಂಪರೆ: ಒಂದರ ನಂತರ ಮತ್ತೊಂದು ಬರುವುದು, ಪರಿವಿಡಿ; ಕೇಳು: ಆಲಿಸು;

ಪದವಿಂಗಡಣೆ:
ವ್ಯರ್ಥರುಗಳ್+ಒಡನಾಟ +ತನ್ನ
ಅಸ್ವಾರ್ಥ+ವಿಲ್ಲದರುಗಳ+ ಕೂಟ +ಪ
ರಾರ್ಥದಿಂ +ಜೀವಿಸಿದೊಡ್+ಆತನ +ಬದುಕು +ಲೋಕದೊಳು
ಅರ್ಥವಿಲ್ಲದ+ ಸಿರಿಯ +ಸಡಗರವ್
ಅರ್ಥಿಯಿಲ್ಲದ +ಬಾಳುವೆಗಳಿವ್
ಅನರ್ಥ+ಪಾರಂಪರೆಯಲೈ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ವ್ಯರ್ಥ, ಅಸ್ವಾರ್ಥ, ಪರಾರ್ಥ, ಅರ್ಥ, ಅನರ್ಥ – ಪ್ರಾಸ ಪದಗಳು
(೨) ಜೀವಿಸು, ಬದುಕು; ಒಡನಾಟ, ಕೂಟ – ಸಮನಾರ್ಥಕ ಪದ

ಪದ್ಯ ೫೬: ಲೋಕಕ್ಕೆ ಸರ್ವಕ್ಕೂ ಯಾವುದು ಸಾಧನ?

ಧನವನುಳ್ಳ ಮಹಾತ್ಮನಾವುದ
ನೆನೆದೊಡದು ಕೈಸಾರುವುದು ನಿ
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ
ಧನಿಕನಂತೆ ಸಮಸ್ತ ಸುಖಸಂ
ಜನಿಸುವುದೆ ಸರ್ವಕ್ಕೆ ಸಾಧನ
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಈ ಭೂಮಿಯಲ್ಲಿ ಹಣವುಳ್ಳವನು ಮಹಾತ್ಮನೆಂದು ಕರೆಸಿಕೊಳ್ಳುತ್ತಾನೆ, ಆತ ಏನನ್ನು ಬಯಸಿದರು ಅದು ಅವನ ಕೈಗೆ ಸಿಗುತ್ತದೆ, ಅದೇ ನಿರ್ಧನಿಕನು ಬಯಸಿದ ಬಯಕೆ ವ್ಯರ್ಥವಾಗುತ್ತದೆ. ಧನಿಕನಿಗೆ ಸುಖವು ದೊರಕುತ್ತದೆ. ಲೋಕದಲ್ಲಿ ಸರ್ವಕ್ಕೂ ಸಾಧನವು ಹಣವಲ್ಲದೆ ಬೇರಿಲ್ಲ ಎಂದು ಹಣದ ಪ್ರಾಮುಖ್ಯತೆಯನ್ನು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಧನ: ಹಣ, ಅರ್ಥ; ಮಹಾತ್ಮ: ಸತ್ಪುರುಷ, ಶ್ರೇಷ್ಠ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಕೈಸಾರುವುದು: ಕೈಗೆ ಸಿಗುವುದು; ನಿರ್ಧನಿಕ: ಬಡವ; ಬಯಸು: ಆಸೆಪಡು; ಬಯಲು:ವ್ಯರ್ಥವಾದುದು; ಧನಿಕ: ಹಣವಂತ, ಶ್ರೀಮಂತ; ಸಮಸ್ತ: ಎಲ್ಲಾ; ಸುಖ: ಸಂತೋಷ; ಸಂಜನಿಸು: ಹುಟ್ಟು; ಸರ್ವಕ್ಕೆ: ಎಲ್ಲಕ್ಕೂ; ಸಾಧನ:ಗುರಿಮುಟ್ಟುವ ಪ್ರಯತ್ನ; ಭುವನ: ಭೂಮಿ; ಅನ್ಯ: ಬೇರೆ;

ಪದವಿಂಗಡಣೆ:
ಧನವನುಳ್ಳ +ಮಹಾತ್ಮನ್+ಆವುದ
ನೆನೆದೊಡ್+ಅದು +ಕೈಸಾರುವುದು +ನಿ
ರ್ಧನಿಕ +ಬಯಸಿದ +ಬಯಕೆ +ಬಯಲಹುದಲ್ಲದೇ +ಬೇರೆ
ಧನಿಕನಂತೆ+ ಸಮಸ್ತ+ ಸುಖಸಂ
ಜನಿಸುವುದೆ +ಸರ್ವಕ್ಕೆ +ಸಾಧನ
ಧನವದಲ್ಲದೆ+ ಭುವನದೊಳಗ್+ಅನ್ಯತ್ರವಿಲ್ಲೆಂದ

ಅಚ್ಚರಿ:
(೧) ನುಡಿವಾಕ್ಯ ನೀಡುವ ಪದ್ಯ – ಸರ್ವಕ್ಕೆ ಸಾಧನ ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ
(೨) ಧನಿಕ, ನಿರ್ಧನಿಕ – ವಿರುದ್ಧ ಪದ
(೩) ಬಯಕೆ, ಬಯಸು – ಸಾಮ್ಯಾರ್ಥ ಪದಗಳು
(೪) ‘ಸ’ಕಾರದ ಪದಗಳ ಜೋಡಣೆ – ಸಮಸ್ತ ಸುಖಸಂಜನಿಸುವುದೆ ಸರ್ವಕ್ಕೆ ಸಾಧನ

ಪದ್ಯ ೫೫: ಧೃತರಾಷ್ಟ್ರನ ಉಳಿದ ಪ್ರಶ್ನೆಗಳಾವುವು?

ಅರ್ಥದಿಂದಹ ಸಿದ್ಧಿಯಾವುದ
ನರ್ಥವೆಂಬುದದೇನು ತನಗಾ
ಸ್ವಾರ್ಥವೇನು ಪರಾರ್ಥವಾವುದು ಧರ್ಮಮಾರ್ಗದೊಳು
ತೀರ್ಥವಾವುದು ವಿಪ್ರರೊಳಗೆ ಸ
ಮರ್ಥರಾರು ಸಭಾಸ್ಥಳದೊಳಾ
ವ್ಯರ್ಥಜೀವಿಗಳಾರು ಬಿತ್ತರಿಸೆಂದನಾ ಭೂಪ (ಉದ್ಯೋಗ ಪರ್ವ, ೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ಧನದಿಂದ ಏನು ಪ್ರಯೋಜನ? ಅನರ್ಥದಿಂದ ಆಗುವುದಾದರು ಏನು? ತನ್ನ ಸ್ವಾರ್ಥವು ಯಾವುದು? ಮೋಕ್ಷಯಾವುದು? ಧರ್ಮ ಮಾರ್ಗದೊಳು ತೀರ್ಥವಾವುದು? ಬ್ರಾಹ್ಮಣರಲ್ಲಿ ಸಮರ್ಥರು ಯಾರು? ಸಭಾ ಸ್ಥಳಗಳಲ್ಲಿ ಯಾರು ವ್ಯರ್ಥ ಜೀವಿಗಳು ಎಂದು ಧೃತರಾಷ್ಟ್ರನು ಸನತ್ಸುಜಾತರನ್ನು ಕೇಳಿದನು.

ಅರ್ಥ:
ಅರ್ಥ: ಹಣ, ಐಶ್ವರ್ಯ; ಸಿದ್ಧಿ: ಸಾಧನೆ; ಅನರ್ಥ: ಕೇಡು, ಬಡವ; ಸ್ವಾರ್ಥ:ತನ್ನ ಪ್ರಯೋಜನ, ಸ್ವಹಿತ ; ಪರಾರ್ಥ: ಮೋಕ್ಷ, ಮತ್ತೊಬ್ಬರ ಹಣ; ಧರ್ಮ: ಧಾರಣೆ ಮಾಡಿರುವುದು, ನಿಯಮ, ಆಚಾರ; ಮಾರ್ಗ: ದಾರಿ; ತೀರ್ಥ: ಪವಿತ್ರವಾದ ಜಲ; ವಿಪ್ರ: ಬ್ರಾಹ್ಮಣ; ಸಮರ್ಥ: ಯೋಗ್ಯ; ಸಭಾ:ದರ್ಬಾರು, ಪರಿಷತ್ತು, ಗೋಷ್ಠಿ; ಸ್ಥಳ: ಜಾಗ; ಅವ್ಯರ್ಥ: ನಿಷ್ಪ್ರಯೋಜಕ; ಬಿತ್ತರಿಸು: ಹೇಳು; ಭೂಪ: ರಾಜ;

ಪದವಿಂಗಡಣೆ:
ಅರ್ಥದಿಂದಹ +ಸಿದ್ಧಿಯಾವುದ್
ಅನರ್ಥ+ವೆಂಬುದದೇನು+ ತನಗಾ
ಸ್ವಾರ್ಥವೇನು +ಪರಾರ್ಥವಾವುದು +ಧರ್ಮ+ಮಾರ್ಗದೊಳು
ತೀರ್ಥವಾವುದು+ ವಿಪ್ರರೊಳಗೆ +ಸ
ಮರ್ಥರಾರು +ಸಭಾಸ್ಥಳದೊಳ್
ಅವ್ಯರ್ಥ+ಜೀವಿಗಳಾರು+ ಬಿತ್ತರಿಸೆಂದನಾ +ಭೂಪ

ಅಚ್ಚರಿ:
(೧) ಅರ್ಥ, ಅನರ್ಥ, ಅವ್ಯರ್ಥ, ಸ್ವಾರ್ಥ, ತೀರ್ಥ, ಸಮರ್ಥ, ಪರಾರ್ಥ – ಪ್ರಾಸ ಪದಗಳು