ಪದ್ಯ ೫೦: ಯಾರನ್ನು ಪೂಜಿಸಬೇಕು?

ಮೆರೆವ ಸಚರಾಚರವಿದೆಲ್ಲವ
ನಿರುತ ತಾನೆಂದರಿತು ತನ್ನಿಂ
ದಿರವು ಬೇರಿಲ್ಲೆಂಬ ಕಾಣಿಕೆ ಯಾವನೊಬ್ಬನೊಳು
ಇರುತಿಹುದದಾವಗಮವನು ಸ
ತ್ಪುರುಷನಾತನ ಪೂಜಿಸುವುದಿಹ
ಪರದ ಸುಕೃತವ ಬಯಸುವವರವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸಮಸ್ತ ಚರಾಚರಗಳೆಲ್ಲವೂ ತಾನೇ ಎಂದು ಅರಿತು ತನ್ನನ್ನು ಬಿಟ್ಟು ಬೇರೆ ಯಾವುದೂ ಇಲ್ಲವೆಂದು ಯಾವನು ಯಾವಾಗಲೂ ಕಾಣುವನೋ ಅವನೇ ಸತ್ಪುರುಷ. ಇಹಪರದಲ್ಲಿ ಲೇಸನ್ನು ಬಯಸುವವರು ಅವನನ್ನು ಪೂಜಿಸಬೇಕು ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಮೆರೆ: ಹೊಳೆ, ಪ್ರಕಾಶಿಸು; ಚರಾಚರ: ಚಲಿಸುವ ಮತ್ತು ಚಲಿಸದ ವಸ್ತುಗಳು; ನಿರುತ: ಸತ್ಯವಾಗಿ; ತಾನೆಂದು: ನಾನು; ಅರಿತು: ತಿಳಿದು; ಇರವು: ಇರುವಿಕೆ, ವಾಸ; ಬೇರೆ: ಅನ್ಯ; ಕಾಣಿಕೆ: ಕೊಡುಗೆ; ಇರುತಿಹುದು: ಇದೆಯೋ; ಸತ್ಪುರುಷ: ಸಜ್ಜನ; ಪೂಜಿಸು: ಅರ್ಚಿಸು; ಇಹಪರ: ಈ ಲೋಕ ಮತ್ತು ಪರ ಲೋಕ; ಸುಕೃತ: ಒಳ್ಳೆಯ ಕೆಲಸ; ಬಯಸು: ಕೋರು; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮೆರೆವ +ಸಚರಾಚರವ್+ಇದೆಲ್ಲವ
ನಿರುತ+ ತಾನೆಂದರಿತು +ತನ್ನಿಂದ್
ಇರವು +ಬೇರಿಲ್ಲೆಂಬ +ಕಾಣಿಕೆ +ಯಾವನೊಬ್ಬನೊಳು
ಇರುತಿಹುದ್+ಅದ್+ಆವಗಮ್+ಅವನು +ಸ
ತ್ಪುರುಷನ್+ಆತನ+ ಪೂಜಿಸುವುದ್+ಇಹ
ಪರದ +ಸುಕೃತವ +ಬಯಸುವವರ್+ಅವನೀಶ +ಕೇಳೆಂದ

ಅಚ್ಚರಿ:
(೧) ಸತ್ಪುರುಷನ ಲಕ್ಷಣ – ಮೆರೆವ ಸಚರಾಚರವಿದೆಲ್ಲವ ನಿರುತ ತಾನೆಂದರಿತು ತನ್ನಿಂದಿರವು ಬೇರಿಲ್ಲೆಂಬ ಕಾಣಿಕೆ ಯಾವನೊಬ್ಬನೊಳು ಇರುತಿಹುದದಾವಗಮವನು ಸತ್ಪುರುಷನು
(೨) ಸತ್ಪುರುಷ, ಸುಕೃತ, ಸಚರಾಚರ – ‘ಸ’ಕಾರದ ಪದಗಳ ಬಳಕೆ

ಪದ್ಯ ೪೯: ಮಾಹಿಷಿಕಯನಾರು?

ಕುಲಮಹಿಷಿ ದುರ್ಮಾರ್ಗ ಮುಖದೊಳು
ಗಳಿಸಿದರ್ಥವನುಂಡು ಕಾಲವ
ಕಳೆವ ನಿರ್ಭಾಗ್ಯರು ಕಣಾ ಮಾಹಿಷಿಕರೆಂಬುವರು
ಇಳೆಯೊಳಿವರೊಡನಾಡಿದವದಿರು
ಗಳಿಗೆ ನರಕಾರ್ಣವದೊಳಾಳುತೆ
ಮುಳುಗುತಿಹುದಲ್ಲದೆ ವಿಚಾರಿಸೆ ಸುಗತಿಯಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪತ್ನಿಯು ದುರ್ಮಾರ್ಗದಿಂದ ಗಳಿಸಿದ ಹಣದಿಂದ ಬದುಕುವ ನಿರ್ಭಾಗ್ಯನೇ ಮಾಹಿಷಿಕ. ಇವನೊಡನಡಿದವರಿಗೆ ನರಕ ಸಮುದ್ರದಲ್ಲಿ ಮುಳುಗುವುದೇ ಗತಿ, ಅಂತಹವನಿಗೆ ಸದ್ಗತಿ ದೊರೆಯುವುದಿಲ್ಲ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಕುಲ: ವಂಶ; ಮಹಿಷಿ: ರಾಣಿ; ದುರ್ಮಾರ್ಗ: ಕೆಟ್ಟ ದಾರಿ; ಮುಖ: ಆನನ; ಗಳಿಸು: ಸಂಪಾದಿಸು; ಅರ್ಥ: ಐಶ್ವರ್ಯ; ಉಂಡು: ತಿಂದು; ಕಾಲ: ಸಮಯ; ಕಳೆವ: ದೂಡು; ನಿರ್ಭಾಗ್ಯ: ಅಮಂಗಳ; ಮಾಹಿಷಿಕ: ಹೆಂಡತಿಯನ್ನು ವ್ಯಭಿಚಾರಕ್ಕೆ ಪ್ರೇರಿಸಿ ಹಣಗಳಿಸುವ ಗಂಡ; ಇಳೆ: ಭೂಮಿ; ಇರುಗಳಿಗೆ: ಸ್ವಲ್ಪ ಸಮಯ; ನರಕ: ಅಧೋಲೋಕ; ಅರ್ಣವ: ಸಮುದ್ರ; ಅಳು: ದುಃಖ; ಮುಳುಗು: ನೀರಿನಲ್ಲಿ ಮೀಯು, ಹುದುಗು; ವಿಚಾರಿಸು: ಚಿಂತಿಸು, ಯೋಚಿಸು; ಸುಗತಿ: ಒಳ್ಳೆಯ ಗತಿ;

ಪದವಿಂಗಡಣೆ:
ಕುಲಮಹಿಷಿ+ ದುರ್ಮಾರ್ಗ +ಮುಖದೊಳು
ಗಳಿಸಿದ್+ಅರ್ಥವನ್+ಉಂಡು +ಕಾಲವ
ಕಳೆವ +ನಿರ್ಭಾಗ್ಯರು +ಕಣಾ +ಮಾಹಿಷಿಕ+ರೆಂಬುವರು
ಇಳೆಯೊಳ್+ಇವರೊಡನ್+ಆಡಿದವ್+ಇದಿರು
ಗಳಿಗೆ+ ನರಕ+ಅರ್ಣವದೊಳ್+ಅಳುತೆ
ಮುಳುಗುತಿಹುದಲ್ಲದೆ+ ವಿಚಾರಿಸೆ+ ಸುಗತಿಯಿಲ್ಲೆಂದ

ಅಚ್ಚರಿ:
(೧) ನರಕಾರ್ಣವ – ನರಕ ಸಾಗರ ಪದದ ಬಳಕೆ
(೨) ಮಾಹಿಷಿಕನ ಅರ್ಥ ತಿಳಿಸುವ ಮೊದಲ ಮೂರು ಸಾಲು
(೩) ೪ ಸಾಲು ಒಂದೇ ಪದವಾಗಿ ಮೂಡಿರುವುದು – ಇಳೆಯೊಳಿವರೊಡನಾಡಿದವದಿರು
(೪) ಕುಲಮಹಿಷಿ – ಹೆಂಡತಿಗೆ ಉಪಯೋಗಿಸಿದ ಪದ

ಪದ್ಯ ೪೮: ಯಾರನ್ನು ಕಂಡರೆ ಭಾಗ್ಯವು ನಾಶವಾಗುತ್ತದೆ?

ಮೊದಲೊಳಾ ಮಾಹಿಷಕನನು ಮ
ಧ್ಯದಲಿ ವೃಷಲೀ ವಲ್ಲಭನ ನಂ
ತ್ಯದೊಳು ವಾರ್ಧುಷಿಕನನು ಕಂಡವರುಗಳ ಭಾಗ್ಯನಿಧಿ
ಕದಡಿ ಹರಿವುದು ಕಂಡ ಮುಖದಲಿ
ಸದಮಳಿತ ಶಾಸ್ತ್ರಾರ್ಥನಿರ್ಣಯ
ವಿದನರಿತು ನಡೆವುದು ನಯವು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ಹೆಂಡತಿಯನ್ನು ವ್ಯಭಿಚಾರಕ್ಕೆ ಬಿಡುವವ, ವೃಷಲೀ ಗಂಡನು ಮತ್ತು ಬಡ್ಡಿ ವ್ಯವಹಾರದವನು, ಈ ಮೂವರನ್ನು ನೋಡಿದವರ ಭಾಗ್ಯವು ಕದಡಿ ನಾಶವಾಗುತ್ತದೆ ಎಂಬುದು ಶಾಸ್ತ್ರ ಹೇಳುವ ಮಾತು, ಇದನ್ನು ಅರಿತು ನಡೆಯುವುದು ಒಳ್ಳೆಯದು ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಮಾಹೀಷಿಕ: ಹೆಂಡತಿಯನ್ನು ವ್ಯಭಿಚಾರಕ್ಕೆ ಪ್ರೇರಿಸಿ ಹಣ ಪಡೆಯುವವ; ಮಧ್ಯ: ನಡು; ಮೊದಲು: ಆದಿ; ವೃಷಲಿ:ಮದುವೆ ಯಾಗುವ ಮುನ್ನ ಋತುಮತಿಯಾಗುವ ಕನ್ಯೆ, ಶೂದ್ರ ಸ್ತ್ರೀ;
ವಲ್ಲಭ: ಗಂಡ; ಅಂತ್ಯ: ಕೊನೆ; ವಾರ್ಧುಷಿಕ: ಬಡ್ಡಿ ವ್ಯವಹಾರವನ್ನು ಮಾಡುವವ; ಕಂಡು: ನೋಡಿ; ಭಾಗ್ಯ: ಮಂಗಳ; ನಿಧಿ: ಸಂಪತ್ತು, ಐಶ್ವರ್ಯ; ಕದಡು: ಹರಡು; ಹರಿ: ಸಾಗು; ಕಂಡ: ನೋಡಿದ; ಮುಖ: ಆನನ; ಅಮಳ: ನಿರ್ಮಲ; ಶಾಸ್ತ್ರ: ದರ್ಶನ; ಪ್ರಮಾಣ ಗ್ರಂಥ; ನಿರ್ಣಯ: ನಿರ್ಧಾರ; ಅರಿ: ತಿಳಿ; ನಡೆ: ಸಾಗು; ನಯ: ನುಣುಪು, ಮೃದುತ್ವ, ಅಂದ; ಭೂಪಾಲ: ರಾಜ;

ಪದವಿಂಗಡಣೆ:
ಮೊದಲೊಳಾ+ ಮಾಹಿಷಕನನು +ಮ
ಧ್ಯದಲಿ +ವೃಷಲೀ ವಲ್ಲಭನನ್+ಅಂತ್ಯ
ದೊಳು +ವಾರ್ಧುಷಿಕನನು+ ಕಂಡ್+ಅರುಗಳ +ಭಾಗ್ಯನಿಧಿ
ಕದಡಿ +ಹರಿವುದು +ಕಂಡ +ಮುಖದಲಿ
ಸದಮಳಿತ+ ಶಾಸ್ತ್ರಾರ್ಥ+ನಿರ್ಣಯವ್
ಇದನರಿತು +ನಡೆವುದು +ನಯವು +ಭೂಪಾಲ +ಕೇಳೆಂದ

ಅಚ್ಚರಿ:
(೧) ಮಾಹಿಷಕ, ವೃಷಲೀ ವಲ್ಲಭ, ವಾರ್ಧುಷಿಕ – ಅಪಾತ್ರರಾರು ಎಂಬ ಧೃತರಾಷ್ಟ್ರನ ಪ್ರಶ್ನೆಗೆ ನೀಡಿದ ಉತ್ತರ
(೨) ಕಂಡ – ೩, ೪ ಸಾಲಿನ ೩ನೇ ಪದ
(೩) ೧ ಸಾಲಿನ ೩ ಪದ – ‘ಮ’ಕಾರದಿಂದ ಪ್ರಾರಂಭ