ಪದ್ಯ ೩೬: ಒಂಬತ್ತರ ಮಹತ್ವದಿಂದ ಮುಕ್ತಿಮಾರ್ಗವನ್ನು ಹೇಗೆ ಸಾಧಿಸಬಹುದು?

ನವನವ ವ್ಯೂಹಂಗಳ ಬುಜೋ
ದ್ಭವನ ಪಾಳಿ ವಿಖಂಡ ನವರಸ
ನವವಿಧ ಗ್ರಹದಧಿಕ ನಾಟಕ ಲಕ್ಷಣವನರಿದು
ನವವಿಧಾಮಳ ಭಕ್ತಿರಸವನು
ಸವಿದು ನಿತ್ಯಾನಿತ್ಯವಸ್ತುವ
ನವರಸವನಾರೈದು ನಡೆವುದೆ ಪರಮಮತವೆಂದ (ಉದ್ಯೋಗ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಬ್ರಹ್ಮ ಸೃಷ್ಟಿಯಲ್ಲಿ ಹೊಸ ಹೊಸದಾಗಿ ಉಂಟಾಗುವ ವ್ಯವಸ್ಥೆಗಳು, ಅವುಗಳ ವಿಸರ್ಜನೆ, ನವರಸಗಳಾದ ಶೃಂಗಾರ, ವೀರ, ಕರುಣ, ಅದ್ಭುತ, ಹಾಸ್ಯ, ಭಯಾನಕ, ಭೀಭತ್ಸ, ಶಾಂತ; ನವಗ್ರಹಗಳಾದ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಇದರಿಂದುಟಾದ ಲೋಕನಾಟಕ ಲಕ್ಷಣಗಳನ್ನರಿತು ಅದು ನಿಸ್ಸಾರವೆಂದು ನಿಶ್ಚಯಿಸಿ ನವವಿಧ ಭಕ್ತಿಮಾರ್ಗಗಳಾದ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನೆ, ವಂದನೆ, ದಸ್ಯ, ಸಖ್ಯ, ಆತ್ಮನಿವೇದನೆ ಇವುಗಳಲ್ಲಿ ನಡೆಯುವುದೇ ಹೆಚ್ಚಿನ ಶ್ರೇಷ್ಠವಾದ ಮಾರ್ಗ.

ಅರ್ಥ:
ನವ: ಹೊಸ, ನವೀನ; ವ್ಯೂಹ:ಗುಂಪು, ಸಮೂಹ, ತಂತ್ರ; ಅಬುಜ:ತಾವರೆ; ಅಬುಜೋದ್ಭವ: ಬ್ರಹ್ಮ; ಪಾಳಿ:ಸರದಿ, ಸಾಲು; ಖಂಡ:ತುಂಡು, ಚೂರು; ನವ: ಒಂಬತ್ತು; ರಸ: ರುಚಿ, ಆನಂದ; ವಿಧ: ರೀತಿ; ಗ್ರಹ: ಆಕಾಶಚರಗಳು; ಅಧಿಕ: ಹೆಚ್ಚು; ನಾಟಕ: ಅಭಿನಯ ಪ್ರಧಾನವಾದ ದೃಶ್ಯ ಪ್ರಬಂಧ,; ಲಕ್ಷಣ:ಗುರುತು, ಚಿಹ್ನೆ; ಅರಿ: ತಿಳಿ; ಅಮಳ: ನಿರ್ಮಲ; ಭಕ್ತಿ:ರುಹಿರಿಯರಲ್ಲಿ ತೋರುವ ನಿಷ್ಠೆ; ಸವಿ: ಸೇವಿಸು; ನಿತ್ಯ: ಯಾವಾಗಲು; ಅನಿತ್ಯ: ಕ್ಷಣಿಕವಾದುದು; ವಸ್ತು: ಪದಾರ್ಥ; ಅರಿ: ತಿಳಿ; ನಡೆ: ಹೆಜ್ಜೆ ಹಾಕು; ಪರಮ: ಶ್ರೇಷ್ಠ; ಮತ: ಅಭಿಪ್ರಾಯ, ಆಶಯ;

ಪದವಿಂಗಡಣೆ:
ನವನವ +ವ್ಯೂಹಂಗಳ್+ಅಬುಜೋದ್
ಭವನ +ಪಾಳಿ +ವಿಖಂಡ +ನವರಸ
ನವವಿಧ+ ಗ್ರಹದ್+ಅಧಿಕ+ ನಾಟಕ+ ಲಕ್ಷಣವನ್+ಅರಿದು
ನವವಿಧ+ಅಮಳ +ಭಕ್ತಿ+ರಸವನು
ಸವಿದು +ನಿತ್ಯ+ ಅನಿತ್ಯ+ವಸ್ತುವ
ನವರಸವನಾರೈದು+ ನಡೆವುದೆ+ ಪರಮ+ಮತವೆಂದ

ಅಚ್ಚರಿ:
(೧) ನವ – ೬ ಬಾರಿ ಪ್ರಯೋಗ
(೨) ನವ ವ್ಯೂಹಂಗಳು, ಗ್ರಹ, ಭಕ್ತಿ, ರಸ – ೯ನ್ನು ಸೂಚಿಸುವ ಪದಗಳ ಬಳಕೆ

ಪದ್ಯ ೩೫: ಎಂಟರ ಮಹತ್ವವನ್ನರಿತು ಜೀವನವನ್ನು ಹೇಗೆ ಸಾರ್ಥಕಗೊಳಿಸಬೇಕು?

ಕಾಯದಿಂ ದಂಡ ಪ್ರಣಾಮವಿ
ಧೇಯ ವರ್ಚನೆ ಯೋಗಸಿದ್ಧಿನಿ
ಕಾಯ ವಾಯತ ಭೋಗದ ಸ್ಥಿತಿ ಗತಿಯನಾರೈದು
ಆಯವನು ವಿರಚಿಸುತೆ ಮೇಲಣ
ಬೀಯವಿದು ತನಗೆಂಬುದನು ನಿ
ರ್ದಾಯದಲಿ ನಿಶ್ಚೈಸಿ ನಡೆವುದು ಪರಮ ಮತವೆಂದ (ಉದ್ಯೋಗ ಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸಾಷ್ಟಾಂಗ ನಮಸ್ಕಾರ (ತಲೆ, ಎದೆ, ದೃಷ್ಟಿ, ಮಾತು, ಮನಸ್ಸು, ಕಾಲು, ಕೈ, ಮೊಣಕಾಲು) ಎಂಟು ಭೋಗಗಳಾದ ಅನ್ನ, ಉದಕ, ತಾಂಬೂಲ, ಪುಷ್ಪ, ಚಂದನ, ವಸ್ತ್ರ, ಶಯ್ಯೆ, ಅಲಂಕಾರ, ಇವುಗಳಿಂದ ಕೊಡುವ ಅರ್ಚನೆ, ಅಷ್ಟ ಸಿದ್ಧಿಗಳು (ಅಣಿಮಾ, ಮಹಿಮಾ,ಲಘಿಮಾ,ಪ್ರಾಪ್ತಿ,ಪ್ರಾಕಾಮ್ಯ,ಈಶಿತ್ವ, ವಶಿತ್ವ) ಇವುಗಳನ್ನು ಅರಿತು ಮುಂದಾಗುವ ವ್ಯಯ ತನಗೆಂಬುದನ್ನು ನಿರ್ಧರಿಸಿ ಮಾಡಿ ನಡೆಯುವುದು ಶ್ರೇಷ್ಠ ತತ್ತ್ವ. (ಈ ಲೋಕದಿಂದ ಹೋಗುವ ಮೊದಲು ದೇವತಾರ್ಚನೆ ನಮಸ್ಕಾರಗಳನ್ನು ನಡೆಸಿ ಜೀವನವನ್ನು ಸಾರ್ಥಕಗೊಳಿಸಬೇಕು) ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಕಾಯ: ತನು, ದೇಹ; ದಂಡ: ಕೋಲು, ದಡಿ; ಪ್ರಣಾಮ: ನಮಸ್ಕಾರ; ವಿಧೇಯ: ಅನುಸರಿಸುವಂಥದ್ದು; ಅರ್ಚನೆ: ಪೂಜೆ; ಯೋಗ: ಹೊಂದಿಸುವಿಕೆ, ಜೋಡಿಸುವಿಕೆ, ಏಕಾಗ್ರತೆ; ಸಿದ್ಧಿ:ಸಾಧನೆ, ಗುರಿಮುಟ್ಟುವಿಕೆ; ನಿಕಾಯ: ಗುಂಪು, ಸಮೂಹ, ದೇಹ; ಆಯತ: ವಿಶಾಲವಾದ; ಭೋಗ: ಸುಖವನ್ನು ಅನುಭವಿಸುವುದು; ಸ್ಥಿತಿ: ಅವಸ್ಥೆ; ಗತಿ: ವೇಗ; ಅರಿ: ತಿಳಿ; ಆಯ: ಗುಟ್ಟು, ಉದ್ದೇಶ; ವಿರಚಿಸು: ಕಟ್ಟು, ನಿರ್ಮಿಸು; ಮೇಲ್: ಮುಂದೆ; ಬೀಯ:ವ್ಯಯ, ಖರ್ಚು; ನಿರ್ದಾಯದ: ಅಖಂಡ; ನಿಶ್ಚೈಸು: ನಿರ್ಧರಿಸು; ನಡೆ: ಹೆಜ್ಜೆ ಹಾಕು; ಪರಮ: ಶ್ರೇಷ್ಠ; ಮತ: ಅಭಿಪ್ರಾಯ, ಆಶಯ; ವಾಯ: ವ್ಯರ್ಥವಾಗು;

ಪದವಿಂಗಡಣೆ:
ಕಾಯದಿಂ +ದಂಡ +ಪ್ರಣಾಮ+ವಿ
ಧೇಯವ್+ ಅರ್ಚನೆ+ ಯೋಗ+ಸಿದ್ಧಿ+ನಿ
ಕಾಯ+ ವಾಯತ +ಭೋಗದ+ ಸ್ಥಿತಿ+ ಗತಿಯನಾರೈದು
ಆಯವನು +ವಿರಚಿಸುತೆ +ಮೇಲಣ
ಬೀಯವಿದು +ತನಗೆಂಬುದನು +ನಿ
ರ್ದಾಯದಲಿ +ನಿಶ್ಚೈಸಿ +ನಡೆವುದು +ಪರಮ +ಮತವೆಂದ

ಅಚ್ಚರಿ:
(೧) ೮ರ ಮಹತ್ವವನ್ನು ತಿಳಿಸುವ ಪದ್ಯ – ಸಾಷ್ಟಾಂಗ ನಮಸ್ಕಾರ, ಅಷ್ಟ ಭೋಗ, ಅಷ್ಟ ಸಿದ್ಧಿ

ಪದ್ಯ ೩೪: ಏಳರ ಮಹತ್ವವನ್ನರಿತವರು ಹೇಗೆ ಮುಕ್ತಿಯನ್ನು ಪಡೆಯುತ್ತಾರೆ?

ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪದಂಗಾ
ವಳಿ ಮುನೀಶ್ವರರುಗಳ ಧಾತುಗಡಣದ ವೇದಿಗಳ
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರೆಸಿಕೊಂಬರು ಮುಕ್ತಿ ಮಾರ್ಗವನು (ಉದ್ಯೋಗ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಏಳರ ಸಂಖ್ಯೇತವನ್ನು ಉಪಮಾನವನ್ನಾಗಿಸಿ ಮುಕ್ತಿಗೆ ದಾರಿಯನ್ನು ಸನತ್ಸುಜಾತರು ಸೂಚಿಸಿದ್ದಾರೆ. ಲವಣ, ಕಬ್ಬಿನಹಾಲು (ಇಕ್ಷು), ಸುರಾ, ಸರ್ಪಿ, ದಧಿ, ಕ್ಷೀರ, ನೀರು ಇವುಗಳಿರುವ ಏಳು ಸಮುದ್ರಗಳು; ಸಪ್ತ ಮಾತೃಕೆಯರಾದ ಬಾಹ್ಮಿ, ಮಾಹೇಶ್ವರಿ, ವಾರಾಹಿ, ವೈಷ್ಣವಿ, ಇಂದ್ರಾಣಿ, ಕೌಮಾರಿ, ಚಾಮುಂಡಾ; ಏಳು ವಾರಗಳಾದ ಭಾನು, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ; ಏಳು ಎತ್ತರದ ಪರ್ವತಗಳಾದ ಮಹೇಂದ್ರ, ಮಲಯ, ಸಹ್ಯ, ಶುಕ್ತಿಮತ್, ಋಕ್ಷ, ವಿಂಧ್ಯ, ಪಾರಿಯಾತ್ರ; ಸಪ್ತ ವಿಭಕ್ತಿಗಳು, ಸಪ್ತ ದ್ವೀಪಗಳಾದ ಜಂಬೂ, ಪ್ಲಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ, ಪುಷ್ಕರ; ಸಪ್ತ ಋಷಿಗಳಾದ ಅತ್ರಿ, ವಸಿಷ್ಠ, ಕಾಶ್ಯಪ, ಗೌತಮ, ಭಾರದ್ವಾಜ, ವಿಶ್ವಾಮಿತ್ರ, ಜಮದಗ್ನಿ; ದೇಹದಲ್ಲಿನ ಏಳು ಧಾತುಗಳಾದ ರಸ, ರಕ್ತ, ಮಾಂಸ, ಮೇಧಸ್ಸು, ಮಜ್ಜೆ, ಅಸ್ಥಿ, ಶುಕ್ರ, ಇವುಗಳ ಕಾಲದ ನಡೆ ರೀತಿಗಳನ್ನು ತಿಳಿದು ಯಾರು ಬಾಳುವರೋ ಅವರು ಮುಕ್ತಿಯ ಮಾರ್ಗಾವನ್ನು ಸೇರುತ್ತಾರೆ ಎಂದು ತಿಳಿಸಿದರು.

ಅರ್ಥ:
ಜಲಧಿ: ಸಮುದ್ರ, ಸಾಗರ; ಮಾತೃಕೆ: ಮಾತೆ, ತಾಯಿ; ವಾರ: ದಿನ; ಗಿರಿ: ಬೆಟ್ಟ; ಕುಲಗಿರಿ: ಎತ್ತರದ ಪರ್ವತಗಳು; ವಿಭಕ್ತಿ:ವ್ಯಾಕರಣದಲ್ಲಿ ಪ್ರಕೃತಿಗೆ ಪ್ರತ್ಯಯವು ಸೇರಿ ಸಿದ್ಧಿಸುವ ಅನ್ವಯ, ಏಳು ಎಂಬ ಸಂಕೇತ ಪದ; ದ್ವೀಪ: ಸಮುದ್ರದಿಂದ ಆವರಿಸಿದ ಭೂಭಾಗ; ಮುನೀಶ್ವರ: ಋಷಿ; ಧಾತು: ಮೂಲವಸ್ತು; ವೇದಿ:ಪಂಡಿತ, ವಿದ್ವಾಂಸ; ತಿಳಿ: ಅರಿತು; ಕಾಲ: ಸಮಯ; ಗತಿ: ಹರಿವು, ವೇಗ; ಗಮಕ: ಕ್ರಮ, ಅಣಿ; ಅರಿ: ತಿಳಿ; ನಡೆ: ಹೆಜ್ಜೆ ಹಾಕು; ನಿರ್ಮಳ: ನೆಮ್ಮದಿ, ನಿರಾಳ; ಎಡಹದೆ: ಬೀಳದೆ, ಮುಗ್ಗರಿಸದೆ; ಬೆರಸು: ಸೇರಿಸು; ಮುಕ್ತಿ: ಮೋಕ್ಷ, ಕೈವಲ್ಯ; ಮಾರ್ಗ: ದಾರಿ;

ಪದವಿಂಗಡಣೆ:
ಜಲಧಿ +ಮಾತೃಕೆ +ವಾರ +ಕುಲಗಿರಿ
ಗಳು+ ವಿಭಕ್ತಿ +ದ್ವೀಪದಂಗಾ
ವಳಿ +ಮುನೀಶ್ವರರುಗಳ +ಧಾತುಗಡಣದ+ ವೇದಿಗಳ
ತಿಳಿದು +ಕಾಲದ +ಗತಿಯ +ಗಮಕಂ
ಗಳನರಿದು +ನಡೆವವರುಗಳು +ನಿ
ರ್ಮಳದಲ್+ಎಡಹದೆ +ಬೆರೆಸಿಕೊಂಬರು +ಮುಕ್ತಿ +ಮಾರ್ಗವನು

ಅಚ್ಚರಿ:
(೧) ೭ನ್ನು ಸೂಚಿಸುವ ಪದಗಳ ಬಳಕೆ – ಜಲಧಿ, ಮಾತೃಕೆ, ವಾರ, ಕುಲಗಿರಿ, ವಿಭಕ್ತಿ, ದ್ವೀಪ, ಮುನೀಶ್ವರ, ಧಾತು