ಪದ್ಯ ೩೩: ಆರರ ಮಹಿಮೆಯನ್ನರಿತು ಜೀವನ್ಮುಕ್ತಿಯನ್ನು ಹೇಗೆ ಸಾಧಿಸಬಹುದು?

ಆರುಗುಣ ಋತುವಾರು ವರ್ಗವ
ದಾರು ದರ್ಶನವಾರುವಂಗವ
ದಾರು ಭೇದದ ಬಗೆಯನರಿದುತ್ಕೃಷ್ಟ ಮಾರ್ಗದೊಳು
ತೋರುವೀ ಮಾಯಾ ಪ್ರಪಂಚವ
ಮೀರಿ ಕೇಡಿಲ್ಲದ ಪದವ ಕೈ
ಸೂರೆಗೊಂಬುದು ಪರಮ ಮಂತ್ರವಿದೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ರಾಜನಿಗಿರಬೇಕಾದ ಆರುಗುಣಗಳಾದ ಸಂಧಿ, ವಿಗ್ರಹ, ಯಾನ, ಆಸನ, ದ್ವೈಧ, ಆಶ್ರಯ; ಆರು ಋತುಗಳಾದ ವಸಂತ, ಗೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ; ಆರು ವೇದಾಂಗಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ, ಕಲ್ಪ; ಇವುಗಳಲ್ಲಿರುವ ವೈಶಿಷ್ಟ್ಯವನ್ನರಿತು, ಉತ್ತಮ ಮಾರ್ಗದಲ್ಲಿ ನಡೆದು ಮಾಯಾ ಪ್ರಪಂಚವನ್ನು ಮೀರಿ ಕೇಡಿಲ್ಲದ ಜೀವನ್ಮುಕ್ತಿಯನ್ನು ಸಾಧಿಸುವುದೇ ಅತಿ ಹೆಚ್ಚಿನ ಮಂತ್ರ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಆರು: ಷಟ್; ಗುಣ: ಸ್ವಭಾವ, ನಡತೆ; ಋತು: ಕಾಲ, ಪ್ರಕೃತಿಯಲ್ಲಿ ಬರುವ ಆರು ಕಾಲ; ವರ್ಗ: ಗುಂಪು, ಸಮೂಹ, ವಿಭಾಗ; ದರ್ಶನ: ನೋಡುವುದು, ಅವಲೋಕನ; ಅಂಗ: ಭಾಗ; ಭೇದ: ಬಗೆ, ವಿಧ, ಪ್ರಕಾರ; ಬಗೆ: ರೀತಿ, ತರಹ; ಉತ್ಕೃಷ್ಟ: ಶ್ರೇಷ್ಠ; ಮಾರ್ಗ: ದಾರಿ; ತೋರು: ಕಾಣಿಸು; ಮಾಯ: ಇಂದ್ರಜಾಲ; ಪ್ರಪಂಚ: ಲೋಕ; ಮೀರಿ: ದಾಟಿ; ಕೇಡು: ಕೆಡಕು; ಪದ: ಜಾಗ, ಸ್ಥಾನ; ಸೂರೆ:ಸುಲಿಗೆ; ಕೈಸೂರೆ: ಲೂಟಿ; ಪರಮ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಮುನಿ: ಋಷಿ;

ಪದವಿಂಗಡಣೆ:
ಆರುಗುಣ +ಋತುವ್+ಆರು+ ವರ್ಗವದ್
ಆರು +ದರ್ಶನವ್+ಆರುವ್+ಅಂಗವದ್
ಆರು +ಭೇದದ +ಬಗೆಯನ್+ಅರಿತ್+ಉತ್ಕೃಷ್ಟ+ ಮಾರ್ಗದೊಳು
ತೋರುವ್+ಈ+ ಮಾಯಾ +ಪ್ರಪಂಚವ
ಮೀರಿ +ಕೇಡಿಲ್ಲದ +ಪದವ +ಕೈ
ಸೂರೆಗೊಂಬುದು +ಪರಮ +ಮಂತ್ರವಿದೆಂದನಾ +ಮುನಿಪ

ಅಚ್ಚರಿ:
(೧) ಗುಣ, ಋತು, ವೇದಾಂಗ – ಆರರ ಮಹತ್ವವನ್ನು ತಿಳಿಸುವ ಪದಗಳು
(೨) ೫ ಬಾರಿ ಆರು ಪದದ ಬಳಕೆ

ಪದ್ಯ ೩೨: ಯಾವ ರೀತಿ ಬಾಳುವುದು ಉತ್ತಮ ಮಾರ್ಗ?

ಭೂತವರ್ಗ ಪ್ರಾಣವರ್ಗ ನಿ
ಪಾತವಧ್ವರ ಕೃತ್ಯಗಳ ಸಂ
ಜಾತ ಮುಖವಾದಾವರಣ ಸಂಗತಿಯ ಸೋಹೆಗಳ
ಧಾತು ಮೂಲಾದಿಗಳನರಿದು ಸು
ನೀತಿಯಲ್ಲಿಹಪರವ ಗೆಲುವುದು
ಭೂತಳದೊಳುತ್ತಮವಲೇ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಈ ಪದ್ಯದಲ್ಲಿ ಐದನ್ನು ಸೂಚಿಸುವ ವಸ್ತುಗಳ ತಿಳುವಳಿಕೆಯ ಬಗ್ಗೆ ತಿಳಿಸಿದ್ದಾರೆ. ಪಂಚಮಹಾಭೂತಗಳಾದ ಪೃಥ್ವಿ, ಅಪ್ಪು, ತೇಜಸ್ಸು, ವಾಯು, ಆಕಾಶ; ಪಂಚ ಪ್ರಾಣಗಳಾದ ಪ್ರಾಣ,ಅಪಾನ, ವ್ಯಾನ, ಉದಾನ, ಸಮಾನ; ಮನುಷ್ಯಯಜ್ಞ, ಬ್ರಹ್ಮಯಜ್ಞ, ಪಿತೃಯಜ್ಞ, ದೇವಯಜ್ಞ, ಭೂತಯಜ್ಞ ಎಂಬ ಐದು ಅಧ್ವರಗಳು; ಸೃಷ್ಟಿ, ಸ್ಥಿತಿ, ಲಯ, ನಿಗ್ರಹ, ಅನುಗ್ರಹ ಎಂಬ ಐದು ಕೃತ್ಯಗಳು; ಪಂಚ ಧಾತುಗಳಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧ; ಇವನ್ನರಿತು ಒಳ್ಳೆಯ ಮಾರ್ಗವನ್ನನುಸರಿಸಿ ಬಾಳುವುದು ಉತ್ತಮ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ವರ್ಗ: ವಿಭಾಗ, ಗುಂಪು; ಭೂತ: ಐದು ಎಂಬ ಸಂಖ್ಯೆಯ ಸಂಕೇತ, ಮೂಲವಸ್ತು; ಪ್ರಾಣ: ಜೀವ; ನಿಪಾತ:ಕೆಳಕ್ಕೆ ಬೀಳುವುದು; ಅಧ್ವರ: ಯಜ್ಞ; ಕೃತ್ಯ: ಕಾರ್ಯ; ಸಂಜಾತ: ಹುಟ್ಟು; ಮುಖ: ಆನನ; ಆವರಣ: ಮುಸುಕು, ಹೊದಿಕೆ; ಸಂಗತಿ: ಸೇರುವಿಕೆ, ಸಹವಾಸ; ಸೋಹೆ: ಸುಳಿವು, ಸೂಚನೆ; ಧಾತು: ಮೂಲವಸ್ತು, ಖನಿಜ; ಮೂಲ: ಬುಡ; ಆದಿ: ಮುಂತಾದ; ಅರಿ: ತಿಳಿ; ಸುನೀತಿ: ಒಳ್ಳೆಯ ನಡತೆ; ಇಹಪರ: ಈ ಲೋಕ ಮತ್ತು ಪರಲೋಕ; ಗೆಲುವು: ಜಯ; ಭೂತಳ: ಭೂಮಿ; ಉತ್ತಮ: ಶ್ರೇಷ್ಠ; ಕೇಳು: ಆಲಿಸು;

ಪದವಿಂಗಡಣೆ:
ಭೂತವರ್ಗ +ಪ್ರಾಣವರ್ಗ +ನಿ
ಪಾತವ್+ಅಧ್ವರ +ಕೃತ್ಯಗಳ+ ಸಂ
ಜಾತ +ಮುಖವಾದ+ಆವರಣ +ಸಂಗತಿಯ +ಸೋಹೆಗಳ
ಧಾತು +ಮೂಲಾದಿಗಳನ್+ಅರಿದು +ಸು
ನೀತಿಯಲ್+ಇಹಪರವ+ ಗೆಲುವುದು
ಭೂತಳದೊಳ್+ಉತ್ತಮವಲೇ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಭೂತ, ಪ್ರಾಣ, ಅಧ್ವರ, ಕೃತ್ಯ, ಧಾತು ಇವುಗಳ ಪ್ರಭೇದವನ್ನು ತಿಳಿಸುವ ಪದ್ಯ

ಪದ್ಯ ೩೧: ಯಾರು ನಾಲ್ಕುಮುಕ್ತಿಗಳನ್ನು ಹೊಂದುತ್ತಾನೆ?

ವೇದ ನಾಲ್ಕಾಶ್ರಮಮವು ತಾ ನಾ
ಲ್ಕಾದಿ ಮೂರುತಿ ನಾಲ್ಕುವರ್ಣ ವಿ
ಭೇದ ನಾಲ್ಕಾ ಕರಣನಾಲುಕುಪಾಯ ನಾಲ್ಕರಲಿ
ಭೇದಿಸಲು ಪುರುಷಾರ್ಥ ನಾಲ್ಕರ
ಹಾದಿಯರಿದು ವಿಮುಕ್ತ ನಾಲುಕ
ನೈದುವನು ಸಂದೇಹವೇ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಾಲ್ಕು ವೇದಗಳಾದ ಋಗ್, ಯಜುರ್, ಸಾಮ, ಅಥರ್ವಣ; ನಾಲ್ಕು ಆಶ್ರಮಗಳಾದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ; ಬ್ರಹ್ಮ, ವಿಷ್ಣು, ಮಹೇಶ್ವರ, ದೇವಿ ಎಂಬ ನಾಲ್ಕು ಮೂರ್ತಿಗಳು; ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು; ಸಾಮ, ದಾನ, ಭೇದ, ದಂಡ ಎಂಬ ನಾಲ್ಕು ಉಪಾಯಗಳು; ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು; ಇವೆಲ್ಲವನ್ನು ತಿಳಿದವನು ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂಬ ನಾಲ್ಕು ಮೋಕ್ಷಗಳಲ್ಲೊಂದನ್ನು ಪಡೆಯುತ್ತಾನೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ವೇದ: ಆಗಮ; ನಾಲ್ಕು: ಚತುರ್; ಆಶ್ರಮ: ಜೀವನದ ನಾಲ್ಕು ಘಟ್ಟಗಳು; ಮೂರುತಿ: ಆಕಾರ, ಸ್ವರೂಪ; ವರ್ಣ: ಪ್ರಾಚೀನ ಸಾಮಾಜಿಕ ವ್ಯವಸ್ಥೆಯಲ್ಲಿನ ಪಂಗಡ; ವಿಭೇದ: ಒಡೆಯುವಿಕೆ, ವ್ಯತ್ಯಾಸ; ಕರಣ: ಮನಸ್ಸು; ಉಪಾಯ: ಯುಕ್ತಿ; ಭೇದಿಸು: ಒಡೆ, ಸೀಳು; ಪುರುಷಾರ್ಥ: ಮೋಕ್ಷ ಮಾರ್ಗ; ಹಾದಿ: ಮಾರ್ಗ; ಅರಿ: ತಿಳಿ; ವಿಮುಕ್ತ: ಬಿಡುಗಡೆಯಾದವನು, ಮುಕ್ತ; ಐದು: ಪಡೆ; ಸಂದೇಹ: ಸಂಶಯ; ಹೇಳು: ತಿಳಿಸು; ಮುನಿ: ಋಷಿ;

ಪದವಿಂಗಡಣೆ:
ವೇದ +ನಾಲ್ಕು+ಆಶ್ರಮಮವು +ತಾ +ನಾ
ಲ್ಕಾದಿ +ಮೂರುತಿ +ನಾಲ್ಕು+ವರ್ಣ +ವಿ
ಭೇದ +ನಾಲ್ಕಾ +ಕರಣ+ನಾಲುಕ್+ಉಪಾಯ +ನಾಲ್ಕರಲಿ
ಭೇದಿಸಲು+ ಪುರುಷಾರ್ಥ +ನಾಲ್ಕರ
ಹಾದಿಯರಿದು+ ವಿಮುಕ್ತ +ನಾಲುಕನ್
ಐದುವನು +ಸಂದೇಹವೇ +ಹೇಳೆಂದನಾ +ಮುನಿಪ

ಅಚ್ಚರಿ:
(೧) ೮ ಬಾರಿ ನಾಲ್ಕು ಪದದ ಬಳಕೆ – ೩ ಬಾರಿ ೩ನೇ ಸಾಲಿನಲ್ಲಿ
(೨) ವೇದ, ಆಶ್ರಮ, ಮೂರುತಿ, ವರ್ಣ, ಕರಣ, ಉಪಾಯ, ಪುರುಷಾರ್ಥ, ಮುಕ್ತಿ – ನಾಲ್ಕರ ಸಂದೇಶ ಸಾರುವ ಪದಗಳು

ಪದ್ಯ ೩೦: ಯಾರಿಗೆ ಎಲ್ಲವೂ ಸಾಧ್ಯವಾಗುವುದು?

ಕರಣಗುಣ ಸಂಹರಣ ಸಂಧ್ಯಾಂ
ತರದವಸ್ಥಾಂತರದ ಲೋಕೋ
ತ್ಕರದ ತಾಪತ್ರಯದ ಲಕ್ಷಣ ಲಕ್ಷ್ಯಗಳನರಿದು
ಪರಿವಿಡಿಯ ಮೂರ್ತಿತ್ರಯಂಗಳ
ಗುರುಲಘುವನಾರೈದು ನಡೆವಂ
ಗರಿದೆನಿಸುವುದದಾವುದೈ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಜ್ಞಾನೇಂದ್ರಿಯವಾದ ಮನಸ್ಸಿನ ಮೂರುಗುಣಗಳಾದ ಹರ್ಷ, ವಿಷಾದ, ನಿರ್ವೇದ, ದಿನದ ಮೂರು ಸಂಧ್ಯಾಕಾಲಗಳಾದ ಮುಂಜಾನೆ, ಮಧ್ಯಾನ, ಸಂಜೆ, ಮೂರು ಲೋಕಗಳಾದ ದೇವ, ಮರ್ತ್ಯ, ಪಾತಾಳ, ಆಧಿದೈವಿಕ, ಆಧಿಭೌತಿಕ, ಆಧ್ಯಾತ್ಮಿಕ ಎಂಬ ಮೂರು ತಾಪತ್ರಯಗಲು, ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ಮೂರು ದೇವರುಗಳು, ಇವೆಲ್ಲರ ಲಕ್ಷಣಗಳನ್ನರಿತು ಮಾಡಬೇಕಾದುದೇನೆಂದು ತಿಳಿದು ಅದರಂತೆ ನಡೆಯುವವನಿಗೆ ಅಸಾಧ್ಯವಾವುದಾದರು ಏನು ಎಂದು ಸನತ್ಸುಜಾತರು ಕೇಳಿದರು.

ಅರ್ಥ:
ಕರಣ: ಜ್ಞಾನೇಂದ್ರಿಯ; ಗುಣ: ನಡತೆ, ಸ್ವಭಾವ; ಸಂಹರಣ: ಅಳಿವು, ನಾಶ; ಸಂಧ್ಯಾ: ದಿನದ ತ್ರಿಕಾಲ; ಅಂತರ: ನಡುವೆ; ಅವಸ್ಥ: ಸ್ಥಿತಿ; ಲೋಕ: ಜಗತ್ತು; ಉತ್ಕರ: ರಾಶಿ, ಸಮೂಹ; ತಾಪತ್ರಯ: ತೊಂದರೆ; ಲಕ್ಷಣ: ಗುರುತು, ಚಿಹ್ನೆ; ಲಕ್ಷ್ಯ: ದೃಷ್ಟಾಂತ; ಅರಿ: ತಿಳಿ; ಪರಿವಿಡಿ: ವ್ಯವಸ್ಥಿತವಾದ ಕ್ರಮ, ಅನುಕ್ರಮ; ಮೂರ್ತಿ: ಆಕಾರ, ಸ್ವರೂಪ; ತ್ರಯ: ಮೂರು; ಗುರು: ದೊಡ್ಡ, ಅತಿಶಯ; ಲಘು: ಚಿಕ್ಕದಾದ,ಹಗುರ; ಆರೈ: ಉಪಚರಿಸು; ನಡೆ: ಹೋಗು;ಅರಿ: ತಿಳಿ; ಹೇಳು: ತಿಳಿಸು; ಮುನಿ: ಋಷಿ;

ಪದವಿಂಗಡಣೆ:
ಕರಣಗುಣ+ ಸಂಹರಣ+ ಸಂಧ್ಯಾಂ
ತರದ+ಅವಸ್ಥಾಂತರದ+ ಲೋಕ
ಉತ್ಕರದ +ತಾಪತ್ರಯದ +ಲಕ್ಷಣ +ಲಕ್ಷ್ಯಗಳನರಿದು
ಪರಿವಿಡಿಯ +ಮೂರ್ತಿತ್ರಯಂಗಳ
ಗುರುಲಘುವನ್+ಆರೈದು +ನಡೆವಂಗ್
ಅರಿದ್+ಎನಿಸುವುದ್+ಆವುದೈ +ಹೇಳೆಂದನಾ +ಮುನಿಪ

ಅಚ್ಚರಿ:
(೧) ಮೂರರ ಹಲವಾರು ಪ್ರಾಕಾರಗಳನ್ನು ತಿಳಿಸುವ ಪದ್ಯ
(೨) ‘ದ’ಇಂದ ಕೊನೆಗೊಳ್ಳುವ ನಾಲ್ಕು ಪದಗಳ ಸಾಲು – ಸಂಧ್ಯಾಂತರದ ಅವಸ್ಥಾಂತರದ ಲೋಕೋತ್ಕರದ ತಾಪತ್ರಯದ
(೩) ಲಕ್ಷಣ ಲಕ್ಷ್ಯ – ಪದಗಳ ಬಳಕೆ
(೪) ತ್ರಯ ಪದದ ಬಳಕೆ – ತಾಪತ್ರಯ, ಮೂರ್ತಿತ್ರಯ