ಪದ್ಯ ೨೨: ಯಾರಿಗೆ ವಿರೋಧ ಬರಲು ಸಾಧ್ಯವಿಲ್ಲ?

ನಷ್ಟವಿದು ಸಂಸಾರದೊಳಗು
ತ್ಕೃಷ್ಟವಿದು ಮುನ್ನಾದಿಮಾರ್ಗದ
ಸೃಷ್ಟಿಯಿದು ಲೋಕಾಂತರದ ಸುಖ ದುಃಖದೇಳಿಗೆಯ
ಹುಟ್ಟು ಮೆಟ್ಟಿನ ಕಾಲ ಕರ್ಮದ
ಕಟ್ಟಲೆಯಿಂದೆಂದರಿದು ನಡೆವಂ
ಗಿಟ್ಟಣಿಸುವುದದಾವುದೈ ಹೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸಂಸಾರದಲ್ಲಿ ಇದು ನಷ್ಟಕರ, ಇದು ಉತ್ಕೃಷ್ಟ, ಇದು ಆದಿಯಿಂದ ಬಂದ ಆಚಾರ, ಇದರಿಂದ ಈ ಲೋಕದ ಹಾಗು ಬೇರೆಲೋಕದ ಸುಖ ದುಃಖಗಳುಂಟಾಗುತ್ತವೆ, ಈ ಜನ್ಮಕ್ಕೆ ಕಾರಣವಾದ ಹಿಂದೆ ಮಾಡಿದ ಕರ್ಮದ ಫಲವಿದು ಎಂದು ಜಾಗರೂಕನಾಗಿ ನಡೆಯುವವನಿಗೆ ವಿರೋಧ ಬರಲು ಹೇಗೆ ಕಾರಣ ಎಂದು ಮುನಿ ಸನತ್ಸುಜಾತರು ಕೇಳಿದರು.

ಅರ್ಥ:
ನಷ್ಟ: ಹಾನಿ, ಕೆಡುಕು; ಸಂಸಾರ: ಲೌಕಿಕ ಜೀವನ, ಬದುಕು; ಉತ್ಕೃಷ್ಟ: ಶ್ರೇಷ್ಠ; ಮುನ್ನ: ಮುಂತಾದ; ಆದಿ: ಮೊದಲಾದ; ಮಾರ್ಗ: ದಾರಿ; ಸೃಷ್ಟಿ: ಹುಟ್ಟು; ಲೋಕ: ಜಗತ್ತು; ಲೋಕಾಂತರ: ಬೇರೊಂದು ಲೋಕ, ಪರಲೋಕ; ಸುಖ: ಸಂತೋಷ; ದುಃಖ: ದುಗುಡು; ಏಳಿಗೆ: ಹೆಚ್ಚಳ; ಹುಟ್ಟು: ಜನನ; ಮೆಟ್ಟು: ತುಳಿತ; ಕಾಲ: ಸಮಯ; ಕರ್ಮ: ಕಾರ್ಯ, ಕೆಲಸ; ಕಟ್ಟಳೆ: ಅನೂಚಾನವಾಗಿ ಅನುಸರಿಸಿಕೊಂಡು ಬಂದ ನಿಯಮ; ಅರಿ: ತಿಳಿ; ನಡೆವ: ಹೆಜ್ಜೆ ಹಾಕುವ; ಇಟ್ಟಣಿಸು: ದಟ್ಟವಾಗು; ಹೇಳು: ತಿಳಿಸು; ಮುನಿ: ಋಷಿ;

ಪದವಿಂಗಡಣೆ:
ನಷ್ಟವಿದು +ಸಂಸಾರದೊಳಗ್
ಉತ್ಕೃಷ್ಟವಿದು +ಮುನ್ನಾದಿ+ಮಾರ್ಗದ
ಸೃಷ್ಟಿಯಿದು +ಲೋಕಾಂತರದ+ ಸುಖ ದುಃಖದ್+ಏಳಿಗೆಯ
ಹುಟ್ಟು +ಮೆಟ್ಟಿನ +ಕಾಲ +ಕರ್ಮದ
ಕಟ್ಟಲೆಯಿಂದ್+ಎಂದ್+ಅರಿದು +ನಡೆವಂಗ್
ಇಟ್ಟಣಿಸುವುದ್+ಆದಾವುದೈ+ ಹೇಳೆಂದನಾ +ಮುನಿಪ

ಅಚ್ಚರಿ:
(೧) ನಷ್ಟ, ಉತ್ಕೃಷ್ಟ – ಪ್ರಾಸ ಪದ
(೨) ಸುಖ ದುಃಖ – ವಿರುದ್ಧ ಪದಗಳು
(೩) ಕ ಕಾರದ ತ್ರಿವಳಿ ಪದ – ಕಾಲ ಕರ್ಮದ ಕಟ್ಟಲೆ

ಪದ್ಯ ೨೧: ಮನುಷ್ಯನ ಆಯುಷ್ಯವನ್ನು ಯಾರು ಅಳಿಯುತ್ತಾರೆ?

ತಳಪಟದೊಳಾಯುಷ್ಯ ರಾಶಿಯ
ನಳೆವ ಕೊಳಗವು ಸೂರ್ಯನೆಂಬುದ
ತಿಳಿದಹೋ ರಾತ್ರಿಗಳ ಸಂಖ್ಯೆಯ ಸಲುಗೆಯಂಕಿಪುದು
ಬಳಸುವುದು ಸನ್ಮಾರ್ಗದೊಳು ಮುಂ
ಕೊಳಿಸುವುದು ಸದ್ಧರ್ಮದಲಿ ಕಳ
ವಳಿಸದಿರು ಷಡ್ವರ್ಗದೊಳು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೂಮಿಯ ಮೇಲೆ ಒಬ್ಬನ ಆಯುಷ್ಯವನ್ನು (ಕಣದಲ್ಲಿ ಕಾಳಿನರಾಶಿಯ ಹಾಗೆ) ಅಳೆಯುವ ಕೊಳಗವೇ ಸೂರ್ಯ. ಇದನ್ನರಿತು ಪ್ರತಿ ಹಗಲುರಾತ್ರಿಗಳನ್ನು ಲೆಕ್ಕಿಸಿ ಸನ್ಮಾರ್ಗದಲ್ಲಿ ನಡೆಯಬೇಕು. ಸದ್ಧರ್ಮವನ್ನು ಆಚರಿಸಬೇಕು ಮತ್ತು ಅರಿಷಡ್ವರ್ಗಗಳಿಗೊಳಗಾಗಿ ಕಳವಡಿಸಬೇಡ ಎಂದು ಸನತ್ಸುಜಾತರು ರಾಜನಿಗೆ ಹೇಳಿದರು.

ಅರ್ಥ:
ತಳಪಟ:ಅಂಗಾತವಾಗಿ ಬೀಳು, ಸೋಲು; ಆಯುಷ್ಯ: ಜೀವಿತದ ಅವಧಿ; ರಾಶಿ: ಮೇಷ, ವೃಷಭ ಮೊದಲಾದ ಹನ್ನೆರಡು ವಿಭಾಗಗಳು; ಅಳೆ: ಅಳತೆ ಮಾಡು; ಕೊಳಗ: ಒಂದು ಅಳತೆ, ನಾಲ್ಕು ಬಳ್ಳಗಳ ಅಳತೆಯ ಪಾತ್ರೆ; ಸೂರ್ಯ: ರವಿ, ಭಾನು; ತಿಳಿ: ಅರ್ಥೈಸು; ಅಹೋರಾತ್ರಿ: ಹಗಲು ಇರುಳು; ಸಲುಗೆ:ಸದರ, ಅತಿ ಪರಿಚಯ; ಅಂಕಿ:ತೋರಿಸುವ ಚಿಹ್ನೆ; ಬಳಸು: ಉಪಯೋಗಿಸು; ಅನ್ಮಾರ್ಗ: ಒಳ್ಳೆಯ ದಾರಿ; ಮುಂಕೊಳಿಸು: ಮುಂದಕ್ಕೆ; ಸದ್ಧರ್ಮ: ಒಳ್ಳೆಯ ನಡತೆ; ಕಳವಳಿಸು: ಚಿಂತೆ; ಷಡ್ವರ್ಗ: ಕಾಮ, ಕ್ರೋಧ ಲೋಭ ಮೋಹ ಮದ ಮಾತ್ಸರ್ಯ ಎಂಬ ಆರುರೀತಿಯ ನಡವಳಿಕೆ; ಭೂಪಾಲ: ರಾಜ;

ಪದವಿಂಗಡಣೆ:
ತಳಪಟದೊಳ್+ಆಯುಷ್ಯ +ರಾಶಿಯನ್
ಅಳೆವ +ಕೊಳಗವು +ಸೂರ್ಯನ್+ಎಂಬುದ
ತಿಳಿದ್+ಅಹೋ+ ರಾತ್ರಿಗಳ+ ಸಂಖ್ಯೆಯ +ಸಲುಗೆಯಂಕಿಪುದು
ಬಳಸುವುದು +ಸನ್ಮಾರ್ಗದೊಳು +ಮುಂ
ಕೊಳಿಸುವುದು +ಸದ್ಧರ್ಮದಲಿ +ಕಳ
ವಳಿಸದಿರು +ಷಡ್ವರ್ಗದೊಳು +ಭೂಪಾಲ +ಕೇಳೆಂದ

ಅಚ್ಚರಿ:
(೧) ಅಂಕಿಪುದು, ಬಳಸುವುದು, ಮುಂಕೊಳಿಸುವುದು – ‘ದು’ ಅಕ್ಷರದಿಂದ ಕೊನೆಗೊಳ್ಳುವ ಪದಗಳ ಬಳಕೆ
(೨) ಸೂರ್ಯನಿಗೆ ಬೇರೆ ಆಯಾಮ ನೀಡಿದ ಕಲ್ಪನೆ – ತಳಪಟದೊಳಾಯುಷ್ಯ ರಾಶಿಯ
ನಳೆವ ಕೊಳಗವು ಸೂರ್ಯ

ಪದ್ಯ ೨೦: ಮೂಢರು ಲೋಕಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ ಯಾವುದು?

ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾರ್ಕ್ಷ್ಯನ
ಹೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು
ಉಜ್ವಲಿತ ಭಕ್ತಿಯೊಳು ಬಹಳ ವಿ
ತರ್ಜೆಯೊಳು ಮೂಢಾತ್ಮರಿಕ್ಕಿದ
ಹೆಜ್ಜೆಯಿದು ಲೋಕಕ್ಕೆ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜಗತ್ತು ದುರ್ಜನರಿಗೆ ಅಂಜುತ್ತದೆ, ಆದರೆ ಸಜ್ಜನರನ್ನು ಲೆಕ್ಕಿಸುವುದಿಲ್ಲ. ಗರುಡನ ಹೆಜ್ಜೆಯಲ್ಲಿರುವ ಹಾವನ್ನು ವಿತರಣೆಯಿಂದ ಅಪಾರ ಭಕ್ತಿಯಿಂದ ಪೂಜಿಸುತ್ತಾರೆ. ಇದು ಮೂಢರು ಲೋಕಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ಹೇಳಿದರು.

ಅರ್ಥ:
ದುರ್ಜನ: ಕೆಟ್ಟ ಜನ;ಅಂಜು: ಹೆದರು; ಲೋಕ: ಜಗ; ಸಜ್ಜನ: ಒಳ್ಳೆಯ ಜನ; ಲೆಕ್ಕಿಸು: ಎಣಿಸು; ತಾರ್ಕ್ಷ್ಯ: ಗರುಡ; ಹೆಜ್ಜೆ: ಪಾದ; ಒಳಗೆ: ಆಂತರ್ಯ; ದಂದಶೂಕ: ಸರ್ಪ, ಹಾವು; ಅರ್ಚಿಸು: ಪೂಜಿಸು; ಉಜ್ವಲ: ಪ್ರಕಾಶಮಾನ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬಹಳ: ತುಂಬಾ; ವಿತರ್ಜೆ: ಹೆದರಿಕೆ; ಮೂಢ: ಮೂರ್ಖ; ಲೋಕ: ಜಗತ್ತು; ಚಿತ್ತೈಸು: ಗಮನವಿಟ್ಟು ಕೇಳು; ಮುನಿ: ಋಷಿ;

ಪದವಿಂಗಡಣೆ:
ದುರ್ಜನರಿಗ್+ಅಂಜುವುದು +ಲೋಕವು
ಸಜ್ಜನರ +ಲೆಕ್ಕಿಸದು +ತಾರ್ಕ್ಷ್ಯನ
ಹೆಜ್ಜೆಯೊಳಗಿಹ+ ದಂದಶೂಕನನ್+ಅರ್ಚಿಸುವರೊಲ್+ಇದು
ಉಜ್ವಲಿತ +ಭಕ್ತಿಯೊಳು +ಬಹಳ +ವಿ
ತರ್ಜೆಯೊಳು +ಮೂಢಾತ್ಮರ್+ಇಕ್ಕಿದ
ಹೆಜ್ಜೆಯಿದು +ಲೋಕಕ್ಕೆ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಸಜ್ಜನ ದುರ್ಜನ – ವಿರುದ್ಧ ಪದಗಳು
(೨) ಹೆಜ್ಜೆ – ೩, ೬ ಸಾಲಿನ ಮೊದಲ ಪದ
(೩) ಉಪಮಾನದ ಪ್ರಯೋಗ – ತಾರ್ಕ್ಷ್ಯನ ಹೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲ್