ಪದ್ಯ ೧೯: ಲೋಕ ಕೆಡಲು ಕಾರಣವೇನು?

ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುರೋಹಿತ
ರೆಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು
ಮಡದಿ ಮಾಡಿದ ಪಾತಕವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯ ನರಿಯದೆ ಕೆಡುವುದೀ ಜಗವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ರಾಜ್ಯದಲ್ಲಿ ನಡೆಯುವ ಪಾಪವು ರಾಜನನ್ನು ಸುತ್ತುತ್ತದೆ. ಅದು ರಾಜಪುರೋಹಿತನಿಗೆ ಸೇರುತ್ತದೆ ಮೂರ್ಖನಾದ ಶಿಷ್ಯನ ದೋಷವು ಗುರುವಿಗೆ ಸೇರುತ್ತದೆ. ಹೆಂಡತಿಯ ಪಾಪ ಗಂಡನಿಗೆ ಸೇರುತ್ತದೆ. ಈ ಕ್ರಮವನ್ನರಿಯದೆ ಲೋಕ ಕೆಡುತ್ತದೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಪೊಡವಿ:ಪೃಥ್ವಿ, ಭೂಮಿ, ನೆಲ; ಉದಯಿಸು: ಹುಟ್ಟು; ದುಷ್ಕೃತ: ಕೆಟ್ಟ ಕೆಲಸ; ಬಿಡದು: ಹೋಗದು; ಭೂಪ: ರಾಜ; ಪುರೋಹಿತ: ಧಾರ್ಮಿಕ ವ್ರತವನ್ನು ಮಾಡಿಸುವವ; ಬಳಿಕ: ನಂತರ; ಮೂರ್ಖ: ಮೂಢ; ಶಿಷ್ಯ: ವಿದ್ಯಾರ್ಥಿ; ದೋಷ: ತಪ್ಪು; ಗುರು: ಆಚಾರ್ಯ; ಮಡದಿ: ಹೆಂಡತಿ; ಪಾತಕ: ಕೆಟ್ಟಕೆಲಸ, ಪಾಪ; ಪತಿ: ಗಂಡ, ಯಜಮಾನ; ಪರಮಾರ್ಥ: ಶ್ರೇಷ್ಠವಾದ ತಿಳುವಳಿಕೆ; ಪರಿವಿಡಿ: ವ್ಯವಸ್ಥಿತವಾದ ಕ್ರಮ; ಅರಿ: ತಿಳಿ; ಕೆಡು:ಹಾಳಾಗು, ಅಳಿ; ಜಗ: ವಿಶ್ವ; ಮುನಿ: ಋಷಿ;

ಪದವಿಂಗಡಣೆ:
ಪೊಡವಿಯೊಳಗ್+ಉದಯಿಸಿದ +ದುಷ್ಕೃತ
ಬಿಡದು +ಭೂಪರನ್+ಅದು +ಪುರೋಹಿತ
ರೆಡೆಗೆ+ ಬಳಿಕ+ಆ+ ಮೂರ್ಖ +ಶಿಷ್ಯನ +ದೋಷ +ಗುರುವಿನದು
ಮಡದಿ+ ಮಾಡಿದ+ ಪಾತಕವು+ ಪತಿಗ್
ಒಡಲಹುದು +ಪರಮಾರ್ಥವಿದು +ಪರಿ
ವಿಡಿಯನ್ +ಅರಿಯದೆ +ಕೆಡುವುದೀ +ಜಗವೆಂದನಾ +ಮುನಿಪ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಮಡದಿ ಮಾಡಿದ, ಪಾತಕವು ಪತಿಗೆ
(೨) ದುಷ್ಕೃತ, ಪಾತಕ – ಸಮನಾರ್ಥಕ ಪದ