ನುಡಿಮುತ್ತುಗಳು: ಉದ್ಯೋಗ ಪರ್ವ, ೪ ಸಂಧಿ

  • ನಳಿನಮಿತ್ರನು ಪಶ್ಚಿಮಾಂಬುಧಿಗಿಳಿಯೆ ನಾನಾ ಪಕ್ಷಿ ಜಾತಿಗಳುಲಿವುತೈತಂದೊಂದು ವೃಕ್ಷವನೇರಿ ರಾತ್ರಿಯನು ಕಳೆದು ನಾನಾ ದೆಸೆಗೆ ಹರಿವವೊಲ್ – ಪದ್ಯ ೧೮
  • ತಾರ್ಕ್ಷ್ಯನ ಹೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲ್ – ಪದ್ಯ ೨೦
  • ಸೂರ್ಯನಿಗೆ ಬೇರೆ ಆಯಾಮ ನೀಡಿದ ಕಲ್ಪನೆ – ತಳಪಟದೊಳಾಯುಷ್ಯ ರಾಶಿಯ
    ನಳೆವ ಕೊಳಗವು ಸೂರ್ಯ – ಪದ್ಯ ೨೧
  • ಜ್ಞಾನಲವವನು ಕೂಡಿಕೊಂಡಿಹ ದುರ್ವಿದಗ್ಧರನು ಏನ ತಿಳುಹಲು ಬಹುದು ವಿಷ್ಟ
    ಕ್ಸೇನಗಳವಲ್ಲರಸ ಮಿಕ್ಕಿನ ಮಾನವರ ಪಾಡಾವುದೈ – ಪದ್ಯ ೨೪
  • ದಾನದಿಂದಹುದಿಹಪರಂಗಳ ಸೌಖ್ಯ ಸಂಪದವು, ದಾನವೇ ಸಂಸಾರ ಸಾಧನ –  ಪದ್ಯ ೨೫
  • ಮಾನವ ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ – ಪದ್ಯ ೪೨
  • ಐಹಿಕಾಮುಷ್ಮಿಕದ ಗತಿ ಸಂಮೋಹಿಸುವುದು ಶರೀರದಲಿ – ಪದ್ಯ ೪೨
  • ಗರುಡ ಪಂಚಾಕ್ಷರಿಯೊಳಲ್ಲದೆ ಗರಳಭಯವಡಗುವುದೆ – ಪದ್ಯ ೪೩
  • ವಿಷ್ಣು ಸ್ಮರಣೆಯಿಂದಲ್ಲದೆ ಮಹಾಪಾತಕಕೆ ಕಡೆಯಹುದೆ – ಪದ್ಯ ೪೩
  • ತನ್ನ ಮನೆಯೊಳು ಮೂರ್ಖನತಿ ಸಂಪನ್ನ ಪೂಜ್ಯನು – ಪದ್ಯ ೪೪
  • ಭೂಮಿಪಾಲನು ತನ್ನ ದೇಶದೊಳಧಿಕನೈ – ಪದ್ಯ ೪೪
  • ಗ್ರಾಮದೊಳು ಧನಿ ಪೂಜ್ಯ – ಪದ್ಯ ೪೪
  • ವಿಶ್ವದೊಳು ಸಂಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ – ಪದ್ಯ ೪೪
  • ಕುಲಮಹಿಷಿ ದುರ್ಮಾರ್ಗ ಮುಖದೊಳು ಗಳಿಸಿದರ್ಥವನುಂಡು ಕಾಲವ
    ಕಳೆವ ನಿರ್ಭಾಗ್ಯರು ಕಣಾ ಮಾಹಿಷಿಕರೆಂಬುವರು – ಪದ್ಯ ೪೯
  • ಮೆರೆವ ಸಚರಾಚರವಿದೆಲ್ಲವ ನಿರುತ ತಾನೆಂದರಿತು ತನ್ನಿಂದಿರವು ಬೇರಿಲ್ಲೆಂಬ ಕಾಣಿಕೆ ಯಾವನೊಬ್ಬನೊಳು ಇರುತಿಹುದದಾವಗಮವನು ಸತ್ಪುರುಷನು – ಪದ್ಯ ೫೦ 
  • ಸರ್ವಕ್ಕೆ ಸಾಧನ ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ – ಪದ್ಯ ೫೬
  • ನಿಜಸುಕೃತ ದುಷ್ಕೃತವೆರಡು ಬೆಂಬಿಡವಲ್ಲದು – ಪದ್ಯ ೫೯
  • ಧರ್ಮವೇ ಸರ್ವಪ್ರತಿಷ್ಠಿತ – ಪದ್ಯ ೬೦
  • ಧರ್ಮವೆಂಬುದು ಪರಮಪದ – ಪದ್ಯ ೬೦
  • ಧರ್ಮವನು ಬಿಟ್ಟಿಹುದು ಬದುಕಲ್ಲ – ಪದ್ಯ ೬೦
  • ಧರ್ಮವೇ ನೂಕುವುದು ಜನ್ಮಾಂತರದ ಪಾತಕವ – ಪದ್ಯ ೬೦
  • ಬೂದಿಯೊಳು ಬೇಳಿದ ಹವಿಸ್ಸಿನ ಹಾದಿ –  ಪದ್ಯ ೯೦
  • ಸ್ವರ್ಗ ನರಕವಿದೆರಡಕೊಂದೇ ದಾನ ಕಾರಣ – ಪದ್ಯ ೯೪ 
  • ಗರ್ವೋದ್ರೇಕದಲಿ ಮೈಮರೆದು ಕೆಡಬೇಡ – ಪದ್ಯ ೧೦೩ 
  • ಕತ್ತಲೆಯ ಕಾಲಾಟ ಸೂರ್ಯನ ನೊತ್ತುವುದೆ – ಪದ್ಯ ೧೧೭
  • ದುಷ್ಕರ್ಮ ಕೋಟಿಗಳೆತ್ತ ಮುಟ್ಟುವುವೈ ಮಹಾಪುರುಷರನು – ಪದ್ಯ ೧೧೭
  • ಖಗಪತಿಯತತ್ತುದೇ ವಿಷ – ಪದ್ಯ ೧೧೭
  • ಕೃಷ್ಣರಾಯನ ಭಕ್ತರುಗಳನುಭವಿಸುವುದು ತಾ ಪಥ್ಯವೇ ಜಡಜೀವರಿಗೆ –ಪದ್ಯ ೧೧೭

ಪದ್ಯ ೧೮: ಭೂಮಿಯ ಭೋಗವು ಕಳೆದೊಡನೆ ಮನುಷ್ಯರು ಎಲ್ಲಿ ಹೋಗುತ್ತಾರೆ?

ನಳಿನಮಿತ್ರನು ಪಶ್ಚಿಮಾಂಬುಧಿ
ಗಿಳಿಯೆ ನಾನಾ ಪಕ್ಷಿ ಜಾತಿಗ
ಳುಲಿವುತೈತಂದೊಂದು ವೃಕ್ಷವನೇರಿ ರಾತ್ರಿಯನು
ಕಳೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರಿದ
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸೂರ್ಯನು ಸಂಜೆ ಪಡುವಣ ದಿಕ್ಕಿನಲ್ಲಿ ಸಮುದ್ರಕ್ಕಿಳಿಯಲು ಅನೇಕ ಜಾತಿಯ ಪಕ್ಷಿಗಳು ತಮ್ಮ ಕಲರವ ಮಾಡುತ್ತಾ ಒಂದು ಮರವನ್ನು ಸೇರಿ ರಾತ್ರಿಯನ್ನು ಕಳೆದು ಮರುದಿನ ಮುಂಜಾನೆ ಸೂರ್ಯನು ಹುಟ್ಟುವ ವೇಳೆಗೆ ದಿಕ್ಕು ದಿಕ್ಕಿಗೆ ಹೋಗಿ ಬಿಡುತ್ತವೆ. ಅದರಂತೆ ಭೂಮಿಯ ಭೋಗವನ್ನು ಕಳೆದೊಡನೆ ಮನುಷ್ಯರು ಲೋಕಾಂತರಗಳಿಗೆ ಹೋಗುತ್ತಾರೆ.

ಅರ್ಥ:
ನಳಿನ: ಕಮಲ; ನಳಿನಮಿತ್ರ: ಸೂರ್ಯ; ಪಶ್ಚಿಮ: ಪಡುವಣ; ಅಂಬುಧಿ: ಸಾಗರ; ಇಳೆ: ಭೂಮಿ; ನಾನಾ: ಹಲವಾರು; ಪಕ್ಷಿ: ಖಗ; ಜಾತಿ: ಕುಲ; ಉಲಿವುತ: ಕಲರವ; ವೃಕ್ಷ: ಮರ; ಏರು: ಹತ್ತು; ರಾತ್ರಿ: ಇರುಳು; ಕಳೆ: ದಾಟು; ದೆಸೆ: ದಿಕ್ಕು; ಹರಿವು: ಹಾರು, ಹೋಗು; ಭೋಗ:ಸುಖವನ್ನು ಅನುಭವಿಸುವುದು; ದೃಷ್ಟಿ: ನೋಟ; ತೀರಿದ: ಮುಗಿದ; ಬಳಿಕ: ನಂತರ; ಲೋಕ: ಜಗತ್ತು; ಲೋಕಾಂತರ: ಬೇರೆ ಲೋಕ; ಎಯ್ದು: ಹೋಗಿಸೇರು; ಮುನಿ: ಋಷಿ;

ಪದವಿಂಗಡಣೆ:
ನಳಿನಮಿತ್ರನು +ಪಶ್ಚಿಮ+ಅಂಬುಧಿಗ್
ಇಳಿಯೆ +ನಾನಾ +ಪಕ್ಷಿ +ಜಾತಿಗಳ್
ಉಲಿವುತೈತಂದ್+ಒಂದೊಂದು +ವೃಕ್ಷವನೇರಿ +ರಾತ್ರಿಯನು
ಕಳೆದು +ನಾನಾ +ದೆಸೆಗೆ +ಹರಿವವೊಲ್
ಇಳೆಯ +ಭೋಗದ +ದೃಷ್ಟಿ +ತೀರಿದ
ಬಳಿಕ+ ಲೋಕಾಂತರವನ್+ಎಯ್ದುವರ್+ಎಂದನಾ +ಮುನಿಪ

ಅಚ್ಚರಿ:
(೧) ಸೂರ್ಯನನ್ನು ನಳಿನಮಿತ್ರ ಎಂದು ಕರೆದಿರುವುದು
(೨) ಇಳೆಯ – ೨, ೫ ಸಾಲಿನ ಮೊದಲ ಪದ
(೩) ನಾನಾ – ೨, ೪ ಸಾಲಿನ ಎರಡನೆ ಪದ
(೪) ಉಪಮಾನದ ಪ್ರಯೋಗ – ನಳಿನಮಿತ್ರನು ಪಶ್ಚಿಮಾಂಬುಧಿಗಿಳಿಯೆ ನಾನಾ ಪಕ್ಷಿ ಜಾತಿಗ
ಳುಲಿವುತೈತಂದೊಂದು ವೃಕ್ಷವನೇರಿ ರಾತ್ರಿಯನು ಕಳೆದು ನಾನಾ ದೆಸೆಗೆ ಹರಿವವೊಲ್

ಪದ್ಯ ೧೭: ವಸ್ತುಗಳು ನಾಶವಾದಾಗ ಉಳಿಯುವ ವಸ್ತುವ ಯಾವುದು?

ಪ್ರಣವವೊಂದಾ ವರ್ಣ ಮೂರರ
ಗುಣವಿಡಿದು ತೋರುವ ಚರಾಚರ
ವೆಣಿಸಬಾರದು ವಿಶ್ವದಲಿ ನಿಸ್ಯೂತವಾಗಿಹುದು
ಹಣಿದು ಬೀಳಲು ಹೊಳೆವ ಜ್ಯೋತಿ
ರ್ಗಣದವೊಲು ತೊಳತೊಳಗಿ ಬೆಳಗುವ
ಗುಣರಹಿತನ ನಿಜಸ್ವರೂಪವಿದೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಓಂಕಾರ ಸ್ವರೂಪವು ಒಂದೇ, ಅದರಲ್ಲಿರುವ ಅಕ್ಷರಗಳು ಮೂರು (ಆ,ಯು, ಉಂ), ಇವುಗಳ ಗುಣಸಹಿತವಾದ ಅಸಂಖ್ಯ ಚರಾಚರಗಳಾಗಿವೆ. ಆದರೆ ಅವೆಲ್ಲರಲ್ಲಿ ಇರುವ ಪ್ರಣವ ಸ್ವರೂಪವಾದ ಬ್ರಹ್ಮವು ನಿರ್ಲೇಪವಾಗಿದೆ. ವಸ್ತುಗಳೆಲ್ಲಾ ನಾಶವಾದರೂ ತೊಳಗಿ ಬೆಳಗುವ ಬ್ರಹ್ಮವು ಇದ್ದೇ ಇರುತ್ತದೆ.

ಅರ್ಥ:
ಪ್ರಣವ: ಓಂಕಾರ, ಪರಮಾತ್ಮ; ವರ್ಣ: ಅಕ್ಷರ; ಮೂರು: ತ್ರಿ; ಗುಣ: ನಡತೆ; ತ್ರಿಗುಣ: ಸತ್ತ್ವ, ರಜಸ್ಸು, ತಮಸ್ಸು ಎಂಬ ಮೂರು ಮೂಲ ಸ್ವಭಾವಗಳು; ತೋರು: ಕಾಣಿಸು; ಚರಾಚರ: ಜೀವವಿರುವ ಮತ್ತು ಇಲ್ಲದಿರುವ; ಎಣಿಸು: ಲೆಕ್ಕಹಾಕು; ವಿಶ್ವ: ಜಗತ್ತು; ನಿಸ್ಯೂತ: ಸೇರಿಹೋದ, ಒಂದಾಗಿರುವ; ಹಣಿ: ಬಾಗು, ಮಣಿ; ಬೀಳು: ಕುಸಿ; ಹೊಳೆ: ಪ್ರಕಾಶ; ಜ್ಯೋತಿ: ಬೆಳಕು; ಗಣ: ವರ್ಗ, ಶಾಖೆ; ತೊಳತೊಳಗಿ: ಆಯಾಸ; ಬೆಳಗು: ಹೊಳಪು, ಕಾಂತಿ; ರಹಿತ: ಇಲ್ಲದ, ತ್ಯಜಿಸುವಿಕೆ; ನಿಜ: ನೈಜ, ಸತ್ಯ; ರೂಪ: ಆಕಾರ; ಮುನಿ: ಋಷಿ;

ಪದವಿಂಗಡಣೆ:
ಪ್ರಣವವ್+ಒಂದ್+ಆ+ ವರ್ಣ +ಮೂರರ
ಗುಣ+ವಿಡಿದು+ ತೋರುವ +ಚರಾಚರವ್
ಎಣಿಸಬಾರದು +ವಿಶ್ವದಲಿ+ ನಿಸ್ಯೂತವಾಗಿಹುದು
ಹಣಿದು +ಬೀಳಲು+ ಹೊಳೆವ+ ಜ್ಯೋತಿರ್
ಗಣದವೊಲು+ ತೊಳತೊಳಗಿ+ ಬೆಳಗುವ
ಗುಣರಹಿತನ+ ನಿಜಸ್ವರೂಪವಿದೆಂದನಾ +ಮುನಿಪ

ಅಚ್ಚರಿ:
(೧) ಗಣ, ಗುಣ – ಪದಗಳ ಬಳಕೆ