ಪದ್ಯ ೧೬: ಜಗತ್ತು ಎಂದು ಹಾಳಾಗುವುದು?

ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿಭ್ರಾಂತಿಯೊಳು ಮನ
ಸಂದು ಸಮ್ಯಜ್ಞಾನದುದಯದ ನೆಲೆಯು ಕಾಣಿಸದೆ
ದಂದುಗಂಬಡುತಿಹುದು ತತ್ತ್ವದ
ಹಿಂದು ಮುಂದರಿಯದೆ ಮಹಾತ್ಮರು
ಬಂದ ಪಥದೊಳು ಬಾರದೇ ಕಿಡುತಿಹುದು ಜಗವೆಂದ (ಉದ್ಯೋಗ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಒಂದೇ ಇರುವ ಬ್ರಹ್ಮವಸ್ತುವವನ್ನು ಎರಡು ಮಾಡುವೆನೆಂದು ಬುದ್ಧಿಯ ಭ್ರಾಂತಿಯಿಂದ ಸರಿಯಾದ ಜ್ಞಾನೋದಯದ ನೆಲೆಯೇ ಕಾಣಿಸದೆ ತತ್ತ್ವದ ಹಿಂದು ಮುಂದನ್ನು ತಿಳಿಯದೆ, ಮಹಾತ್ಮರು ನಡೆದ ಪಥದಲ್ಲಿ ನಡೆಯದೆ ಜಗತ್ತು ಕೆಡುತ್ತದೆ.

ಅರ್ಥ:
ಒಂದು: ಏಕ; ವಸ್ತು: ಪದಾರ್ಥ; ಎರಡು: ದ್ವಿ, ದ್ವಂದ; ಮಾಡು: ನೆರವೇರಿಸು; ಬುದ್ಧಿ: ಚಿತ್ತ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಮನ: ಮನಸ್ಸು; ಸಂದು: ಸಂದರ್ಭ; ಸಮ್ಯಕ್:ಸರಿಯಾದ; ಜ್ಞಾನ: ವಿದ್ಯೆ; ಉದಯ: ಹುಟ್ಟು; ನೆಲೆ:ನಿವಾಸ; ಕಾಣಿಸು: ತೋರು; ದಂದುಗ: ತೊಡಕು; ತತ್ತ್ವ: ಸಿದ್ಧಾಂತ; ಅರಿ: ತಿಳಿ; ಮಹಾತ್ಮರು: ಶ್ರೇಷ್ಠರು; ಪಥ: ದಾರಿ; ಕಿಡುತಿಹರು: ಕೆಡುಕ ಹೊಂದುತ್ತಿರುವರು; ಜಗ: ಜಗತ್ತು;

ಪದವಿಂಗಡಣೆ:
ಒಂದು +ವಸ್ತುವನ್+ಎರಡು +ಮಾಡುವೆನ್
ಎಂದು +ಬುದ್ಧಿ+ಭ್ರಾಂತಿಯೊಳು +ಮನ
ಸಂದು +ಸಮ್ಯಜ್ಞಾನ+ಉದಯದ +ನೆಲೆಯು +ಕಾಣಿಸದೆ
ದಂದುಗಂ+ಬಡುತಿಹುದು +ತತ್ತ್ವದ
ಹಿಂದು +ಮುಂದ್+ಅರಿಯದೆ +ಮಹಾತ್ಮರು
ಬಂದ +ಪಥದೊಳು +ಬಾರದೇ +ಕಿಡುತಿಹುದು+ ಜಗವೆಂದ

ಅಚ್ಚರಿ:
(೧) ಒಂದು, ಎಂದು, ಸಂದು, ಹಿಂದು – ಪ್ರಾಸ ಪದಗಳು
(೨) ಹಿಂದು ಮುಂದು – ವಿರುದ್ಧ ಪದಗಳು

ಪದ್ಯ ೧೫: ಯಾವುದನ್ನು ಮಾಡಿದರೆ ಸಂಸಾರದಿಂದ ಬಿಡುಗಡೆ ದೊರಕುತ್ತದೆ?

ಸಕಲ ಧರ್ಮದ ಸಾರವನು ಮತಿ
ವಿಕಳನಾಗದೆ ಚಿತ್ತವಿಸು ಬಾ
ಧಕವದಾವುದು ನಿನಗದನು ನೀ ನನ್ಯರುಗಳಲ್ಲಿ
ಯುಕುತಿಯಿಂದವೆ ಮಾಡದಿರೆ ನೀ
ಮುಕುತನಹೆ ಸಂಸಾರದಲಿ ಸಾ
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಎಲ್ಲಾ ಧರ್ಮದ ಸಾರವಿದು, ಬುದ್ಧಿಪೂರ್ವಕವಾಗಿ ಅರಿತುಕೋ. ನಿನಗೆ ಯಾವುದು ತೊಂದರೆ ಆಗುತ್ತದೆಯೋ ಅದನ್ನು ನೀನು ಬೇರೆಯವರಿಗೆ ಮಾಡಬೇಡ. ಇದರಂತೆ ನಡೆದರೆ ಸಂಸಾರ ಸಾಗರದ ಸುಳಿಯಿಂದ ನೀನು ಬಿಡುಗಡೆ ಹೊಂದುವೆ. ಇದೊಂದೇ ಮೋಕ್ಷಕ್ಕೆ ಸಾಧನ, ಇದನ್ನು ಎಲ್ಲರು ಒಪ್ಪುತ್ತಾರೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಸಕಲ:ಎಲ್ಲಾ; ಧರ್ಮ: ಧಾರಣೆ ಮಾಡಿದುದು; ಸಾರ: ರಸ; ಮತಿ: ಬುದ್ಧಿ; ವಿಕಳ: ಭ್ರಮೆ, ಭ್ರಾಂತಿ; ಚಿತ್ತವಿಸು: ಗಮನವಿಡು; ಬಾಧಕ: ತೊಂದರೆ; ಅನ್ಯ: ಬೇರೆ; ಯುಕುತಿ: ತರ್ಕಬದ್ಧವಾದ ವಾದಸರಣಿ; ಮುಕುತ: ಮುಕ್ತಿ, ಮೋಕ್ಷ; ಸಂಸಾರ: ಹುಟ್ಟು ಸಾವುಗಳ ಚಕ್ರ; ಸಾಧಕ: ನಿಪುಣ; ಜನಮತ: ಅಭಿಪ್ರಾಯ; ಮುನಿಪ: ಋಷಿ;

ಪದವಿಂಗಡಣೆ:
ಸಕಲ +ಧರ್ಮದ +ಸಾರವನು +ಮತಿ
ವಿಕಳನಾಗದೆ +ಚಿತ್ತವಿಸು +ಬಾ
ಧಕವದ್+ಆವುದು +ನಿನಗ್+ಅದನು +ನೀನ್ +ಅನ್ಯರುಗಳಲ್ಲಿ
ಯುಕುತಿಯಿಂದವೆ +ಮಾಡದಿರೆ +ನೀ
ಮುಕುತನಹೆ +ಸಂಸಾರದಲಿ +ಸಾ
ಧಕ+ವಿದೊಂದೇ +ಸಕಲ +ಜನಮತವೆಂದನಾ +ಮುನಿಪ

ಅಚ್ಚರಿ:
(೧) ಮತಿ, ಚಿತ್ತ – ಸಮನಾರ್ಥಕ ಪದ
(೨) ಸಾಧಕ, ಬಾಧಕ – ಪ್ರಾಸ ಪದ

ಪದ್ಯ ೧೪: ಯಾವ ಮಾರ್ಗದಲ್ಲಿ ನಡೆವುದು ಶ್ರೇಯಸ್ಸು?

ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದಲವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬಹಳ ಪುಣ್ಯಕಾರ್ಯಗಳನ್ನು ಮಾಡಿ, ಸ್ವರ್ಗವೇ ಮೊದಲಾದ ಉನ್ನತ ಭೋಗಗಳನ್ನು ಭೋಗಿಸಿದ ಮೇಲೆ ಭೂಮಿಗೆ ಬೀಳುವುದು ತಪ್ಪುವುದಿಲ್ಲ. ಆದುದರಿಂದ ಮರಲಿ ಹುಟ್ಟದ ದಾರಿ ಯಾವುದೆಂಬುದನ್ನು ಅರಿತುಕೊಂಡು ಮಹಾನುಭಾವರಾದ ಗುರುಗಳು ತೋರಿಸಿದ ಮಾರ್ಗದಲ್ಲಿ ನಡೆವುಯು ಉಚಿತ.

ಅರ್ಥ:
ಅತಿಶಯ: ಹೆಚ್ಚು, ಅಧಿಕ; ಸುಕೃತ: ಒಳ್ಳೆಯ ಕೆಲಸ; ವಿರಚಿಸಿ: ನಿರ್ಮಿಸಿ; ಗತಿ: ನಡಿಗೆ; ಗತಿವಡೆ: ಸದ್ಗತಿ ಪಡೆ; ಸ್ವರ್ಗ: ನಾಕ; ಭೋಗ: ಸುಖವನ್ನು ಅನುಭವಿಸುವುದು; ಉನ್ನತಿ: ಮೇಲ್ಮೆ, ಹಿರಿಮೆ; ಸಮನಂತರ: ಆದಮೇಲೆ; ಅವನಿ: ಭೂಮಿ; ಪತನ: ಬೀಳು; ತಪ್ಪದು: ಮರಳಿ: ಮತ್ತೆ; ಬಾರದ: ಹಿಂದಿರುಗದ; ಅರಿ: ತಿಳಿ; ಮಹಾನುಭವರು: ಶ್ರೇಷ್ಠರು; ಮತ: ಅಭಿಪ್ರಾಯ, ಉದ್ದೇಶ; ನಡೆ: ಹೆಜ್ಜೆ ಹಾಕು; ನಯ:ಸೊಗಸು, ಸೌಜನ್ಯ; ಕೇಳು: ಆಲಿಸು;

ಪದವಿಂಗಡಣೆ:
ಅತಿಶಯದ +ಸುಕೃತವನು +ವಿರಚಿಸಿ
ಗತಿವಡೆದು +ಸ್ವರ್ಗಾದಿ +ಭೋಗ
ಉನ್ನತಿಕೆಯನು +ಭೋಗಿಸಿದ +ಸಮನಂತರದಲ್+ಅವನಿಯಲಿ
ಪತನ +ತಪ್ಪದು +ಮರಳಿ +ಬಾರದ
ಗತಿಯನರಿದು +ಮಹಾನುಭಾವರ
ಮತವಿಡಿದು+ ನಡೆವುದು +ನಯವು +ಕೇಳೆಂದನಾ +ಮುನಿಪ

ಅಚ್ಚರಿ:
(೧) ಅತಿ, ಗತಿ; ಪತ, ಮತ – ಪ್ರಾಸ ಪದಗಳು

ಪದ್ಯ ೧೩: ಎಲ್ಲಾ ಚರಾಚರಗಳಲ್ಲಿ ಕೊನೆಗೆ ಉಳಿಯುವ ವಸ್ತುವಾವುದು?

ಹಲವು ವರ್ಣದೊಳೆಸೆವ ಗೋಸಂ
ಕುಲದೊಳೊಂದೇ ವರ್ಣದಲಿ ಕಂ
ಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ
ಹೊಲಬುಗೆಟ್ಟ ಚರಾಚರಂಗಳ
ಸುಳಿವಿನಲಿ ಸುಳಿದಡಗೆ ಕಡೆಯಲಿ
ನಿಲುವ ನಿಜವೊಂದಲ್ಲದೆರಡಿಲ್ಲೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಯಾವ ರೀತಿ ಹಲವು ಬಣ್ಣದ ಗೋವುಗಳಿದ್ದರೂ ಅದು ಕರೆದ ಹಾಲು ಶ್ವೇತ ಬಣ್ಣವಾಗಿರುತ್ತದೆಯೋ, ಅದೇ ರೀತಿ ದಿಕ್ಕು ತಪ್ಪಿದ ಎಲ್ಲಾ ಚರಾಚರ ವಸ್ತುಗಳು ಸಂಸಾರ ಸಾಗರದಲ್ಲಿ ಸುಳಿದು ಅಡಗಿಕೊಂಡರೂ ಕೊನೆಯದಾಗಿ ಉಳಿಯುವ ವಸ್ತುವು ಒಂದೇ ಆಗಿರುತ್ತದೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಹಲವು: ಬಹಳ; ವರ್ಣ: ಬಣ್ಣ; ಗೋ: ಹಸು, ಗೋವು; ಸಂಕುಲ: ಸಂತತಿ; ಕಂಗೊಳಿಸು: ಮೆರಗು, ತೋರು; ಕ್ಷೀರ: ಹಾಲು; ಅಮೃತ: ಸುಧೆ; ಮೈಗೊಂಡು: ದೇಹವನ್ನು ಹೊಂದಿಸು; ತೋರ್ಪು:ತೋರು; ಹೊಲಬು: ದಾರಿ, ಪಥ, ಮಾರ್ಗ; ಕೆಟ್ಟ: ಕೆಡುಕಿನ, ಹಾಳಾದ; ಚರ: ಚಲಿಸುವ; ಅಚರ: ಚಲಿಸದ; ಚರಾಚರಂಗಳು: ಜೀವವಿರುವ ಮತ್ತು ಇಲ್ಲದಿರುವ; ಸುಳಿ: ತಿರುಗುಣಿ; ಸುಳಿದು: ತಿರುಗಿ; ಅಡಗು: ಅವಿತುಕೊಳ್ಳು; ಕಡೆ: ಕೊನೆ; ನಿಲುವ: ಉಳಿಯುವ; ನಿಜ: ನೈಜ, ಸತ್ಯ; ಒಂದು: ಏಕ; ಎರಡು: ದ್ವಂದ್ವ;

ಪದವಿಂಗಡಣೆ:
ಹಲವು +ವರ್ಣದೊಳ್+ಎಸೆವ +ಗೋಸಂ
ಕುಲದೊಳ್+ಒಂದೇ +ವರ್ಣದಲಿ+ ಕಂ
ಗೊಳಿಸುವೀ +ಕ್ಷೀರ+ಅಮೃತವು+ ಮೈಗೊಂಡು +ತೋರ್ಪಂತೆ
ಹೊಲಬುಗೆಟ್ಟ+ ಚರಾಚರಂಗಳ
ಸುಳಿವಿನಲಿ+ ಸುಳಿದಡಗೆ +ಕಡೆಯಲಿ
ನಿಲುವ +ನಿಜವ್+ಒಂದ್+ಅಲ್ಲದ್+ಎರಡಿಲ್ಲೆಂದನಾ +ಮುನಿಪ

ಅಚ್ಚರಿ:
(೧) ಉಪಮಾನದ ಪ್ರಯೋಗ: ಹಲವು ವರ್ಣದೊಳೆಸೆವ ಗೋಸಂಕುಲದೊಳೊಂದೇ ವರ್ಣದಲಿ ಕಂಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ
(೨) ಸುಳಿವಿನಲಿ ಸುಳಿದಡಗೆ – ಸುಳಿ ಪದದ ಬಳಕೆ