ಪದ್ಯ ೧೨: ಆತ್ಮಕ್ಕೆ ಯಾವುದು ಸರಿಯಾದ ಮಾರ್ಗ?

ಕೆಟ್ಟಮಾರ್ಗದಲಿಂದ್ರಿಯಂಗಳ
ಚಿಟ್ಟುಮುರಿಯಾಟದಲಿ ಮನ ಸಂ
ದಷ್ಟವಾಗಿಯನಿತ್ಯ ಸಂಸಾರದ ಸುಖಕ್ಕೆಳಸಿ
ಹುಟ್ಟುಸಾವಿನ ವಿಲಗದಲಿ ಕಂ
ಗೆಟ್ಟು ನಾನಾಯೋನಿಯಲಿ ತಟ
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಇಂದ್ರಿಯಗಳ ಕ್ಷುಲ್ಲಕ ಆಟಗಳಿಗೆ ಬಲಿಯಾಗಿ ದುರ್ಮಾಗದಲ್ಲಿ ನಡೆದು ಶಾಶ್ವತವಲ್ಲದ ಸಂಸಾರ ಸುಖಕ್ಕೆ ಮಾರುಹೋಗಿ ಹುಟ್ಟು ಸಾವುಗಳೆಂಬ ಜಂಜಾಟಕ್ಕೆ ಸಿಲುಕಿ ಹಲವು ಯೋನಿಗಳಲ್ಲಿ ನೋವು ತಿನ್ನುತ್ತಾ ಬಳಲುವುದು ಸರಿಯಾದ ಮಾರ್ಗವೇ ರಾಜ ಎಂದು ಸನತ್ಸುಜಾತರು ಕೇಳುತ್ತಾ ಆತ್ಮಬೋಧನೆ ಮಾಡಿದರು.

ಅರ್ಥ:
ಕೆಟ್ಟ: ದುಷ್ಟ; ಮಾರ್ಗ: ದಾರಿ, ಹಾದಿ; ಇಂದ್ರಿಯ:ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಚಿಟ್ಟು: ಜುಗುಪ್ಸೆ, ಬೇಸರ; ಮುರಿ: ಸೀಳು; ಆಟ: ಕ್ರೀಡೆ; ಮನ: ಮನಸ್ಸು; ಸಂದಷ್ಟ: ಸಂತೋಷ; ನಿತ್ಯ: ಯಾವಾಗಲು; ಅನಿತ್ಯ: ಕ್ಷಣಿಕವಾದುದು; ಸಂಸಾರ: ಹುಟ್ಟು, ಜನ್ಮ; ಸುಖ: ಸಂತೋಷ, ನಲಿವು; ಹುಟ್ಟು: ಜನನ; ಸಾವು: ಮರಣ; ವಿಲಗ:ತೊಂದರೆ, ಕಷ್ಟ; ಕಂಗೆಟ್ಟು: ದಿಕ್ಕು ತೋರದಿರು, ಹತಾಶ; ಬಳಲು: ಆಯಾಸ, ದಣಿವು; ಉಚಿತವೆ: ಸರಿಯೇ, ಔಚಿತ್ಯ; ಭೂಪಾಲ: ರಾಜ; ಕೇಳು: ಆಲಿಸು; ತಟ: ಪ್ರಾಣಬಾಧೆ; ಗುಟ್ಟಿ: ಒಂದು ಗುಟುಕು; ಎಳಸು: ಬಯಸು, ಅಪೇಕ್ಷಿಸು;

ಪದವಿಂಗಡಣೆ:
ಕೆಟ್ಟಮಾರ್ಗದಲ್+ಇಂದ್ರಿಯಂಗಳ
ಚಿಟ್ಟುಮುರಿ+ಯಾಟದಲಿ+ ಮನ+ ಸಂ
ದಷ್ಟ+ವಾಗಿ +ಅನಿತ್ಯ +ಸಂಸಾರದ +ಸುಖಕ್ಕ್+ಎಳಸಿ
ಹುಟ್ಟು+ಸಾವಿನ+ ವಿಲಗದಲಿ +ಕಂ
ಗೆಟ್ಟು +ನಾನಾ+ಯೋನಿಯಲಿ +ತಟ
ಗುಟ್ಟಿ +ಬಳಲುವುದ್+ಉಚಿತವೇ +ಭೂಪಾಲ +ಕೇಳೆಂದ

ಅಚ್ಚರಿ:
(೧) ಹುಟ್ಟು ಸಾವು – ವಿರುದ್ಧ ಪದಗಳು
(೨) ೨, ೪ ಸಾಲುಗಳು ಸಂ, ಕಂ ಅಕ್ಷರಗಳಿಂದ ಕೊನೆಯಾಗಿರುವುದು

ಪದ್ಯ ೧೧: ತತ್ತ್ವದ ನಿಜಸ್ವರೂಪವೇನು?

ತ್ಯಜಿಸುವುದು ದುಸ್ಸಂಗವನು ನೀ
ಭಜಿಸುವುದು ಸತ್ಸಂಗವನು ಗಜ
ಭಜಿಸದಿರಹೋ ರಾತ್ರಿಯಲಿ ಧರ್ಮವನೆ ಸಂಗ್ರಹಿಸು
ಭಜಿಸು ನಿತ್ಯಾನಂದ ವಸ್ತುವ
ವಿಜಯನಹೆ ಇಹಪರಕೆ ತತ್ತ್ವದ
ನಿಜವಿದೆಲೆ ಧೃತರಾಷ್ಟ್ರ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ವಿದುರನು ಸನತ್ಸುಜಾತನ ಉಪದೇಶವನ್ನು ಕೇಳುತ್ತಾ, ಧೃತರಾಷ್ಟ್ರನಿಗೆ ಹೇಳಿದನು. ದುಸ್ಸಂಗವನ್ನು ಬಿಡಬೇಕು, ಯಾವಾಗಲೂ ಸತ್ಸಂಗವನ್ನೇ ಮಾಡಬೇಕು ವ್ಯವಹಾರದ ಗಲಾಟೆಯಲ್ಲಿ ಹಗಲು ರಾತ್ರಿಯನ್ನ ಕಳೆಯದೆ ಧರ್ಮದಲ್ಲೇ ನಿರತನಾಗಿರಬೇಕು. ನಿತ್ಯಾನಂದ ವಸ್ತುವನ್ನು ಸೇವಿಸಬೇಕು. ಹೀಗೆ ನಡೆದುಕೊಂಡರೆ ಇಹದಲ್ಲೂ ಪರದಲ್ಲೂ ಜಯಶಾಲಿಯಾಗುವೆ ಇದೇ ನಿಜವಾದ ತತ್ತ್ವದ ಸ್ವರೂಪ.

ಅರ್ಥ:
ತ್ಯಜಿಸು: ಬಿಟ್ಟುಬಿಡು;ದುಸ್ಸಂಗ: ದುಷ್ಟರ ಒಡನಾಟ; ಭಜಿಸು: ಆರಾಧಿಸು; ಸತ್ಸಂಗ: ಒಳ್ಳೆಯ ಜನರ ಒಡನಾಟ; ಗಜಬಜ: ಕೋಲಾಹಲ, ಗದ್ದಲ; ಅಹೋರಾತ್ರಿ: ಹಗಲು, ಇರುಳು; ಧರ್ಮ: ಧಾರಣೆ ಮಾಡಿರುವುದು; ಸಂಗ್ರಹಿಸು: ಕೂಡಿಸು; ನಿತ್ಯ: ಸದಾ; ಆನಂದ: ಸಂತೋಷ; ವಸ್ತು: ಪದಾರ್ಥ; ವಿಜಯ: ಗೆಲುವು; ಇಹ: ಇಲ್ಲಿ, ಈ ಲೋಕ; ಪರ: ಬೇರೆಯ ಲೋಕ; ತತ್ತ್ವ:ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ; ನಿಜ: ಸತ್ಯ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ತ್ಯಜಿಸುವುದು+ ದುಸ್ಸಂಗವನು +ನೀ
ಭಜಿಸುವುದು+ ಸತ್ಸಂಗವನು +ಗಜ
ಭಜಿಸದಿರ್+ಅಹೋ +ರಾತ್ರಿಯಲಿ +ಧರ್ಮವನೆ +ಸಂಗ್ರಹಿಸು
ಭಜಿಸು +ನಿತ್ಯಾನಂದ +ವಸ್ತುವ
ವಿಜಯನಹೆ+ ಇಹಪರಕೆ +ತತ್ತ್ವದ
ನಿಜವಿದ್+ಎಲೆ+ ಧೃತರಾಷ್ಟ್ರ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ತ್ಯಜಿಸು, ಭಜಿಸು – ಪ್ರಾಸ ಪದಗಳು
(೨) ದುಸ್ಸಂಗ, ಸತ್ಸಂಗ; ಅಹೋ ರಾತ್ರಿ, ಇಹ ಪರ – ವಿರುದ್ಧ ಪದಗಳು

ಪದ್ಯ ೧೦: ಮುಕ್ತಿರಾಜ್ಯವನ್ನು ಹೇಗೆ ವಶಪಡಿಸಿಕೊಳ್ಳಬೇಕು?

ಕಾಯವಿದು ನೆಲೆಯಲ್ಲ ಸಿರಿತಾ
ಮಾಯರೂಪಿನ ಮೃತ್ಯು ದೇವತೆ
ಬಾಯಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿತು ಮಹಾತ್ಮರಿದಕೆ ಸ
ಹಾಯ ಧರ್ಮವ ವಿರಚಿಸುತ ನಿ
ರ್ದಾಯದಲಿ ಕೈ ಸೂರೆಗೊಂಬುದು ಮುಕ್ತಿ ರಾಜ್ಯವನು (ಉದ್ಯೋಗ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಈ ದೇಹವು ಶಾಶ್ವತವಲ್ಲ. ಐಶ್ವರ್ಯವು ಮಾಯರೂಪವಾಗಿರುವು ಮೃತ್ಯು ದೇವತೆ, ಇದು ಬಾಯಿಬಿಡುತ್ತಾ ಇವನ ಕಾಲವೆಂದು ಕೊನೆಗೊಳ್ಳುತ್ತದೆ ಎಂದು ಕಾಯುತ್ತಿದಾಳೆ. ಈ ವ್ಯೂಹವನ್ನು ಯಾವ ಲೆಕ್ಕದಿಂದ ದಾಟಬೇಕು ಎಂದರಿತ ಮಹಾತ್ಮರು, ಧರ್ಮದ ಸಹಾಯದಿಂದ ಜೀವನವನ್ನು ರೂಪಿಸಿಕೊಂಡು, ಮೋಕ್ಷದ ಸ್ಥಾನಕ್ಕೆ ನಿರ್ದಾಕ್ಷಿಣ್ಯದಿಂದ ವಶಪಡಿಸಿಕೊಳ್ಳಬೇಕು.

ಅರ್ಥ:
ಕಾಯ: ದೇಹ; ನೆಲೆ: ಆಶ್ರಯ, ವಾಸಸ್ಥಾನ; ಸಿರಿ: ಐಶ್ವರ್ಯ; ಮಾಯ: ಇಂದ್ರಜಾಲ; ರೂಪ: ಆಕಾರ; ಮೃತ್ಯು: ಸಾವು; ದೇವತೆ: ದೇವಿ; ಬಾಯಿ: ಮುಖದ ಅಂಗ; ಬಿಡು: ಅಡೆಯಿಲ್ಲದಿರು ; ಕಾಲ: ಸಮಯ, ಸಾವು; ದಾಯ: ರೀತಿ; ಪಾಲು; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಸಹಾಯ: ನೆರವು; ಧರ್ಮ: ಧಾರಣೆ ಮಾಡಿರುವುದು; ವಿರಚಿಸು: ಕಟ್ಟು, ನಿರ್ಮಿಸು; ನಿರ್ದಾಯದ: ಅಖಂಡ; ಕೈ: ಕರ; ಸೂರೆ: ಸುಲಿಗೆ; ಮುಕ್ತಿ: ಮೋಕ್ಷ; ರಾಜ್ಯ: ದೇಶ;

ಪದವಿಂಗಡಣೆ:
ಕಾಯವಿದು +ನೆಲೆಯಲ್ಲ +ಸಿರಿ+ತಾ+
ಮಾಯ+ರೂಪಿನ +ಮೃತ್ಯು +ದೇವತೆ
ಬಾಯಬಿಡುತಿಹಳ್ +ಆವುದೀತನ+ ಕಾಲಗತಿಯೆಂದು
ದಾಯವರಿತು +ಮಹಾತ್ಮರ್+ಇದಕೆ +ಸ
ಹಾಯ +ಧರ್ಮವ +ವಿರಚಿಸುತ+ ನಿ
ರ್ದಾಯದಲಿ +ಕೈ +ಸೂರೆಗೊಂಬುದು+ ಮುಕ್ತಿ +ರಾಜ್ಯವನು

ಅಚ್ಚರಿ:
(೧) ಕಾಯ, ಮಾಯ, ದಾಯ, ಸಹಾಯ, ನಿರ್ದಾಯ, ಬಾಯ – ಪ್ರಾಸ ಪದಗಳು
(೨) ಕಾಲ, ಮೃತ್ಯು – ಸಮನಾರ್ಥಕ ಪದ

ಪದ್ಯ ೯: ಯೋಗಸಿದ್ಧಿಯ ಲಕ್ಷಣಗಳಾವುವು?

ಅಣುವಿನಲಿ ಲಘುವಿನಲಿ ಗುರುವಿನ
ಯೆಣಿಕೆಯಲಿ ಮಹಿಮೆಯಲಿ ಪ್ರಾಪ್ತಿಯ
ಭಣಿತೆಯೊಳಗೀಶತ್ವದೊಳು ಪ್ರಾಕಾಮ್ಯ ಪರಿವಿಡಿಯ
ಕುಣಿಕೆಗಳೊಳು ವಶಿತ್ವದೊಳುವೇ
ಟಣಿಸಿ ರೇಚಕ ಪೂರಕದರಿಂ
ಗಣವನರಿವುದು ಯೋಗಸಿದ್ಧಿಯ ಲಕ್ಷಣವಿದೆಂದ (ಉದ್ಯೋಗ ಪರ್ವ, ೪ ಸಂಧಿ, ೯ ಪದ್ಯ)

ತಾತ್ಪರ್ಯ:
ಅಣಿಮಾ, ಲಘಿಮಾ, ಗರಿಮಾ, ಮಹಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ, ವಶಿತ್ವಗಳೆಂಬ ಅಷ್ಟ ಸಿದ್ಧಿಗಳನ್ನು ಪಡೆಯುವುದು ರೇಚಕ ಪೂರಕ ಕುಂಭಕಗಳೆಂಬ ಪ್ರಾಣಾಯಾಮದ ರೀತಿಯನ್ನು ತಿಳಿಯುವುದು ಯೋಗಸಿದ್ಧಿಯ ಲಕ್ಷಣಗಳು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಅಣು: ಅತ್ಯಂತ ಸೂಕ್ಷ್ಮವಾದ ಕಣ; ಲಘು:ವೇಗವಾದ, ಹಗುರವಾದ; ಗುರು:ದೊಡ್ಡ, ಅತಿಶಯ; ಎಣಿಕೆ: ಲೆಕ್ಕ, ಆಲೋಚನೆ; ಮಹಿಮೆ:ಶ್ರೇಷ್ಠತೆ, ಔನ್ನತ್ಯ; ಪ್ರಾಪ್ತಿ: ದೊರಕು; ಭಣಿತೆ:ಮಾತು, ಹೇಳಿಕೆ; ಈಶತ್ವ: ದೈವತ್ವ; ಪ್ರಾಕಾಮ್ಯ: ಇಚ್ಛಿಸಿದ ಕಾರ‍್ಯ ನೆರವೇರಿಸುವ ಒಂದು ಸಿದ್ಧಿ; ಪರಿವಿಡಿ: ವ್ಯವಸ್ಥಿತವಾದ ಕ್ರಮ, ರೀತಿ; ಕುಣಿಕೆ:ಜೀರುಗುಣಿಕೆ, ಕೊನೆ; ವಶಿತ್ವ: ಹತೋಟಿ; ಅಣಿ: ಸಿದ್ಧತೆ; ರೇಚಕ: ಪ್ರಾಣಾಯಾಮದಲ್ಲಿ ಒಂದು ಪ್ರಕಾರ; ಪೂರಕ:ಪ್ರಾಣಾಯಾಮದ ಒಂದು ಅಂಗ, ಮೂಗಿನಿಂದ ವಾಯುವನ್ನು ಒಳಗೆ ಎಳೆದುಕೊಳ್ಳುವುದು, ಸಹಕಾರಕ; ಗಣ: ವರ್ಗ; ಅರಿ: ತಿಳಿ; ಯೋಗ: ಸೇರುವಿಕೆ; ಲಕ್ಷಣ: ರೀತಿ; ವೆಂಟಣಿಸು: ಬಳಸು;

ಪದವಿಂಗಡಣೆ:
ಅಣುವಿನಲಿ +ಲಘುವಿನಲಿ+ ಗುರುವಿನ
ಯೆಣಿಕೆಯಲಿ+ ಮಹಿಮೆಯಲಿ +ಪ್ರಾಪ್ತಿಯ
ಭಣಿತೆಯೊಳಗ್+ಈಶತ್ವದೊಳು +ಪ್ರಾಕಾಮ್ಯ +ಪರಿವಿಡಿಯ
ಕುಣಿಕೆಗಳೊಳು +ವಶಿತ್ವದೊಳು+ವೇ
ಟಣಿಸಿ+ ರೇಚಕ+ ಪೂರಕದರಿಂ
ಗಣವನ್+ಅರಿವುದು +ಯೋಗಸಿದ್ಧಿಯ +ಲಕ್ಷಣವಿದೆಂದ

ಅಚ್ಚರಿ:
(೧) ಅ ರಾ ಸೇ ರವರ ಟಿಪ್ಪಣಿ: ಪೂರಕ, ರೇಚಕ, ಕುಂಭಕಗಳು ಪ್ರಾಣಾಯಾಮದ ಅಂಗಗಳು. ಕುಂಡಲಿನಿಯನ್ನು ಮೇಲೇರಿಸಿ ಷಟ್ಚಕ್ರ ಭೇದನೆಯ ಕಾಲದಲ್ಲಿ ಅಷ್ಟ ಸಿದ್ಧಿಗಳು ದೊರಕುತ್ತವೆ. ಅಣಿಮಾ – ಚಿಕ್ಕದಾಗುವುದು, ಲಘಿಮಾ – ಹಗುರವಾಗುವುದು, ಗರಿಮಾ – ಭಾರವಾಗುವುದು, ಪ್ರಾಪ್ತಿ – ಬಯಸಿದ್ದು ದೊರಕುವುದು, ಪ್ರಾಕಾಮ್ಯ – ಬೇರೆಯವರು ಬಯಸಿದುದನ್ನು ದೊರಕಿಸಿಕೊಡುವುದು, ಈಶತ್ವ – ಒಡೆತನ, ವಶಿತ್ವ – ವಶಪಡಿಸಿಕೊಳ್ಳುವುದು
(೨) ಎಣಿಕೆ, ಕುಣಿಕೆ – ಪ್ರಾಸ ಪದಗಳು