ಪದ್ಯ ೭: ವ್ಯಕ್ತಿಯು ಭೂಮಿಯಲ್ಲಿ ಹೇಗೆ ಬದುಕಬೇಕು?

ನೇತ್ರ ನಾಸಿಕ ಪಾಣಿ ಪಾದ
ಶ್ರೋತ್ರವೆಂಬಿವು ತಮ್ಮೊಳೊಂದೇ
ಸೂತ್ರದೊಳು ಸಂಸೃಷ್ಟವಾಗಿ ಸಮಾನ ಬುದ್ಧಿಯಲಿ
ಗಾತ್ರವಿಡಿದಿಹವೋಲು ವಿಶ್ವದ
ಮೈತ್ರಿಯಲಿ ಮನಸಂದು ಪಾತ್ರಾ
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ (ಉದ್ಯೋಗ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ಕಣ್ಣು, ಮೂಗು, ಕೈ ಕಾಲು ಕಿವಿ ಎಂದು ಬೇರೆ ಬೇರೆ ಅಂಗಗಳಿದ್ದರೂ ಒಂದೇ ಸೂತ್ರದಿಂದ ಸೃಷ್ಟಿಸಲ್ಪಟ್ಟು ಸಮಾನ ಬುದ್ಧಿಯಿಂದ ದೇಹದಲ್ಲಿರುವಂತೆ ವ್ಯಕ್ತಿಯು ವಿಶ್ವ ಸ್ನೇಹದಿಂದ ಯೋಗ್ಯ ಅಯೋಗ್ಯಗಳ ಭೇದವಿಲ್ಲದೆ ಬೆರಸಿ ಬಾಳುವುದು ಹೆಚ್ಚಿನ ಗುಣ ಎಂದು ಸನತ್ಸುಜಾತರು ತಿಳಿಸುತ್ತಾರೆ.

ಅರ್ಥ:
ನೇತ್ರ: ಕಣ್ಣು, ನಯನ; ನಾಸಿಕ: ಮೂಗು; ಪಾಣಿ: ಹಸ್ತ; ಪಾದ: ಚರಣ, ಕಾಲು; ಶ್ರೋತ್ರ: ಕಿವಿ, ಕರಣ; ಸೂತ್ರ: ನಿಯಮ; ಸಂಸೃಷ್ಟ: ಹುಟ್ಟಿಸಿದ; ಸಮಾನ: ಒಂದೇ ರೀತಿ; ಬುದ್ಧಿ: ತಿಳಿವು, ಅರಿವು, ಚಿತ್ತ; ಗಾತ್ರ: ಒಡಲು, ದೇಹ; ಹಿಡಿ: ತಳೆ, ಗ್ರಹಿಸು; ವಿಶ್ವ: ಜಗತ್ತು; ಮೈತ್ರಿ: ಸ್ನೇಹ; ಮನಸು: ಚಿತ್ತ; ಸಂದು: ಮೂಲೆ, ಕೋನ; ಪಾತ್ರ: ಯೋಗ್ಯತೆ, ಅರ್ಹತೆ; ಅಪಾತ್ರ: ಅಯೋಗ್ಯ; ಬೆರಸು: ಸೇರಿಸು; ಬದುಕು: ಜೀವಿಸು; ಅಧಿಕ: ಹೆಚ್ಚು; ಗುಣ:ನಡತೆ, ಸ್ವಭಾವ;

ಪದವಿಂಗಡಣೆ:
ನೇತ್ರ +ನಾಸಿಕ +ಪಾಣಿ +ಪಾದ
ಶ್ರೋತ್ರವೆಂಬ್+ಇವು+ ತಮ್ಮೊಳ್+ಒಂದೇ
ಸೂತ್ರದೊಳು +ಸಂಸೃಷ್ಟವಾಗಿ +ಸಮಾನ +ಬುದ್ಧಿಯಲಿ
ಗಾತ್ರವಿಡಿದಿಹವೋಲು+ ವಿಶ್ವದ
ಮೈತ್ರಿಯಲಿ +ಮನಸಂದು +ಪಾತ್ರ
ಅಪಾತ್ರವೆನ್ನದೆ +ಬೆರಸಿ+ ಬದುಕುವುದ್+ಅಧಿಕ+ಗುಣವೆಂದ

ಅಚ್ಚರಿ:
(೧) ಜಗತ್ತಿನಲ್ಲಿರುವುದೆಲ್ಲವು ಒಂದೇ, ಇದರಲ್ಲಿ ಯೋಗ್ಯ ಅಯೋಗ್ಯ ರೆಂಬ ಭೇದವಿಲ್ಲ ಎಂದು ಸಾರುವ ಪದ್ಯ
(೨) ೫ ಪಂಚೇದ್ರಿಯಗಳ ಬಳಕೆ – ನೇತ್ರ, ನಾಸಿಕ, ಪಾಣಿ, ಪಾದ, ಶ್ರೋತ್ರ
(೩) ಪಾತ್ರಾಪಾತ್ರ – ಪಾತ್ರ, ಅಪಾತ್ರ ಎಂದು ಹೇಳುವ ಪದ

ನಿಮ್ಮ ಟಿಪ್ಪಣಿ ಬರೆಯಿರಿ