ಪದ್ಯ ೪: ಧೃತರಾಷ್ಟ್ರನ ಸ್ಮರಣೆಯಿಂದ ಯಾರು ಆಗಮಿಸಿದರು?

ನೆನೆಯಲೊಡನೆ ಸನತ್ಸುಜಾತನು
ಮನೆಗೆ ಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆ ಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಿತವೆನಲರುಹಿದನಲೈ ಪರಲೋಕ ಸಾಧನವ (ಉದ್ಯೋಗ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮನಸ್ಸಿನಲ್ಲಿ ಸ್ಮರಿಸಿದೊಡೆ ಸನತ್ಸುಜಾತನು ಅವನಿದ್ದಲ್ಲಿಗೆ ಆಗಮಿಸಿದನು. ಧೃತರಾಷ್ಟ್ರನು ಅವನಿಗೆ ನಮಸ್ಕರಿಸಿ “ಮುನಿವರ್ಯರೇ, ನನಗೆ ಬ್ರಹ್ಮೋಪದೇಶವನ್ನು ಕೃಪೆಯಿಂದ ಮಾಡಿ, ಎಂದು ಕೇಳಲು ಮುನಿಶ್ರೇಷ್ಠರಾದ ಸನತ್ಸುಜಾತರು ಬ್ರಹ್ಮವಿದ್ಯೆಯನ್ನು ಕುರಿತು ಹೇಳಿದರು.

ಅರ್ಥ:
ನೆನೆ: ಜ್ಞಾಪಿಸು; ಮನೆ: ಆಲಯ; ಬರಲು: ಆಗಮಿಸು; ಜನಕ: ತಂದೆ; ಮೈಯಿಕ್ಕಿದನು: ನಮಸ್ಕರಿಸಿದನು; ಉಪದೇಶ: ಬೋಧಿಸುವುದು; ಮುನಿ: ಋಷಿ; ಕೃಪೆ: ಕರುಣೆ; ಅನುನಯ:ನಯವಾದ ಮಾತುಗಳಿಂದ ಮನವೊಲಿಸುವುದು; ಅವನೀಪತಿ: ರಾಜ; ಜನಜನಿತ: ಜನರಲ್ಲಿ ಹಬ್ಬಿರುವ ವಿಷಯ; ಅರುಹು: ತಿಳಿವಳಿಕೆ; ಪರಲೋಕ: ಬೇರೆ ಜಗತ್ತು; ಸಾಧನ: ಅಭ್ಯಾಸ; ಇದಿರು: ಎದುರು;

ಪದವಿಂಗಡಣೆ:
ನೆನೆಯಲ್+ಒಡನೆ +ಸನತ್ಸುಜಾತನು
ಮನೆಗೆ +ಬರಲ್+ಇದಿರ್+ಎದ್ದು +ಕೌರವ
ಜನಕ +ಮೈಯಿಕ್ಕಿದನ್+ಎನಗೆ +ಬ್ರಹ್ಮೋಪದೇಶವನು
ಮುನಿಪ+ ನೀ +ಕೃಪೆ +ಮಾಡಬೇಕೆನಲ್
ಅನುನಯದೊಳ್+ಅವನೀಪತಿಗೆ+ ಜನ
ಜನಿತವೆನಲ್+ಅರುಹಿದನಲೈ +ಪರಲೋಕ +ಸಾಧನವ

ಅಚ್ಚರಿ:
(೧) ಕೌರವಜನಕ, ಅವನೀಪತಿ – ಧೃತರಾಷ್ಟ್ರನನ್ನು ಕರೆಯಲು ಬಳಸಿದ ಪದಗಳು
(೨) ನಮಸ್ಕರಿಸಿದನು ಎಂದು ಹೇಳಲು ಮೈಯಿಕ್ಕಿದನು ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ