ಪದ್ಯ ೩೯: ಸಿರಿಯುಳ್ಳವನನ್ನು ಲೋಕ ಹೇಗೆ ಭಾವಿಸುತ್ತದೆ?

ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೇ ಮಹಾತ್ಮನು ಸಕಲ ಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಐಶ್ವರ್ಯವನ್ನು ಸಮಾಜ ಹೇಗೆ ನೋಡುತ್ತದೆಂದು ವಿದುರ ಈ ಪದ್ಯದಲ್ಲಿ ತಿಳಿಸಿದ್ದಾನೆ. ಐಶ್ವರ್ಯವಿದ್ದವನೇ ಒಳ್ಳೆಯ ಕುಲದಲ್ಲಿ ಜನಿಸಿದವನು, ಐಶ್ವರ್ಯವಿದ್ದವನೇ ಪಂಡಿತನು, ಅವನೆ ಮಹಾತ್ಮನು, ಅವನಲ್ಲಿ ಸಕಲ ಸದ್ಗುಣಗಳೂ ಇವೆ, ಅವನೇ ಒಳ್ಳೆಯ ಶೀಲವಂತ ಎಂದು ಲೋಕ ಭಾವಿಸುತ್ತದೆ. ಐಶ್ವರ್ಯವಿಲ್ಲದವನು ಸ್ವಯಂ ಶಿವನೇ ಆಗಿದ್ದರೂ ಅವನನ್ನು ಲಕ್ಷಿಸುವುದಿಲ್ಲ.

ಅರ್ಥ:
ಸಿರಿ: ಐಶ್ವರ್ಯ; ಉಳ್ಳವ: ಇರುವ; ಕುಲಜ: ಒಳ್ಳೆಕುಲದಲ್ಲಿ ಹುಟ್ಟಿದ; ವಿದಗ್ಧ: ವಿದ್ವಾಂಸ; ಮಹಾತ್ಮ: ಶ್ರೇಷ್ಠ; ಸಕಲ: ಎಲ್ಲಾ; ಗುಣ: ನಡತೆ, ಸ್ವಭಾವ; ಸುಶೀಲ: ಒಳ್ಳೆಯ ನಡತೆ, ಸದಾಚಾರ; ರಹಿತ: ಇಲ್ಲದ ಸ್ಥಿತಿ; ಶಿವ: ಈಶ್ವರ; ಸರಕು:ಲಕ್ಷ್ಯ; ಲೋಕ: ಜಗತ್ತು; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸಿರಿಯನ್+ಉಳ್ಳವನವನೆ+ ಕುಲಜನು
ಸಿರಿಯನ್+ಉಳ್ಳವನೇ +ವಿದಗ್ಧನು
ಸಿರಿಯನ್+ಉಳ್ಳವನೇ +ಮಹಾತ್ಮನು +ಸಕಲ +ಗುಣಯುತನು
ಸಿರಿಯನ್+ಉಳ್ಳವನೇ +ಸುಶೀಲನು
ಸಿರಿರಹಿತ+ ಶಿವನಾದೊಡ್+ಆಗಲಿ
ಸರಕು +ಮಾಡದು +ಲೋಕವ್+ಅವನೀಪಾಲ+ ಕೇಳೆಂದ

ಅಚ್ಚರಿ:
(೧) ಸಿರಿ – ೫ ಸಾಲಿನ ಮೊದಲ ಪದ
(೨) ಸಿರಿಯಿದ್ದವರನ್ನು ೫ ರೀತಿ ಸಮಾಜ ಗುರುತಿಸುತ್ತದೆ, ಕುಲಜ, ವಿದಗ್ಧ, ಮಹಾತ್ಮ, ಗುಣಯುತ, ಸುಶೀಲ

ನಿಮ್ಮ ಟಿಪ್ಪಣಿ ಬರೆಯಿರಿ