ಪದ್ಯ ೫: ಕೃಷ್ಣನು ಯಾವ ಸಲಹೆಯನ್ನು ನೀಡಿದನು?

ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ (ಉದ್ಯೋಗ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಪಾಂಡವರಿಗೆ ಬರಬೇಕಾದ ರಾಜ್ಯದ ಭಾಗವನ್ನು ಕೇಳಲು ಶಿಷ್ಟರಾದ ರಾಯಭಾರಿಗಳನ್ನು ಸಂಧಾನಕ್ಕೆ ಕಳಿಸುವುದು. ಭೀಷ್ಮ, ದ್ರೋಣ ಮುಂತಾದವರನ್ನು ವಿನಯದಿಂದ ನಮ್ಮನ್ನು ವಿರೋಧಿಸದಂತೆ ಮಾಡುವುದು. ದುರ್ಯೋಧನನ ಮನಸ್ಸಿನ ಉದ್ದೇಶವನ್ನು ಅರಿತು ಅವನಲ್ಲಿ ವಿವೇಕವಿಲ್ಲೆಂದು ತಿಳಿದರೆ, ಯುದ್ಧದಲ್ಲಿ ನಮ್ಮ ಚಾತುರ್ಯವನ್ನು ತೋರಿಸಬೇಕು, ಎಂದು ಶ್ರೀಕೃಷ್ಣನು ತನ್ನ ಅಭಿಪ್ರಾಯವನ್ನು ತಿಳಿಸಿದನು.

ಅರ್ಥ:
ಕಳು: ಕಳಿಸು; ಶಿಷ್ಟ:ಒಳ್ಳೆಯ ನಡವಳಿಕೆ, ಸದಾಚಾರ; ಧರಣಿ: ಭೂಮಿ; ಧರಣಿತಳ: ಭೂಮಂಡಲ; ಬೇಡು: ಕೇಳು; ಸಾಮ:ಸಮಾಧಾನದ ಮಾತು; ಬಳಸು: ಉಪಯೋಗಿಸು; ಆದಿ: ಮುಂತಾದ; ವಿನಯ: ಒಳ್ಳೆಯತನ, ಸೌಜನ್ಯ; ತಿಳಿಸು: ವಿಚಾರ ಮಾಡು, ಆಲೋಚಿಸು; ನೆಲೆ: ನಿಲ್ಲುವ ರೀತಿ, ಸ್ಥಿತಿ; ಬಳಿಕ: ನಂತರ; ನಯ:ನುಣುಪು, ಮೃದುತ್ವ; ಆಹವ: ಯುದ್ಧ; ಕೈತೋರು: ಕೈಚಳಕ; ತೋರು: ಪ್ರಕಟಗೊಳಿಸು; ಮತ: ಅಭಿಪ್ರಾಯ; ಧಂಸ: ನಾಶ;

ಪದವಿಂಗಡಣೆ:
ಕಳುಹುವುದು +ಶಿಷ್ಟರನು+ ಧರಣೀ
ತಳವ +ಬೇಡಿಸುವಲ್ಲಿ +ಸಾಮವ
ಬಳಸುವುದು +ಭೀಷ್ಮಾದಿಗಳ +ಕಟ್ಟುವುದು +ವಿನಯದಲಿ
ತಿಳಿವುದ್+ಆತನ +ನೆಲೆಯನ್+ಅಲ್ಲಿಂ
ಬಳಿಕ+ ನಯವಿಲ್ಲೆಂದ್+ಆದಡ್+ಆಹವ
ದೊಳಗೆ +ಕೈದೋರುವುದು+ ಮತವೆಂದನು+ ಮುರಧ್ವಂಸಿ

ಅಚ್ಚರಿ:
(೧) ಸಾಮ, ಭೇದ, ದಂಡ ಪ್ರಯೋಗಗಳನ್ನು ಬಳಸುವ ರೀತಿ ವಿವರಿಸಿರುವುದು
(೨) ವಿನಯ, ನಯ – ಪದಗಳ ಬಳಕೆ
(೩) ಸಾಮವ, ಆಹವ – ಪ್ರಾಸ ಪದಗಳ ಬಳಕೆ, ೨- ೫ ಸಾಲು

ನಿಮ್ಮ ಟಿಪ್ಪಣಿ ಬರೆಯಿರಿ