ಪದ್ಯ ೪೮: ಧರ್ಮರಾಜನ ನಿರ್ಧಾರವೇನಿತ್ತು?

ಅವಧಿ ತೀರಲಿ ಮೇಣು ಮಾಣಲಿ
ಎವಗೆ ತುರುಹುಯ್ಯಲನು ಕೇಳಿದು
ಕಿವಿಯಲುದಕವ ಕೊಂಡಡಾ ಪಾತಕವನೆಣಿಸುವೊಡೆ
ಎವಗೆ ನೂಕದು ಸಾಕದಂತಿರ
ಲವರ ಬೆಂಬಳಿವಿಡಿದು ವರಗೋ
ನಿವಹವನು ಮರಳಿಚುವೆನೆಂದನು ಧರ್ಮನಂದನನು (ವಿರಾಟ ಪರ್ವ, ೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ಧರ್ಮರಾಯನು ತನ್ನ ತಮ್ಮಂದಿರ ಬಳಿ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ, ಅಜ್ಞಾತವಾಸದ ಅವಧಿ ಮುಗಿಯಲಿ ಬಿಡಲಿ, ಗೋವುಗಳಿಗೆ ಸಂಕಟವಾಗಿರುವುದನ್ನು ಕೇಳಿ, ನೀರನ್ನು ಕುಡಿದರೂ ಬರುವ ಪಾಪವನ್ನು ಲೆಕ್ಕಹಾಕಲು ಸಾಧ್ಯವಿಲ್ಲ. ಅದು ಹಾಗಿರಲಿ, ವಿರಾಟ ಬಲದ ಹಿಂದೆ ಹೋಗಿ ಗೋವುಗಳನ್ನು ಹಿಂದಿರುಗಿಸುತ್ತೇನೆ, ಎಂದು ಧರ್ಮಜನು ನಿಶ್ಚಯಿಸಿದನು.

ಅರ್ಥ:
ಅವಧಿ: ಕಾಲ, ಪರಿಮಿತಿ; ತೀರು: ಮುಗಿಸು; ಮೇಣು: ಅಥವ; ಮಾಣು: ತಡಮಾಡು; ಎವಗೆ: ನಮಗೆ; ತುರು: ಗೋವು; ಹುಯ್ಯು:ಹೊಡೆ, ಬಡಿ; ಕೇಳು: ಆಲಿಸು; ಕಿವಿ: ಕರಣ; ಉದಕ: ನೀರು; ಕೊಂಡು: ತೆಗೆದುಕೊ; ಪಾತಕ: ಪಾಪ; ನೂಕು: ಸಾಗು ; ಸಾಕು: ಕೊನೆ; ಬೆಂಬಲ: ಸಹಾಯ, ಆಸರೆ; ವರ: ಶ್ರೇಷ್ಠ; ಗೋ:ಗೋವು; ನಿವಹ: ಗುಂಪು; ಮರಳಿ: ಮತ್ತೆ; ಮರಳಿಚು: ಹಿಂದಿರುಗಿಸು;

ಪದವಿಂಗಡಣೆ:
ಅವಧಿ+ ತೀರಲಿ +ಮೇಣು +ಮಾಣಲಿ
ಎವಗೆ +ತುರು+ಹುಯ್ಯಲನು+ ಕೇಳಿದು
ಕಿವಿಯಲ್+ಉದಕವ+ ಕೊಂಡಡಾ+ ಪಾತಕವನ್+ಎಣಿಸುವೊಡೆ
ಎವಗೆ +ನೂಕದು +ಸಾಕದಂತಿರಲ್
ಅವರ+ ಬೆಂಬಳಿ+ವಿಡಿದು +ವರಗೋ
ನಿವಹವನು +ಮರಳಿಚುವೆನ್+ಎಂದನು +ಧರ್ಮನಂದನನು

ಅಚ್ಚರಿ:
(೧) ‘ಕ’ ಕಾರದ ಜೋಡಿ ಪದ – ಕೇಳಿದು ಕಿವಿಯಲುದಕವ ಕೊಂಡದಾ

ಪದ್ಯ ೪೭: ಗೋಗ್ರಹಣದ ಬಗ್ಗೆ ಧರ್ಮರಾಯನ ಅಭಿಪ್ರಾಯವೇನು?

ಇವರು ತಮ್ಮೊಳಗೆಂದರದು ನ
ಮ್ಮವರ ಬಲ ತುರುಗೊಂಡವರು ಕೌ
ರವರು ನಮ್ಮ ಪರೀಕ್ಷೆಗೋಸುಗ ಬಂದ ಹದನಹುದು
ಅವಧಿ ತೀರದ ಮುನ್ನ ಕಾಣಿಸಿ
ನಮಗೆ ಬಳಿಕಾರಣ್ಯವಾಸವ
ನಿವರು ಕರುಣಿಸಿ ಬಂದರೆಂದನು ಧರ್ಮನಂದನನು (ವಿರಾಟ ಪರ್ವ, ೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ಪಾಂಡವರು ತಮ್ಮೊಳಗೆ ಮಾತನಾಡುತ್ತಾ, ಗೋಗ್ರಹಣ ಮಾಡಿರುವುದು ಕೌರವರು, ನಮ್ಮನ್ನು ಕಂಡು ಹಿಡಿಯಲು ಕೌರವರು ಈ ತಂತ್ರವನ್ನು ಬಳಸಿದ್ದಾರೆ, ನಮ್ಮನ್ನು ಅಜ್ಞಾತವಾಸದ ಅವಧಿ ಮುಗಿಯುವ ಮುನ್ನ ಕಂಡು ಹಿಡಿದು, ಮತ್ತೆ ಅರಣ್ಯಕ್ಕೆ ಕಳುಹಿಸಲು ಬಂದಿದ್ದಾರೆ, ಎಂದು ಯುಧಿಷ್ಠಿರನು ಹೇಳಿದನು.

ಅರ್ಥ:
ಬಲ: ಸೈನ್ಯ; ತುರು: ಗೋವು; ಪರೀಕ್ಷೆ: ಮೌಲ್ಯಮಾಪನ; ಹದ: ಸರಿಯಾದ ಸ್ಥಿತಿ; ಅವಧಿ: ಕಾಲ, ಪರಿಮಿತಿ; ತೀರದ: ಮುಗಿಯದ; ಮುನ್ನ: ಮುಂಚೆ; ಕಾಣಿಸು: ತೋರು; ಬಳಿಕ: ನಂತರ; ಅರಣ್ಯ: ಕಾನನ; ಕರುಣಿಸು: ನೀಡು; ನಂದನ: ಮಗ;

ಪದವಿಂಗಡಣೆ:
ಇವರು +ತಮ್ಮೊಳಗ್+ಎಂದರ್+ಅದು +ನ
ಮ್ಮವರ+ ಬಲ +ತುರು+ಕೊಂಡವರು+ ಕೌ
ರವರು +ನಮ್ಮ +ಪರೀಕ್ಷೆಗೋಸುಗ+ ಬಂದ+ ಹದನಹುದು
ಅವಧಿ +ತೀರದ+ ಮುನ್ನ +ಕಾಣಿಸಿ
ನಮಗೆ +ಬಳಿಕ+ಅರಣ್ಯವಾಸವನ್
ಇವರು +ಕರುಣಿಸಿ +ಬಂದರ್+ಎಂದನು +ಧರ್ಮನಂದನನು

ಅಚ್ಚರಿ:
(೧) ಇವರು – ೧, ೬ ಸಾಲಿನ ಮೊದಲ ಪದ
(೨) ಈ ಪದ್ಯದಲ್ಲೂ ನಮಗೆ ಎನ್ನುವಲ್ಲಿ ೨ ಪದ ‘ಮ’ ಕಾರವಾಗಿದ್ದು, ಇತರೆ ಪದಗಳು ‘ವ’ಕಾರವಾಗಿರುವುದು

ಪದ್ಯ ೪೬: ವಿರಾಟನ ಸಾಮಂತರು ಹೇಗೆ ಸಿದ್ಧರಾದರು?

ಕೇಳಿ ಸಿಡಿಲೇಳಿಗೆಯಲೆದ್ದು ನೃ
ಪಾಲಕರು ಗಜಬಜಿಸಿ ರಭಸದೊ
ಳೋಲಗವ ಹೊರವಂಟು ನಡೆದರು ಭಾಷೆಗಳ ಕೊಡುತ
ಆಳು ಕೈದುವ ಕೊಂಡು ಕರಿಘಟೆ
ಮೇಳವಿಸಿ ಹಲ್ಲಣಿಸಿ ತೇಜಿಗ
ಳೋಳಿಯಲಿ ರಥ ಹೂಡಿ ಕವಿದುದು ಮತ್ಸ್ಯ ಪರಿವಾರ (ವಿರಾಟ ಪರ್ವ, ೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ದರ್ಬಾರಿನಲ್ಲಿದ ವಿರಾಟರಾಜನ ಸಾಮಂತ ರಾಜರು ಸಿಡಿಲಿನಂತೆ ಗರ್ಜನೆ ಮಾಡುತ್ತಾ, ಪ್ರತಿಜ್ಞೆಯನ್ನು ಮಾಡಿ ಆಸ್ಥಾನದಿಂದ ಹೊರಟರು. ಚತುರಂಗ ಸೈನ್ಯವು ಯುದ್ಧಕ್ಕೆ ಸಿದ್ಧವಾಯಿತು.

ಅರ್ಥ:
ಕೇಳಿ: ಆಲಿಸಿ; ಸಿಡಿಲು: ಚಿಮ್ಮು, ಸಿಡಿ; ಏಳು: ಎದ್ದು; ನೃಪಾಲ: ರಾಜ; ಗಜಬಜಿಸು: ಜೋರಾಗಿ ಕೂಗು; ರಭಸ: ಜೋರು; ಓಲಗ: ದರ್ಬಾರು; ಹೊರವಂಟು: ಹೊರನಡೆದು; ಭಾಷೆ: ಆಣೆ, ಪ್ರತಿಜ್ಞೆ; ಕೊಡು: ನೀಡು; ಆಳು: ಸೈನ್ಯ; ಕೈದು: ಆಯುಧ; ಕೊಂಡು: ಹಿಡಿ; ಕರಿ: ಆನೆ; ಘಟೆ: ಸಮೂಹ; ಮೇಳವಿಸು: ಸೇರು; ಹಲ್ಲಣಿಸು:ತಡಿಹಾಕು; ತೇಜಿ: ಕುದುರೆ; ಓಳಿ: ಗುಂಪು; ರಥ: ಬಂಡಿ; ಹೂಡಿ: ನೊಗಹೇರು; ಕವಿದು: ದಟ್ಟವಾಗು; ಪರವಾರ: ವಂಶ;

ಪದವಿಂಗಡಣೆ:
ಕೇಳಿ +ಸಿಡಿಲ್+ಏಳಿಗೆಯಲ್+ಎದ್ದು +ನೃ
ಪಾಲಕರು +ಗಜಬಜಿಸಿ +ರಭಸದೊಳ್
ಓಲಗವ +ಹೊರವಂಟು +ನಡೆದರು +ಭಾಷೆಗಳ +ಕೊಡುತ
ಆಳು +ಕೈದುವ +ಕೊಂಡು +ಕರಿಘಟೆ
ಮೇಳವಿಸಿ +ಹಲ್ಲಣಿಸಿ+ ತೇಜಿಗಳ್
ಓಳಿಯಲಿ +ರಥ+ ಹೂಡಿ +ಕವಿದುದು +ಮತ್ಸ್ಯ +ಪರಿವಾರ

ಅಚ್ಚರಿ:
(೧) ಕರಿಘಟೆ, ತೇಜಿಗಳೋಳಿ – ಆನೆ ಕುದುರೆಗಳ ಗುಂಪನ್ನು ಸೂಚಿಸಲು ಬಳಸಿದ ಪದ
(೨) ‘ಕ’ ಕಾರದ ಜೋಡಿ ಪದ – ಕೈದುವ ಕೊಂಡು ಕರಿಘಟೆ

ಪದ್ಯ ೪೫: ಗೋಗ್ರಹಣದ ವಾರ್ತೆಯನ್ನು ಆಸ್ಥಾನದಲ್ಲಿ ಯಾವ ಸ್ಥಿತಿ ನಿರ್ಮಾಣವಾಯಿತು?

ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ (ವಿರಾಟ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಗೋಗ್ರಹಣದ ಸುದ್ದಿಯನ್ನು ಕೇಳಿ ವಿರಾಟನು ನಿಟ್ಟುಸಿರು ಬಿಟ್ಟು ಅಯ್ಯೋ ಕೀಚಕನು ಈ ಹಿಂದೆ ಅಳಿದನೇ, ಅವನು ಇದ್ದಿದ್ದರೆ ಹೀಗೆ ಆಕ್ರಮಿಸುವ ಧೈರ್ಯ ಯಾರಿಗೂ ಬರುತ್ತಿರಲಿಲ್ಲ ಎಂದು ಉದ್ಗರಿಸಿ, ಸುತ್ತ ಮುತ್ತಲಿರುವವರನ್ನು ನೋಡಿದನು. ಆಸ್ಥಾನದಲ್ಲಿದ್ದ ಯೋಧರು ಯುದ್ಧ ಮಾಡಲು ನನಗೆ ವೀಳೆಯವನ್ನು ಕೊಡಿ ಎಂದು ಮುಂದೆ ಬಂದರು, ಆಸ್ಥಾನದಲ್ಲಿ ಕೋಲಾಹಲವಾಯಿತು.

ಅರ್ಥ:
ಕೇಳಿ: ಆಲಿಸಿ; ಬಿಸುಸುಯ್: ನಿಟ್ಟುಸಿರು ಬಿಡು; ನೃಪಾಲ: ರಾಜ; ಅಳಿ: ನಾಶವಾಗು; ಕಟ್ಟಾಳು: ನಂಬಿಕಸ್ಥ ಸೇವಕ; ನೋಡು: ವೀಕ್ಷಿಸು; ಕೆಲ: ಕೆಲವರು; ಬಲ: ಸೈನ್ಯ; ಆಳು: ಸೇವಕ; ಗಜಬಜ: ಗೊಂದಲ; ಹಾಯಿಕು:ಕಳಚು, ತೆಗೆ; ವೀಳೆ: ಆಮಂತ್ರಣ; ಓಲಗ: ದರ್ಬಾರು, ಆಸ್ಥಾನ; ಅಬ್ಬರಣೆ: ಕೋಲಾಹಲ; ಮಸಗು: ಹರಡು; ಕದಡು: ಕಲಕು;

ಪದವಿಂಗಡಣೆ:
ಕೇಳಿ +ಬಿಸುಸುಯ್ದನು +ವಿರಾಟ +ನೃ
ಪಾಲನಿಂದ್+ಇನಲ್+ಅಳಿದನೇ +ಕ
ಟ್ಟಾಳು +ಕೀಚಕನ್+ಎನುತ+ ನೋಡಿದನ್+ಅಂದು +ಕೆಲಬಲನ
ಆಳು +ಗಜಬಜಿಸಿತ್ತು +ಹಾಯಿಕು
ವೀಳೆಯವನ್+ಇಂದ್+ಎನಗೆ +ತನಗೆಂದ್
ಓಲಗದೊಳ್+ಅಬ್ಬರಣೆ+ ಮಸಗಿತು +ಕದಡಿತ್+ಆಸ್ಥಾನ

ಅಚ್ಚರಿ:
(೧) ಓಲಗ, ಆಸ್ಥಾನ – ಸಮನಾರ್ಥಕ ಪದ – ೬ ಸಾಲಿನ ಮೊದಲ ಮತ್ತು ಕೊನೆ ಪದ
(೨) ಆಳು – ೩, ೪ ಸಾಲಿನ ಮೊದಲ ಪದ