ಪದ್ಯ ೪೪: ಗೋಪಾಲಕರು ವಿರಾಟರಾಜನಿಗೆ ಏನೆಂದು ಹೇಳಿದರು?

ಬಸಿವ ನೆತ್ತರ ಗೋವರರಸಂ
ಗುಸಿರಲಾರದೆ ಧೊಪ್ಪನಡೆಗೆಡೆ
ದಸುವ ಕಳೆದರು ಕೆಲರು ಕೆಲಬರು ತಮ್ಮ ಸಂತೈಸಿ
ಅಸಮ ಬಲವದು ಜೀಯ ಗೋವರ
ಕುಸುರಿದರಿದರುವತ್ತು ಸಾವಿರ
ಪಶು ಸಮೂಹವ ಹಿಡಿದರೆಂದರು ಮತ್ಸ್ಯಭೂಪತಿಗೆ (ವಿರಾಟ ಪರ್ವ, ೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಸುಶರ್ಮನ ಸೈನ್ಯದವರ ದಾಳಿಗೆ ಒಳಪಟ್ಟ ಗೋಪಾಲರು ತಮ್ಮ ದೇಹದಿಂದ ಸುರಿಯುತ್ತಿರುವ ರಕ್ತಸಿಕ್ತ ದೇಹವನ್ನು ಲೆಕ್ಕಿಸದೆ ತಪ್ಪಿಸಿಕೊಂಡು ದೊರೆಯ ಮುಂದೆ ನಿಂತರು, ಕೆಲವರು ಅಲ್ಲಿ ಮಾತನಾಡದೆ ಪ್ರಾಣವನ್ನು ಬಿಟ್ಟರು, ಕೆಲವರು ಸ್ವಲ್ಪ ಸುಧಾರಿಸಿಕೊಂಡು, “ರಾಜ, ಭಾರಿಸೈನ್ಯವೊಂದು ಗೊಲ್ಲರನ್ನು ಕೊಚ್ಚಿ ಹಾಕಿದ್ದಾರೆ, ೬೦ ಸಾವಿರ ಗೋವುಗಳನ್ನು ಹಿಡಿದುಕೊಂಡು ಹೋದರು” ಎಂದು ತಮ್ಮ ಅಳಲನ್ನು ವಿರಾಟರಾಜನ ಬಳಿ ತೋಡಿಕೊಂಡರು.

ಅರ್ಥ:
ಬಸಿವ:ಸ್ರವಿಸು,ಜಿನುಗು; ನೆತ್ತರು: ರಕ್ತ; ಗೋವರು: ಗೋಪಾಲರು; ಅರಸ: ರಾಜ; ಉಸಿರು: ಶ್ವಾಸ, ಗಾಳಿ; ಧೊಪ್ಪ: ಜೋರಾಗಿ; ಅಸು: ಪ್ರಾಣ; ಕಳೆ: ಕಳಚು; ಕೆಲ: ಸ್ವಲ್ಪ; ಸಂತೈಸು: ಸಮಾಧಾನ ಪಡು; ಅಸಮ: ಬಹಳ; ಬಲ: ಸೈನ್ಯ; ಜೀಯ: ಒಡೆಯ; ಕುಸುರಿ: ಚೂರು; ಅರಿ: ತಿವಿ, ಕತ್ತರಿಸು; ಸಾವಿರ: ಸಹಸ್ರ; ಪಶು: ಪ್ರಾಣಿ, ದನ; ಸಮೂಹ: ಗುಂಪು; ಹಿಡಿದು: ಬಂಧಿಸು; ಭೂಪತಿ: ರಾಜ;

ಪದವಿಂಗಡಣೆ:
ಬಸಿವ+ ನೆತ್ತರ +ಗೋವರ್+ಅರಸಂಗ್
ಉಸಿರಲಾರದೆ+ ಧೊಪ್ಪನ್+ಅಡೆಗೆಡೆದ್
ಅಸುವ +ಕಳೆದರು +ಕೆಲರು+ ಕೆಲಬರು+ ತಮ್ಮ +ಸಂತೈಸಿ
ಅಸಮ+ ಬಲವದು +ಜೀಯ +ಗೋವರ
ಕುಸುರಿದ್+ಅರಿದರ್+ಅರುವತ್ತು+ ಸಾವಿರ
ಪಶು +ಸಮೂಹವ +ಹಿಡಿದರ್+ಎಂದರು +ಮತ್ಸ್ಯ+ಭೂಪತಿಗೆ

ಅಚ್ಚರಿ:
(೧) ‘ಕ’ ಕಾರದ ಜೋಡಿ ಪದ – ಕಳೆದರು ಕೆಲರು ಕೆಲಬರು
(೨) ಭಾಮಿನಿ ಷಡ್ಪತಿಯಲ್ಲಿ, ೨ ಪದ ಒಂದೆ ಕಾಗುಣಿತಾಕ್ಷರದಲ್ಲಿರುತ್ತದೆ, ಇಲ್ಲಿ ಶ/ಸ ವನ್ನು ಬಳಸಿರುವ ಉದಾಹರಣೆ- ಪಶು, ಶ/ಸ, ಳ/ಲ – ಬಳಸುವ ಕ್ರಮವಿದೆ
(೩) ಕೆಲರು, ಕೆಲಬರು – ಪದದ ಬಳಕೆ
(೪) ಅರಸ, ಭೂಪತಿ – ಸಮನಾರ್ಥಕ ಪದ – ೧, ೬ ಸಾಲಿನ ಕೊನೆಯ ಪದ

ಪದ್ಯ ೪೩: ಸುಶರ್ಮನ ದಾಳಿಗೆ ಗೋಪಾಲರ ಸ್ಥಿತಿ ಹೇಗಿತ್ತು?

ಮಿಸುಪ ಕಂಬಳಿ ಕೊಂಬು ಕಲ್ಲಿಯ
ಬಿಸುಟು ಗಾಯದಿ ಗೋವಳರು ಹೊ
ತ್ತಸುವ ಕೊರಳಲಿ ಹಿಡಿದು ನಾಲಗೆಯೊಣಗಿ ಢಗೆ ಹೊಯ್ದು
ವಿಷಮ ರಣಭೀತಿಯಲಿ ಕಂದಿದ
ಮುಸುಡ ತೊದಲಿನ ನುಡಿಯ ಮರಣದ
ದೆಸೆಯ ಕೈಸನ್ನೆಗಳ ಕಾತರರೈದಿದರು ಪುರವ (ವಿರಾಟ ಪರ್ವ, ೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ತಾವು ಹೊದ್ದಿದ್ದ ಹೊಳೆಯುವ ಕಂಬಳಿ, ತಮ್ಮ ಕೈಯಲ್ಲಿ ಹಿಡಿದ ಕೊಂಬು, ಬುತ್ತಿ ತಂದಿದ್ದ ಚೀಲಗಳನ್ನು ಎಸೆದು ಗೋಪಾಲಕರು ಕಂಗಾಲಾಗಿ ಹೊರಟರು. ಅವರ ಪ್ರಾಣ ಕತ್ತಿಗೆ ಬಂದು ನಿಂತಿತ್ತು, ನಾಲಗೆ ಒಣಗಿತ್ತು, ಯುದ್ಧ ಭೀತಿಯ ಧಗೆ ಹೊತ್ತಿತ್ತು, ಬಲಶಾಲಿಯಾದ ಸೈನ್ಯದ ಭೀತಿಯಿಂದ ಅವರ ಮುಖಗಳು ಬಾಡಿದವು. ಮಾತುಗಳು ತೊದಲಿದವು. ಸಾವು ಬಂತೆಂದು ಕೈ ಸನ್ನೆಗಳನ್ನು ಮಾಡುತ್ತಾ ವಿರಾಟನಗರಕ್ಕೆ ಓಡಿದರು.

ಅರ್ಥ:
ಮಿಸುಪ: ಹೊಳೆವ, ಸುಂದರವಾದ; ಕಂಬಳಿ: ಹೊದ್ದಿಗೆ; ಕೊಂಬು: ಟೊಂಗೆ, ಕೊಂಬೆ; ಕಲ್ಲಿ: ಹೆಣಿಕೆಯ ಚೀಲ; ಬಿಸುಟು: ದೂರತಳ್ಳಿ, ಬಿಸಾಕಿ; ಗಾಯ: ಪೆಟ್ಟು; ಗೋವಳ: ಗೋಪಾಲ; ಹೊತ್ತು: ಹತ್ತಿಕೊಳ್ಳು, ಉರಿ; ಅಸು: ಪ್ರಾಣ; ಕೊರಳು: ಕಂಠ; ಹಿಡಿ: ಬಂಧನ; ನಾಲಗೆ: ಜಿಹ್ವೆ; ಒಣಗು: ನೀರಿಲ್ಲ ಬಾಡು; ಢಗೆ:ಕಾವು, ದಗೆ; ಹೊಯ್ದು: ಹೊಡೆ; ವಿಷಮ: ಕಷ್ಟಕರವಾದುದು; ರಣ: ಯುದ್ಧ; ಭೀತಿ: ಭಯ; ಕಂದು:ಮಸಕಾಗು; ,ಮುಸುಡ: ಮುಖ; ತೊದಲು: ತಡವರಿಸುತ್ತ ಮಾತನಾಡುವಿಕೆ; ನುಡಿ: ಮಾತು; ಮರಣ: ಸಾವು; ದೆಸೆ: ದಿಕ್ಕು; ಕೈ: ಹಸ್ತ; ಸನ್ನೆ: ಮಾತಿಲ್ಲದ ಸೂಚನೆ, ಸಂಜ್ಞೆ, ಸುಳಿವು; ಕಾತರ: ಕಳವಳ, ಉತ್ಸುಕತೆ; ಪುರ: ಊರು; ಐದು: ಸೇರು

ಪದವಿಂಗಡಣೆ:
ಮಿಸುಪ +ಕಂಬಳಿ+ ಕೊಂಬು +ಕಲ್ಲಿಯ
ಬಿಸುಟು +ಗಾಯದಿ +ಗೋವಳರು +ಹೊತ್ತ್
ಅಸುವ+ ಕೊರಳಲಿ+ ಹಿಡಿದು +ನಾಲಗೆ+ಒಣಗಿ+ ಢಗೆ+ ಹೊಯ್ದು
ವಿಷಮ +ರಣಭೀತಿಯಲಿ +ಕಂದಿದ
ಮುಸುಡ +ತೊದಲಿನ +ನುಡಿಯ +ಮರಣದ
ದೆಸೆಯ +ಕೈಸನ್ನೆಗಳ +ಕಾತರರ್+ಐದಿದರು +ಪುರವ

ಅಚ್ಚರಿ:
(೧) ‘ಕ’ ಕಾರದ ಜೋಡಿ ಪದ – ಕಂಬಳಿ ಕೊಂಬ ಕಲ್ಲಿಯ
(೨) ಹೆದರಿದಾಗ, ಸಾವು ಸಮೀಪಿಸಿದಾಗ ಆಗುವ ಬದಲಾವಣೆಗಳನ್ನು ಚಿತ್ರೀಕರಿಸಿರುವ ಬಗೆ – ಕಂದಿದ ಮುಸುಡ, ಅಸುವ ಕೊರಳಿಲಿ ಹಿಡಿದು, ನಾಲಗೆ ಒಣಗಿ, ಢಗೆ ಹೊಯ್ದು

ಪದ್ಯ ೪೨: ಗೋಪಾಲಕರು ಯಾಕೆ ಹಿಂದಿರುಗಿದರು?

ಆಳು ಸುತ್ತಲು ಕಟ್ಟಿ ತುರುಗಳ
ಕೋಳ ಹಿಡಿದರು ಬೊಬ್ಬಿರಿದು ಗೋ
ಪಾಲರಾಂತರೆ ಕಾದಿದರು ಕಡಿ ಖಂಡಮಯವಾಗೆ
ಮೇಲೆ ಮೇಲೈತಪ್ಪ ಹೆಬ್ಬಲ
ದಾಳು ಕುದುರೆಯ ಕಂಡು ನೂಕದು
ಕಾಳಗವು ತಮಗೆನುತ ತಿರುಗಿತು ಗೋವರುಳಿದವರು (ವಿರಾಟ ಪರ್ವ, ೫ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸೈನಿಕರು ಗೋವುಗಳನ್ನು ಸುತ್ತುವರೆದು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಗೋಪಾಲಕರು ಇದನ್ನು ಕಂಡು ಆರ್ಭಟಿಸಿದರು, ಯುದ್ಧಮಾಡಲು ಮುನ್ನಡೆದವರನ್ನು ಸುಶರ್ಮನ ಸೈನ್ಯವು ಕಡಿದು ಹಾಕಿದರು. ಇವನ ಭಾರಿ ಸೈನ್ಯವು ಗೋಪಾಲಕರ ಮೇಲೆ ಬೀಳಲು, ಈ ಯುದ್ಧವು ತಮಗೆ ಸಾಧ್ಯವಿಲ್ಲವೆಂದು ಗೋಪಾಲಕರು ಹಿಂದಿರುಗಿದರು.

ಅರ್ಥ:
ಆಳು: ಸೈನ್ಯ; ಸುತ್ತಲು: ಆವರಿಸಲು; ಕಟ್ಟಿ: ಬಿಗಿ; ತುರು: ಗೋವು; ಕೋಳ: ಬೇಡಿ, ಸಂಕೋಲೆ; ಹಿಡಿ: ಬಂಧನ, ಸೆರೆ; ಬೊಬ್ಬಿರಿದು: ಜೋರಾಗಿ ಕೂಗು; ಗೋಪಾಲ: ಗೋವನ್ನು ಪೋಷಿಸುವ; ಕಾದು: ಜಗಳವಾಡು; ಕಡಿ:ತುಂಡುಮಾಡು, ತರಿ; ಖಂಡ: ತುಂಡು, ಚೂರು; ಹೆಬ್ಬಲ:ದೊಡ್ಡ ಸೈನ್ಯ; ಕುದುರೆ: ಅಶ್ವ; ಕಂಡು: ನೋಡು; ನೂಕು: ತಳ್ಳು; ಕಾಳಗ: ಯುದ್ಧ; ತಿರುಗು: ದಿಕ್ಕನ್ನು ಬದಲಾಯಿಸು; ಉಳಿದು: ಮಿಕ್ಕ;

ಪದವಿಂಗಡಣೆ:
ಆಳು +ಸುತ್ತಲು +ಕಟ್ಟಿ +ತುರುಗಳ
ಕೋಳ +ಹಿಡಿದರು +ಬೊಬ್ಬಿರಿದು +ಗೋ
ಪಾಲರಾಂತರೆ+ ಕಾದಿದರು +ಕಡಿ +ಖಂಡ+ಮಯವಾಗೆ
ಮೇಲೆ +ಮೇಲೈತಪ್ಪ +ಹೆಬ್ಬಲದ್
ಆಳು +ಕುದುರೆಯ +ಕಂಡು +ನೂಕದು
ಕಾಳಗವು+ ತಮಗೆನುತ+ ತಿರುಗಿತು +ಗೋವರುಳಿದವರು

ಅಚ್ಚರಿ:
(೧) ಆಳು – ೧, ೫ ಸಾಲಿನ ಮೊದಲ ಪದ
(೨) ‘ಕ’ ಕಾರದ ಜೋಡಿ ಪದ – ಕಾದಿದರು ಕಡಿ, ಕುದುರೆಯ ಕಂಡು