ಪದ್ಯ ೪೧: ಸುಶರ್ಮನ ಸೈನ್ಯವು ಯಾರ ಮೇಲೆ ದಾಳಿಮಾಡಿತು?

ಅಸಿತ ಪಕ್ಷಾಷ್ಟಮಿಯದಿನ ಸಂ
ಧಿಸಿದರಾಳೆದ್ದುದು ವಿರಾಟನ
ಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ
ಹೊಸ ಮುಖಕೆ ಸೀವರಿಸಿದವು ದೆಸೆ
ದೆಸೆಗೆ ಹಿಂಡುಗಳೊಡೆದು ಹಾಯ್ದವು
ಮಸಗಿತಂಬಾರವದ ಕಳವಳವಾಯ್ತು ನಿಮಿಷದಲಿ (ವಿರಾಟ ಪರ್ವ, ೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕೃಷ್ಣಪಕ್ಷದ ಅಷ್ಟಮಿಯ ದಿನ ಸುಶರ್ಮನ ಸೈನಿಕರು, ದಕ್ಷಿಣ ದಿಕ್ಕಿನಲ್ಲಿದ್ದ ವಿರಾಟನ ಗೋಪಾಲಕರನ್ನು ಕೊಂದು ಗೋವುಗಳನ್ನು ಹಿಡಿದರು. ಹೊಸ ಜನರನ್ನು ನೋಡಿ, ಗೋವುಗಳು ಅಸಡ್ಡೆಯಿಂದ ಅಬ್ಬರಿಸುತ್ತಾ ತಮ್ಮ ಹಿಂಡನ್ನು ಬಿಟ್ಟು ‘ಅಂಬಾ’ ಎಂದು ಕೂಗುತ್ತಾ ಓಡಿದವು. ಇದರಿಂದ ಭಾರಿ ಸದ್ದಾಯಿತು.

ಅರ್ಥ:
ಅಸಿತ: ಕಪ್ಪಾದುದು, ಕೃಷ್ಣಪಕ್ಷ; ಅಷ್ಟಮಿ: ೮ ನೇ ದಿನ; ದಿನ: ದಿವಸ; ಸಂಧಿಸಿದ: ಸೇರಿದ; ಆಳು: ಸೇನೆ; ಎದ್ದು: ಎಚ್ಚರು, ದಾಳಿ; ಪಶು: ಪ್ರಾಣಿ; ಸಮೂಹ: ಗುಂಪು; ಮುತ್ತು: ಆವರಿಸು; ಗೋಪಾಲಕ: ಗೋವುಗಳನ್ನು ಪೋಷಿಸುವ; ಕೆಡಹಿ: ಕೊಂದು; ಹೊಸ: ನವ; ಮುಖ: ಆನನ; ಸೀವರಿಸು:ಜುಗುಪ್ಸೆ ಪಡು, ಹೇಸು; ದೆಸೆ: ದಿಕ್ಕು; ಹಿಂಡು: ಗುಂಪು; ಹಾಯ್ದು: ಹಾರು; ಮಸಗು: ಹರಡು; ರವ: ಶಬ್ದ, ಧ್ವನಿ; ಕಳವಳ: ತಳಮಳ, ಗೊಂದಲ; ನಿಮಿಷ: ಕ್ಷಣಾರ್ಧ;

ಪದವಿಂಗಡಣೆ:
ಅಸಿತ +ಪಕ್ಷ+ಅಷ್ಟಮಿಯ+ದಿನ+ ಸಂ
ಧಿಸಿದರ್+ಆಳ್+ಎದ್ದುದು +ವಿರಾಟನ
ಪಶು +ಸಮೂಹವ+ ಮುತ್ತಿದರು +ಗೋಪಾಲಕರ+ ಕೆಡಹಿ
ಹೊಸ +ಮುಖಕೆ +ಸೀವರಿಸಿದವು+ ದೆಸೆ
ದೆಸೆಗೆ +ಹಿಂಡುಗಳ್+ಓಡೆದು +ಹಾಯ್ದವು
ಮಸಗಿತ್+ಅಂಬಾ+ರವದ+ ಕಳವಳವಾಯ್ತು +ನಿಮಿಷದಲಿ

ಅಚ್ಚರಿ:
(೧) ಹಸು ಕೂಗುವುದನ್ನು ಉಲ್ಲೇಖಿಸಿರುವ ಪರಿ – ಮಸಗಿತ್ ಅಂಬಾ ರವದ ಕಳವಳ
(೨) ಕೃಷ್ಣಪಕ್ಷವನ್ನು ಅಸಿತ ಪಕ್ಷವೆಂದು ಕರೆದಿರುವುದು