ಪದ್ಯ ೩೬: ಸೈನ್ಯದ ನಡಿಗೆ ಹೇಗಿತ್ತು?

ರಾಯದಳ ನಡೆಗೊಂಡುದೊಗ್ಗಿನ
ನಾಯಕರು ಮನ್ನೆಯರು ರಾಜಪ
ಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ
ತಾಯಿಮಳಲುಬ್ಬಳಿಸೆ ಜಲನಿಧಿ
ಬಾಯಬಿಡೆ ಗರ್ಜಿಸುವ ನಿಸ್ಸಾ
ಳಾಯತದ ಸೂಳೊದಗೆ ಪಯಣದ ಮೇಲೆ ಪಯಣದಲಿ (ವಿರಾಟ ಪರ್ವ, ೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ರಾಜನ ಸೈನವು ಮುನ್ನಡೆಯಲು, ಸೇನಾನಾಯಕರು ಒಟ್ಟಾಗಿ ಹೊರಟರು, ಸಾಮಂತರು ರಾಜರ ಆಪ್ತರು ಸಂಹ್ರಮದಿಂದ ಹೊರಟರು. ಈ ಸೇನೆಯ ತುಳಿತಕ್ಕೆ ಸಮುದ್ರದ ತಳದ ಮರಳು ಮೇಲೆದ್ದಿತು. ಕಹಳೆಗಳು ಮತ್ತೆ ಮತ್ತೆ ಸರದಿಯಿಂದ ಸದ್ದು ಮಾಡಲು ಸಮುದ್ರವೇ ಬಾಯ್ಬಿಟ್ಟಿತು.

ಅರ್ಥ:
ರಾಯ: ರಾಜ; ದಳ: ಸೈನ್ಯ; ನಡೆ: ಮುನ್ನುಗ್ಗು; ನಾಯಕ: ಮುಖಂಡ ; ಮನ್ನೆಯ: ಗೌರವಕ್ಕೆ ಪಾತ್ರನಾದವ; ಸಂವರಣೆ: ಸಂಗ್ರಹ; ಸೌರಂಭ: ಸಂಭ್ರಮ; ಸಂದಣಿ: ಗುಂಪು; ಮಳಲು: ಮರಳು; ಉಬ್ಬಳಿಸು: ಏರು; ಜಲನಿಧಿ: ಸಮುದ್ರ; ತಾಯಿಮಳಲು: ಸಮುದ್ರದ ಮರಳು; ಬಾಯಬಿಡಿ: ಮೇಲೇಳು; ಗರ್ಜಿಸು: ಆರ್ಭಟಿಸು; ನಿಸ್ಸಾಳ: ಚರ್ಮವಾದ್ಯ; ಸೂಳೊದಗೆ: ಮತ್ತೆ ಮತ್ತೆ ಹೊಡೆತ; ಪಯಣ: ಪ್ರಯಾಣ;

ಪದವಿಂಗಡಣೆ:
ರಾಯದಳ +ನಡೆಗೊಂಡುದ್+ಒಗ್ಗಿನ
ನಾಯಕರು +ಮನ್ನೆಯರು +ರಾಜಪ
ಸಾಯಿತರು +ಸಂವರಣೆ +ಸೌರಂಭದಲಿ +ಸಂದಣಿಸೆ
ತಾಯಿಮಳಲ್+ಉಬ್ಬಳಿಸೆ +ಜಲನಿಧಿ
ಬಾಯಬಿಡೆ +ಗರ್ಜಿಸುವ +ನಿಸ್ಸಾ
ಳಾಯತದ +ಸೂಳೊದಗೆ+ ಪಯಣದ +ಮೇಲೆ +ಪಯಣದಲಿ (ವಿರಾಟ ಪರ್ವ, ೫ ಸಂಧಿ, ೩೬ ಪದ್ಯ)

ಅಚ್ಚರಿ:
(೧) ‘ಸ’ ಕಾರದ ಜೋಡಿ ಪದ – ಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ
(೨) ಪಯಣದ ಮೇಲೆ ಪಯಣ – ಮುನ್ನಡೆಯುತ್ತಿದ್ದರು ಎಂದು ಹೇಳಲು

ಪದ್ಯ ೩೫: ಸೇನೆಯ ಪಯಣ ಹೇಗೆ ಗೋಚರಿಸಿತು?

ಪಳಹರದ ಪಲ್ಲವದ ಪಸರದ
ಪಳಿಯ ಪಟ್ಟಿಯ ತೋಮರದ ಹೊಳೆ
ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ
ಬಿಳುಗೊಡೆಯ ಝಲ್ಲರಿಯ ಜೋಡಿಗ
ಳೊಳಗೆ ಗಗನವು ತೀವಿತೆನೆ ಹೆ
ಕ್ಕಳಿಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ (ವಿರಾಟ ಪರ್ವ, ೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸೇನೆಯು ಮುನ್ನಡೆಯುವಾಗ ಧ್ವಜಗಳ ಮೇಲೆದ್ದವು, ಅಲ್ಲಲ್ಲಿ ಬಟ್ಟೆಯ ಪಟ್ಟಿಗಳು, ತೋಮರಗಳು, ಹೊಳೆಯುವ ಚಾಮರಗಳು, ಆಯುಧಗಳು, ಶ್ವೇತಛತ್ರಿಗಳು, ಝಲ್ಲರಿಗಳಿಂದ ಆಕಾಶವು ತುಂಬಿತೋ ಎನ್ನುವಂತಿರಲು ಸೇನೆಯು ಪಯಾನ ಮಾಡಿತು.

ಅರ್ಥ:
ಪಳಹರ: ಬಾವುಟ, ಧ್ವಜ; ಪಲ್ಲವ: ಚಿಗುರು, ಮೊಳಕೆ; ಪಸರ:ಸಮೂಹ; ಪಳಿ: ವಸ್ತ್ರವಿಶೇಷ; ಪಟ್ಟಿ: ಉದ್ದ ಹೆಚ್ಚಾಗಿ ಅಗಲ ಕಿರಿದಾಗಿರುವ ಬಟ್ಟೆ; ತೋಮರ: ಈಟಿ; ಹೊಳೆ: ಕಾಂತಿ; ಚಮರ:ಚಾಮರ; ಸೀಗುರಿ:ಚಾಮರ , ಚವರಿ; ತಿಂಥಿಣಿ: ಸಮೂಹ; ಡೊಂಕಣಿ: ಈಟಿ; ಬಿಳುಗೊಡೆ: ಬಿಳಿಯ ಛತ್ರಿ; ಝಲ್ಲರಿ: ಚರ್ಮವಾದ್ಯ; ಜೋಡಿ: ಜೊತೆ; ಗಗನ: ಆಗಸ; ತೀವು: ಅಪ್ಪಳಿಸು; ಹೆಕ್ಕಳ: ಹೆಚ್ಚು, ಅತಿಶಯ; ಸೇನೆ: ಸೈನ್ಯ; ಪಯಣ: ಪ್ರಯಾಣ, ಪ್ರಸ್ಥಾನ;

ಪದವಿಂಗಡಣೆ:
ಪಳಹರದ +ಪಲ್ಲವದ +ಪಸರದ
ಪಳಿಯ +ಪಟ್ಟಿಯ +ತೋಮರದ+ ಹೊಳೆ
ಹೊಳೆವ+ ಚಮರದ+ ಸೀಗುರಿಯ +ಡೊಂಕಣಿಯ+ ತಿಂಥಿಣಿಯ
ಬಿಳುಗೊಡೆಯ+ ಝಲ್ಲರಿಯ +ಜೋಡಿಗಳ್
ಒಳಗೆ+ ಗಗನವು+ ತೀವಿತೆನೆ+ ಹೆ
ಕ್ಕಳಿಸಿ +ನಡೆದುದು +ಸೇನೆ +ಪಯಣದ+ ಮೇಲೆ +ಪಯಣದಲಿ (ವಿರಾಟ ಪರ್ವ, ೫ ಸಂಧಿ, ೩೫ ಪದ್ಯ)

ಅಚ್ಚರಿ:
(೧) ‘ಪ’ ಕಾರದ ಜೋಡಿ ಪದಗಳು – ಪಳಹರದ ಪಲ್ಲವದ ಪಸರದ ಪಳಿಯ ಪಟ್ಟಿಯ
(೨) ಡೊಂಕಣಿ, ತಿಂಥಿಣಿ – ಪ್ರಾಸ ಪದಗಳು
(೩) ದೂರದ ಪ್ರಯಾಣ ಮಾಡಿದರು ಎಂದು ಹೇಳಲು – ‘ಪಯಣದ ಮೇಲೆ ಪಯಣ’ ಪದದ ಬಳಕೆ