ಪದ್ಯ ೩೪: ದುರ್ಯೋಧನನು ಹೊರಡುವಾಗ ಪರಿಸರದಲ್ಲಿ ಏನನ್ನು ಕಂಡನು?

ಹೊಗೆದುದಂಬರವವನಿ ನಡುಗಿತು
ಗಗನ ಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದುವರುಣಾಂಬುಗಳಧಾರೆಗಳು
ದಿಗುವಳಯದಲಿ ಧೂಮಕೇತುಗ
ಳೊಗೆದವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ (ವಿರಾಟ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಸೈನ್ಯದ ಜೊತೆಗೆ ವಿರಾಟನಗರಕ್ಕೆ ಹೊರಟನು, ಆಗ ಆಕಾಶದಲ್ಲಿ ಹೊಗೆಯು ಆವರಿಸಿತು, ಭೂಮಿ ನಡುಗಿತು, ಸೂರ್ಯನ ಸುತ್ತ ನಕ್ಷತ್ರಗಳು ಕಾಣಿಸಿದವು ಕೆಂಪುನೀರಿನ ಧಾರೆ ಸುರಿದವು, ಆಕಾಶದಲ್ಲಿ ಧೂಮಕೇತುಗಳು ಕಂಡವು. ಅನೇಕ ಉತ್ಪಾತಗಳನ್ನು ಲೆಕ್ಕಿಸದೆ ದುರ್ಯೋಧನನು ರಭಸದಲಿ ಊರನ್ನು ಬಿಟ್ಟು ಹೊರಟನು.

ಅರ್ಥ:
ಹೊಗೆ: ಧೂಮ; ಅಂಬರ: ಆಗಸ, ಬಾನು; ಅವನಿ: ಭೂಮಿ; ನಡುಗು: ಅಲುಗಾಡು; ಗಗನ: ಆಕಾಶ; ಮಣಿ: ಬೆಲೆಬಾಳುವ ಹರಳು; ಗಗನಮಣಿ: ಸೂರ್ಯ; ಪರಿವೇಷ: ಸುತ್ತುವರಿದಿರುವುದು, ಪ್ರಭಾವಳಿ; ತಾರೆ: ನಕ್ಷತ್ರ; ಹೊಳೆ: ಪ್ರಕಾಶಿಸು; ಸುರಿ: ಬೀಳು; ಅರುಣಾಂಬು: ಕೆಂಪುನೀರು; ಧಾರೆ; ವರ್ಷ; ದಿಗುವಳಯ: ದಿಕ್ಕು; ಧೂಮಕೇತು: ಉಲ್ಕೆ; ಒಗೆದವ್: ಹೊರಹಾಕು; ಅವನಿಪ: ರಾಜ; ಕೋಟಿ: ಲೆಕ್ಕಕ್ಕೆ ಸಿಗದ; ಪುರ: ಊರು; ಹೊರವಂಟ: ಹೊರಟನು; ಸಗಾಢ:ಜೋರು; ಉತ್ಪಾತ: ಅಪಶಕುನ;

ಪದವಿಂಗಡಣೆ:
ಹೊಗೆದುದ್+ಅಂಬರವ್+ಅವನಿ+ ನಡುಗಿತು
ಗಗನ ಮಣಿ +ಪರಿವೇಷದಲಿ +ತಾ
ರೆಗಳು +ಹೊಳೆದವು +ಸುರಿದುವ್+ಅರುಣಾಂಬುಗಳ+ಧಾರೆಗಳು
ದಿಗುವಳಯದಲಿ +ಧೂಮಕೇತುಗಳ್
ಒಗೆದವ್+ಎನಲ್+ಉತ್ಪಾತ +ಕೋಟಿಯ
ಬಗೆಯದ್+ಅವನಿಪ+ ಪುರವ+ ಹೊರವಂಟನು +ಸಗಾಢದಲಿ

ಅಚ್ಚರಿ:
(೧) ಗ್ರಹಣವನ್ನು ಸೂಚಿಸುವ ಸಾಲು – ಗಗನಮಣಿ ಪರಿವೇಷದಲಿ ತಾರೆಗಳು ಹೊಳೆದವು, ಸೂರ್ಯನ ಬೆಳಕಿಗೆ ತಾರೆಗಳ ಹೊಳೆಯಲು ಅಸಾಧ್ಯ, ಆದರೆ ಸೂರ್ಯನ ಪ್ರಭಾವಳಿಯಲ್ಲಿ ತಾರೆಗಳು ಹೊಳೆದವು ಎಂದರೆ ಸೂರ್ಯನ ಪ್ರಭಾವ ಕಡಿಮೆಯಾಗಿರಬಹುದು, ಎಂದರೆ ಸೂರ್ಯನಿಗೆ ಚಂದ್ರನು ಅಡ್ಡಬಂದ ಗ್ರಹಣವಾಗಿರಬೇಕೆಂದು ವಿವರಿಸಬಹುದು
(೨) ಅಪಶಕುನಗಳು: ಭೂಮಿ ನಡುಗಿತು, ಆಗಸದಲ್ಲಿ ಹೊಗೆಯು ಆವರಿಸುವುದು, ಕೆಂಪಾದ ನೀರಿನ ಮಳೆ, ಧೂಮಕೇತುವಿನ ಗೋಚರ, ಉತ್ಪಾತಗಳ ಬೀಳುವಿಕೆ
(೩) ಅವನಿ – ೧, ೬ ಸಾಲಿನ ಮೊದಲ ಪದದಲ್ಲಿ ಬರುವ ಪದ, ೧ ಸಾಲಿನಲ್ಲಿ ಭೂಮಿ ಯ ಅರ್ಥ, ೬ ಸಾಲಿನಲ್ಲಿ ರಾಜ ಎಂದು ಅರ್ಥ

ನಿಮ್ಮ ಟಿಪ್ಪಣಿ ಬರೆಯಿರಿ