ಪದ್ಯ ೨೬: ಕೃಷ್ಣನು ಧರ್ಮರಾಯನಿಗೆ ಹೇಗೆ ಆಶೀರ್ವದಿಸಿದನು?

ಮಣಿದು ಹಿಡಿದೆತ್ತಿದನು ರಾಯನ
ಹಣೆಯನನುಪಮ ಕರುಣನಿಧಿ ಕಡು
ಗುಣಿಯೆ ಬಾಯೆನ್ನಾನೆ ಬಾಯೆಂದಪ್ಪಿ ಮೈದಡವಿ
ಗುಣವಹುದು ನಿನಗಿಂದುಕುಲ ದಿನ
ಮಣಿಯೆ ದೀಕ್ಷಿತನಾಗು ಮದವಾ
ರಣನೆ ದೀಕ್ಷಿತನಾಗೆನುತ ಬೋಳೈಸಿದನು ಹರಸಿ (ಸಭಾ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಧರ್ಮರಾಯನ ಬೇಡಿಕೆಯನ್ನು ಕೇಳಿ, ಸಂತೋಷಭರಿತನಾಗಿ ಕರುಣಾನಿಧಿಯಾದ ಶ್ರೀಕೃಷ್ಣನು ತಲೆ ಬಾಗಿ ಧರ್ಮಜನನ್ನು ಮೇಲೆತ್ತಿ, “ಮಹಾಸದ್ಗುಣಶಾಲಿಯೇ, ಬಾ, ಹಿರಿಯವನೆ ಬಾ, ಎಂದು ಪ್ರೀತಿಯಿಂದ ಅಪ್ಪಿ ಮೈದಡವಿ, ಚಂದ್ರವಂಶ ಕುಲದ ಸೂರ್ಯನೆ, ನೀನು ದೀಕ್ಷಿತನಾಗುವುದು ಎಲ್ಲಾ ರೀತಿಯಲ್ಲಿ ಸರಿಯಾಗಿದೆ. ನನ್ನ ಮದದಾನೆಯೆ ನೀನೆ ದೀಕ್ಷಿತನಾಗು ಎನ್ನುತ್ತಾ ಧರ್ಮರಾಯನ ತಲೆಯ ಮೇಲೆ ಕೈಯಾಡಿಸಿ ಪ್ರೀತಿಯಿಂದ ಹರಸಿದನು.

ಅರ್ಥ:
ಮಣಿದು: ಸಮ್ಮತಿಸು; ಹಿಡಿದು: ಗ್ರಹಿಸು; ಎತ್ತು: ಮೇಲೇಳಿಸು; ರಾಯ: ರಾಜ; ಹಣೆ: ಲಲಾಟ; ಅನುಪಮ: ಉತ್ಕೃಷ್ಟವಾದುದು; ಕರುಣ: ದಯೆ; ನಿಧಿ: ಸಂಪತ್ತು, ಸಮುದ್ರ; ಕಡು: ವಿಶೇಷ; ಗುಣಿ: ಗುಣಉಳ್ಳವ; ಬಾ: ಆಗಮನ, ಹತ್ತಿರಕ್ಕೆ ಕರೆ; ಆನೆ: ದೊಡ್ಡದು; ಅಪ್ಪಿ: ಅಪ್ಪುಗೆ, ತಬ್ಬಿಕೊಳ್ಳು; ಮೈ: ತನು; ಮೈದಡವಿ: ಮೈಯನ್ನು ಸವರಿ; ಗುಣ: ನಡತೆ, ಧರ್ಮ; ಇಂದು: ಚಂದ್ರ; ಕುಲ: ವಂಶ; ದಿನಮಣಿ: ಸೂರ್ಯ; ದೀಕ್ಷೆ:ಪವಿತ್ರ ಕಾರ್ಯಕ್ಕಾಗಿ ಆರಂಭದಲ್ಲಿ ನಡೆಸುವ ಸಂಸ್ಕಾರ; ವಾರಣ: ಆನೆ; ಮದ: ಸೊಕ್ಕು; ಬೋಳೈಸು: ಕೈಯಾಡಿಸು; ಹರಸು: ಆಶೀರ್ವದಿಸು;

ಪದವಿಂಗಡಣೆ:
ಮಣಿದು +ಹಿಡಿದ್+ಎತ್ತಿದನು +ರಾಯನ
ಹಣೆಯನ್+ಅನುಪಮ +ಕರುಣನಿಧಿ+ ಕಡು
ಗುಣಿಯೆ +ಬಾ +ಎನ್ನಾನೆ+ ಬಾ+ಯೆಂದ್+ಅಪ್ಪಿ+ ಮೈದಡವಿ
ಗುಣವಹುದು +ನಿನಗ್+ಇಂದುಕುಲ+ ದಿನ
ಮಣಿಯೆ +ದೀಕ್ಷಿತನಾಗು +ಮದವಾ
ರಣನೆ+ ದೀಕ್ಷಿತನಾಗ್+ಎನುತ+ ಬೋಳೈಸಿದನು+ ಹರಸಿ

ಅಚ್ಚರಿ:
(೧)ಬಾ ಮತ್ತು ದೀಕ್ಷಿತ ಪದಗಳ ಜೋಡಿ ಬಳಕೆ – ಕಡುಗುಣಿಯೆ ಬಾ, ಎನ್ನಾನೆ ಬಾ, ದೀಕ್ಷಿತನಾಗು ಮದವಾರಣೆ ದೀಕ್ಷಿತನಾಗು
(೨) ಧರ್ಮರಾಯನಿಗೆ ಬಳಸಿದ ಗುಣವಾಚಕಗಳು – ಕಡುಗುಣಿಯೆ, ಎನ್ನಾನೆ, ಇಂದುಕುಲ ದಿನಮಣಿ, ಮದವಾರಣ
(೩) ಬೋಳೈಸು, ಅಪ್ಪಿ, ಮೈದಡವಿ – ಪ್ರೀತಿ/ಸ್ನೇಹ ವನ್ನು ತೋರ್ಪಡಿಸುವ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ