ಪದ್ಯ ೩೭: ರಾಜಸೂಯ ಯಾಗವು ಹೇಗೆ ರಂಜಿಸಿತು?

ಆ ಋಷಿಗಳಾ ಕ್ಷತ್ರ ಜನದಾ
ಭೂರಿ ನಿಕರದ ವೇದಶಾಸ್ತ್ರ ವಿ
ಚಾರಣರ ಚಾರಣರ ಸಂಗೀತಾದಿ ಕಳಕಳದ
ಆರುಭಟೆ ಮಥಿತಾಂಬುನಿಧಿಯೊಡ
ನಾರುವವೊಲುಬ್ಬೆದ್ದ ಬಲು ಜ
ರ್ಝಾರವೆನೆ ಜಡಿದುದು ಯುಧಿಷ್ಠಿರ ರಾಜಸೂಯದಲಿ (ಸಭಾ ಪರ್ವ, ೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆ ಋಷಿಗಳು, ಆ ಕ್ಷತ್ರಿಯರು, ಆ ಜನಸಂದಣಿ, ಆ ಬ್ರಾಹ್ಮಣ ಸಭೆ ವೇದಶಾಸ್ತ್ರವಿಚಾರ, ಚಾರಣರ ಘೋಷಣೆಗಳು ಸಂಗೀತದ ಸದ್ದು ಇವೆಲ್ಲವೂ ಸಮುದ್ರವನ್ನು ಕಡೆದರೆ ಆಗುವ ಸದ್ದಿನಂತೆ ಉಬ್ಬೆದ್ದು ರಾಜಸೂಯಯಾಗವು ರಂಜಿಸಿತು.

ಅರ್ಥ:
ಋಷಿ: ಮುನಿ; ಕ್ಷತ್ರ: ಕ್ಷತ್ರಿಯರು; ಭೂರಿ: ಹೆಚ್ಚು, ಅಧಿಕ; ನಿಕರ: ಗುಂಪು; ವೇದ: ಶೃತಿ; ಶಾಸ್ತ್ರ: ಧರ್ಮಸೂಕ್ಷ್ಮಗಳನ್ನು ತಿಳಿಸುವ; ವಿಚಾರಣ: ವಿಷಯವನ್ನು ಪರೀಕ್ಷಿಸುವುದು; ಚಾರಣ:ತಿರುಗಾಡುವಿಕೆ, ಸಂಚಾರ; ಸಂಗೀತ: ಗೀತೆ, ಹಾಡು; ಕಳಕಳ: ಸದ್ದು; ಆರುಭಟೆ: ಗಟ್ಟಿಯಾದ ಕೂಗು, ಗರ್ಜನೆ; ಮಥಿತ: ಕಡಿ, ಅಲುಗಾಡಿಸು; ಅಂಗುಧಿ: ಸಮುದ್ರ; ನಿಧಿ: ಐಶ್ವರ್ಯ; ಉಬ್ಬೆದ್ದು: ರಭಸ; ಬಲು: ಜೋರು; ಜರ್ಝಾರ: ಗಟ್ಟಿಯಾದ ಶಬ್ದ; ಜಡಿ: ಕೂಗು;

ಪದವಿಂಗಡಣೆ:
ಆ +ಋಷಿಗಳ+ಆ+ ಕ್ಷತ್ರ+ ಜನದ+ಆ
ಭೂರಿ +ನಿಕರದ +ವೇದಶಾಸ್ತ್ರ +ವಿ
ಚಾರಣರ +ಚಾರಣರ +ಸಂಗೀತಾದಿ+ ಕಳಕಳದ
ಆರುಭಟೆ +ಮಥಿತ+ಅಂಬುನಿಧಿ+ಯೊಡನ
ಆರುವವೊಲ್+ಉಬ್ಬೆದ್ದ +ಬಲು +ಜ
ರ್ಝಾರವೆನೆ +ಜಡಿದುದು +ಯುಧಿಷ್ಠಿರ+ ರಾಜಸೂಯದಲಿ

ಅಚ್ಚರಿ:
(೧) ಆ ಸ್ವರದ ಬಳಕೆ
(೨) ಚಾರಣ, ಕಳ – ಜೋಡಿ ಪದವಾಗಿ ಬಳಸಿರುವುದು
(೩) ಆರುಭಟೆ, ಆರುವವೊಲ್ – ಆರು ಪದದ ಬಳಕೆ

ಪದ್ಯ ೩೬: ಯಜ್ಞಮಂಟಪದಲ್ಲಿ ಯಾವ ಕಾರ್ಯಕ್ರಮಗಳು ನಡೆದವು?

ವೇದ ವೇದಾಂಗದ ರಹಸ್ಯ ವಿ
ವಾದ ತರ್ಕಸ್ಮೃತಿಗಳಂತ
ರ್ವೇದಿಯಲಿ ಘನಲಹರಿ ಮಸಗಿತು ತಂತ್ರ ಸಂತತಿಯ
ಆದುದತ್ತಲು ಗದ್ಯ ಪದ್ಯ ವಿ
ನೋದ ನರ್ತನ ವಾದ್ಯ ಸಂಗೀ
ತಾದಿ ಸಕಲ ಕಲಾನುರಂಜನೆ ರಾಜವರ್ಗದಲಿ (ಸಭಾ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ವೇದ ವೇದಾಂಗಗಳ ರಹಸ್ಯಗಳನ್ನು ಕುರಿತ ವಾದ, ತರ್ಕ, ಸ್ಮೃತಿಗಳ ವಿಚಾರವು ಅಂತರ್ವೇದಿಯ ಬಳಿ ನಡೆಯಿತು. ಇತ್ತ ರಾಜರ ಸಮ್ಮುಖದಲ್ಲಿ ಗದ್ಯ, ಪದ್ಯ, ವಿನೋದ, ನರ್ತನ, ಸಂಗೀತ, ವಾದ್ಯ ವಾದನಗಳ ಕಲಾರಂಜನೆ ನಡೆಯಿತು.

ಅರ್ಥ:
ವೇದ: ಶೃತಿ; ವೇದಾಂಗ: ಉಪನಿಷತ್ತು ಮತ್ತಿತರ ಭಾಗಗಳು; ರಹಸ್ಯ: ಗುಟ್ಟು; ವಿವಾದ: ವಾಗ್ವಾದ; ತರ್ಕ: ಊಹೆ, ಆರು ದರ್ಶನಗಳಲ್ಲಿ ಒಂದು; ಸ್ಮೃತಿ: ಧರ್ಮ ಸಂಹಿತೆ; ಅಂತರ್ವೇದಿ: ಯಜ್ಞಶಾಲೆಯ ಒಳಜಗುಲಿ; ಘನ: ಶ್ರೇಷ್ಥ; ಲಹರಿ: ಅಲೆ, ತರಂಗ; ಮಸಗು: ಹೆಚ್ಚಾಗು, ಅಧಿಕವಾಗು; ತಂತ್ರ: ಉಪಾಯ, ತತ್ವ; ಸಂತತಿ: ಗುಂಪು, ಸಮೂಹ; ಗದ್ಯ: ಆಡುವ ಮಾತು, ಪದ್ಯವಲ್ಲದುದು; ಪದ್ಯ: ಕಾವ್ಯ; ವಿನೋದ: ಸಂತಸ; ನರ್ತನ: ನೃತ್ಯ; ವಾದ್ಯ: ವೀಣೆ ಮೊದಲಾದ ಸಂಗೀತದ ಸಾಧನಗಳು; ಸಂಗೀತ: ಹಾಡು; ಸಕಲ: ಎಲ್ಲಾ; ಕಲ: ಸಂಗೀತ, ನೃತ್ಯ ಮುಂತಾದ ಕಲೆ; ರಂಜನೆ: ಸಂತೋಷಪಡಿಸುವ; ರಾಜವರ್ಗ: ರಾಜರ ಗುಂಪು;

ಪದವಿಂಗಡಣೆ:
ವೇದ +ವೇದಾಂಗದ+ ರಹಸ್ಯ+ ವಿ
ವಾದ+ ತರ್ಕ+ಸ್ಮೃತಿಗಳ್+ಅಂತ
ರ್ವೇದಿಯಲಿ +ಘನಲಹರಿ+ ಮಸಗಿತು+ ತಂತ್ರ +ಸಂತತಿಯ
ಆದುದ್+ಅತ್ತಲು +ಗದ್ಯ +ಪದ್ಯ +ವಿ
ನೋದ +ನರ್ತನ +ವಾದ್ಯ +ಸಂಗೀ
ತಾದಿ +ಸಕಲ +ಕಲಾನುರಂಜನೆ +ರಾಜ+ವರ್ಗದಲಿ

ಅಚ್ಚರಿ:
(೧) ವೇದ, ವಾದ, ವೇದಿ – ೧-೩ ಸಾಲಿನ ಮೊದಲ ಪದಗಳು
(೨) ವಿವಾದ, ವಿನೋದ – ೧, ೪ ಸಾಲಿನ ಕೊನೆಯ ಪದ “ವಿ” ಕಾರದಿಂದ ಕೊನೆಗೊಳ್ಳುವುದು

ಪದ್ಯ ೩೫: ರಾಜಸೂಯ ಯಜ್ಞದ ಭೋಜನವು ಹೇಗಿತ್ತು?

ದಣಿದುದಲ್ಲಿ ಸುರೌಘವೀ ದ
ಕ್ಷಿಣೆಯಲೂಟದಲಾದರಣೆ ಮ
ನ್ನಣೆಯಲವನೀಸುರರು ಹಿಗ್ಗಿದರಿಲ್ಲಿ ಪಿರಿದಾಗಿ
ಎಣಿಸಬಹುದೇ ಭೋಜನದ ಸಂ
ದಣಿಯ ನೀಸೈಸೆಂದು ಭಾರಾಂ
ಕಣದ ಭೂರಿಯ ವಿವರವನು ಬಣ್ಣಿಸುವನಾರೆಂದ (ಸಭಾ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ದೇವಲೋಕದಲ್ಲಿ ದೇವತೆಗಳು ತಮಗೆ ಸಂದ ಹವಿಸ್ಸಿನಿಂದ ತೃಪ್ತರಾದರು. ಮರ್ತ್ಯಲೋಕದಲ್ಲಿ ಬ್ರಾಹ್ಮಣರು ಆದರ, ದಕ್ಷಿಣೆ, ಗೌರವಗಳನ್ನು ಪಡೆದು ಸಂತೋಷಪಟ್ಟರು. ಊಟಮಾಡಿದ ಜನಗಳನ್ನು ಎಷ್ಟೆಂದು ಎಣಿಸಲು ಸಾಧ್ಯವೆ? ಆ ಭೋಜನದ ಚಪ್ಪರದ ಭೂರಿಭೋಜನದ ವಿವರವನ್ನು ವರ್ಣಿಸುವವರಾರು?

ಅರ್ಥ:
ದಣಿ: ಆಯಾಸ; ಸುರ: ದೇವತೆ; ಔಘ: ಗುಂಪು; ದಕ್ಷಿಣೆ: ಸಂಭಾವನೆ; ಊಟ: ಭೋಜನ; ಆದರಣೆ: ಉಪಚಾರ; ಮನ್ನಣೆ: ಗೌರವ; ಅವನೀಸುರ: ಬ್ರಾಹ್ಮಣ; ಹಿಗ್ಗು: ಸಂತೋಷಪಡು; ಪಿರಿ: ದೊಡ್ಡದು; ಎಣಿಸು: ಲೆಕ್ಕ ಮಾಡು; ಸಂದಣಿ: ಗುಂಪು; ಅಂಕಣ: ಚದರ; ಭೂರಿ: ಹೆಚ್ಚು; ವಿವರ: ವಿಸ್ತಾರ; ಬಣ್ಣಿಸು: ವಿವರಿಸು;

ಪದವಿಂಗಡಣೆ:
ದಣಿದುದ್+ಅಲ್ಲಿ +ಸುರೌಘವ್+ ಈ+ ದ
ಕ್ಷಿಣೆಯಲ್+ಊಟದಲ್+ಆದರಣೆ+ ಮ
ನ್ನಣೆಯಲ್+ಅವನೀಸುರರು+ ಹಿಗ್ಗಿದರ್+ಇಲ್ಲಿ +ಪಿರಿದಾಗಿ
ಎಣಿಸಬಹುದೇ +ಭೋಜನದ +ಸಂ
ದಣಿಯ +ನೀಸೈಸೆಂದು+ ಭಾರ+
ಅಂಕಣದ+ ಭೂರಿಯ +ವಿವರವನು +ಬಣ್ಣಿಸುವನ್+ಆರೆಂದ

ಅಚ್ಚರಿ:
(೧) ಮನ್ನಣೆ, ಆದರಣೆ, ದಕ್ಷಿಣೆ, ಊಟ – ಬ್ರಾಹ್ಮಣರನ್ನು ಹಿಗ್ಗಿಸುವ ಬಗೆ
(೨) ದಣಿದು – ಆಯಾಸಪಡು, ಹಿಗ್ಗು – ಸಂತೋಷಪಡು, ಎರಡು ವಿರುದ್ಧ ಪದವನ್ನು ಬಳಸಿ ಒಂದೇ ಅರ್ಥವನ್ನು ನೀಡುವ ರೀತಿ

ಪದ್ಯ ೩೪: ಯಜ್ಞದ ಹವಿಸ್ಸು ಯಾರನ್ನು ತಲುಪಿತು?

ತ್ರಿದಿವವನು ತುಡುಕಿತು ಹವಿರ್ಗಂ
ಧದ ಗಢಾವಣೆ ಧೂತ ಧೂಮದ
ತುದಿ ತಪೋಲೋಕದಲಿ ತ್ಳಿತುದು ಸತ್ಯಲೋಕದಲಿ
ತ್ರಿದಶರುರೆ ಬಾಯಾಡಿಸಿದರ
ಗ್ಗದ ಧೃವಾದಿಗಳನು ಸುತೃಪ್ತಿಯ
ಹೊದರುದೇಗಿನ ಹೊಟ್ಟೆ ನೂಕಿತು ಹರಿಹಯಾದಿಗಳ (ಸಭಾ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹವಿಸ್ಸಿನ ಗಂಧಾದಿಗಳ ಸುವಾಸನೆ ಸ್ವರ್ಗವನ್ನು ಆವರಿಸಿತು, ಅಗ್ನಿಯ ದೂತನಾದ ಹೊಗೆಯು ತಪೋಲೋಕ, ಸತ್ಯಲೋಕಗಳನ್ನು ತಲುಪಿತು. ಸ್ವರ್ಗದಲ್ಲಿ ದೇವತೆಗಳು ಅತಿಶಯವಾಗಿ ಹವಿಸ್ಸನ್ನು ಸೇವಿಸಿ, ಸಂತೃಪ್ತಿಯನ್ನು ಹೊಂದು, ದೇವೇಂದ್ರನೇ ಮೊದಲಾದ ದೇವತೆಗಳು ಸಂತೃಪ್ತರಾಗಿ ತೇಗಿದರು.

ಅರ್ಥ:
ತ್ರಿದಿವ: ಸ್ವರ್ಗ; ತುಡುಕು:ಮುಟ್ಟು; ಹವಿಸ್ಸು: ಯಜ್ಞದಲ್ಲಿ ಆಹುತಿ ಕೊಡುವ ತುಪ್ಪ; ಗಂಧ: ಚಂದನ; ಗಡಾವಣೆ: ಗಟ್ಟಿಯಾದ ಶಬ್ದ; ಧೂತ: ಸೇವಕ; ಧೂಮ: ಹೊಗೆ; ತುದಿ: ಅಗ್ರಭಾಗ; ಲೋಕ: ಜಗತ್ತು; ತಳಿತ:ಚಿಗುರಿದ; ಉರೆ: ಅತಿಶಯವಾಗಿ; ಬಾಯಿ: ನ್ನಲು, ಕುಡಿಯಲು, ಮಾತನಾಡಲು ಯಾ ಶಬ್ದದ ಉದ್ಗಾರಗಳಿಗೂ ಬಳಸುವ ಮುಖದ ಅಂಗ;ಆಡಿಸು: ಬಾಯಾಡಿಸು: ತಿನ್ನು; ಅಗ್ಗ: ಶ್ರೇಷ್ಠ; ಧೃವಾದಿ: ದ್ರವ್ಯ ಮುಂತಾದ; ತೃಪ್ತಿ: ಸಂತುಷ್ಟಿ; ಹೊದರು: ಹೊರಹಾಕು; ತೇಗು: ಊಟವಾದ ಮೇಲೆ ಬಾಯಿಂದ ಬರುವ ಶಬ್ದ; ಹೊಟ್ಟೆ: ಉದರ; ನೂಕು: ತಳ್ಳು; ಹರಿಹಯ: ಇಂದ್ರ; ಆದಿ: ಮುಂತಾದ;

ಪದವಿಂಗಡಣೆ:
ತ್ರಿದಿವವನು+ ತುಡುಕಿತು+ ಹವಿರ್+
ಗಂಧದ +ಗಢಾವಣೆ +ಧೂತ +ಧೂಮದ
ತುದಿ +ತಪೋಲೋಕದಲಿ+ ತಳಿತುದು +ಸತ್ಯಲೋಕದಲಿ
ತ್ರಿದಶರ್+ಉರೆ +ಬಾಯಾಡಿಸಿದರ್
ಅಗ್ಗದ +ಧೃವಾದಿಗಳನು +ಸುತೃಪ್ತಿಯ
ಹೊದರು+ತೇಗಿನ +ಹೊಟ್ಟೆ +ನೂಕಿತು +ಹರಿಹಯಾದಿಗಳ

ಅಚ್ಚರಿ:
(೧) ಚೆನ್ನಾಗಿ ಊಟಮಾಡಿದರು ಎಂದು ಹೇಳಲು – ಸುತೃಪ್ತಿಯ ಹೊದರು ತೇಗಿನ ಹೊಟ್ಟೆ ನೂಕಿತು – ತೇಗನ್ನು ಹೊಟ್ಟೆ ನೂಕಿತು
(೨) ತ್ರಿವಿದ, ತ್ರಿದಶ – ಸ್ವರ್ಗವನ್ನು ಕರೆಯಲುಬಳಸಿದ ಪದ, ೧,೪ ಸಾಲಿನ ಮೊದಲ ಪದ
(೩) “ತ” ಕಾರದ ಪದಗಳ ಜೋಡಣೆ – ತುದಿ ತಪೋಲೋಕದಲಿ ತಳಿತುದು

ಪದ್ಯ ೩೩: ಯಜ್ಞಕುಂಡದಲ್ಲಿ ಹವಿಸ್ಸನ್ನು ಹೇಗೆ ನೀಡಲಾಯಿತು?

ವ್ಯಾಹೃತಿಯ ಶಿಕ್ಷಾಕ್ಷತದ ವಿಮ
ಳಾಹುತಿ ಸ್ವಾಹಾ ವಷಟ್ಕೃತಿ
ಸೋಹಿ ತಂದುದು ಸುರರ ಸುಹವಿರ್ಭಾಗ ಭೋಗಿಗಳ
ಲೋಹಿತಾಶ್ವನ ರಚನೆಯೊಳು ಹರಿ
ಸಾಹರಿಯೊಳುಬ್ಬೆದ್ದವರ್ಚಿಗ
ಳಾಹ ಸಪ್ತಕವೋ ಸಹಸ್ರಕವೆನಿಸಿ ಪೊಸತಾಯ್ತು (ಸಭಾ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ವ್ಯಾಹೃತಿ, ಶಿಕ್ಷಾಕ್ಷತ, ಸ್ವಾಹಾ, ವಷಟ್ಕಾರಗಳ ಪವಿತ್ರವಾದ ಆಹುತಿಗಳು ಹವಿರ್ಭಾಗವನ್ನು ಭೋಗಿಸುವ ದೇವತೆಗಳನ್ನು ಸೋವಿ ಎಳೆತಂದಿತು. ಹವಿರ್ಭಾಗಗಳನ್ನು ಕೊಟ್ಟಾಗ ಅಗ್ನಿಯ ಜ್ವಾಲೆಗಳು ಏಳೋ, ಸಾವಿರವೋ ಎನಿಸುವಂತೆ ವರ್ಧಿಸಿದವು.

ಅರ್ಥ:
ವ್ಯಾಹೃತಿ: ಭೂ: ಭುವ ಸ್ವ: ಮಹ: ಜನ: ತಪ: ಸತ್ಯ: ಇತ್ಯಾದಿ ಶಬ್ದಗಳು; ಶಿಕ್ಷಾಕ್ಷತ: ಮಂತಪೂತವಾದ ಅಕ್ಷತೆ; ಆಹುತಿ: ಯಜ್ಞದಲ್ಲಿ ಅರ್ಪಿಸುವ ದ್ರವ್ಯ; ವಿಮಳ: ನಿರ್ಮಲ; ಸ್ವಾಹ: ಹವಿಸ್ಸನ್ನು ದೇವತೆಗಳಿಗೆ ಕೊಡಲು ಬಳಸುವ ಪದ; ವಷಟ್: ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವುದು; ಸೋಹಿ: ನಾನೆ ಪರಮಾತ್ಮನೆಂಬ ಭಾವವುಳ್ಳವನು; ಸುರ: ದೇವತೆಗಳು; ಹವಿಸ್ಸು: ಹವಿ, ಚರು; ಹವಿ:ಯಜ್ಞದಲ್ಲಿ ಆಹುತಿ ಕೊಡುವ ತುಪ್ಪ;ಭೋಗಿ: ತಿನ್ನುವ, ಉಣ್ಣುವ; ರಚನೆ: ನಿರ್ಮಾಣ, ಸೃಷ್ಟಿ; ಹರಿ: ನೆರವೇರು; ಹರಿಸಾಹರಿ: ಹವಿಸ್ಸನ್ನು ಕೊಡುವಾಗ ಹರಿಸಿದ ತುಪ್ಪ;ಉಬ್ಬೆದ್ದ: ಉತ್ಸಾಹದಿಂದ ಮೇಲೇಳು; ಅರ್ಚಿಗಳ್: ಅರ್ಚನೆ ಮಾಡುವುದು; ಆಹ: ಆಗುವವ; ಸಪ್ತ: ಏಳು; ಸಹಸ್ರ: ಸಾವಿರ; ಪೊಸತು: ಹೊಸತು;

ಪದವಿಂಗಡಣೆ:
ವ್ಯಾಹೃತಿಯ+ ಶಿಕ್ಷಾಕ್ಷತದ +ವಿಮಳ
ಆಹುತಿ +ಸ್ವಾಹಾ +ವಷಟ್ಕೃತಿ
ಸೋಹಿ +ತಂದುದು +ಸುರರ+ ಸುಹವಿರ್ಭಾಗ+ ಭೋಗಿಗಳ
ಲೋಹಿತಾಶ್ವನ +ರಚನೆಯೊಳು +ಹರಿ
ಸಾಹರಿಯೊಳ್+ಉಬ್ಬೆದ್ದವ್+ಅರ್ಚಿಗಳ್
ಆಹ +ಸಪ್ತಕವೋ +ಸಹಸ್ರಕವ್+ಎನಿಸಿ+ ಪೊಸತಾಯ್ತು

ಅಚ್ಚರಿ:
(೧) ಯಜ್ಞದಾಹುತಿಯ ವರ್ಣನೆ ಕಣ್ಣಿಗೆ ಕಟ್ಟುವಹಾಗಿದೆ

ಪದ್ಯ ೩೨: ವಿದ್ವಾಂಸರ ಚರ್ಚೆ ಹೇಗೆ ನಡೆದಿತ್ತು?

ಏವಮೇವಾಸ್ಮಾತ್ತದಿತಿ ಸಂ
ಭಾವನೀಯಮಿದಂ ಚ ನೈತ
ನ್ನೆವಮಿದ ಮೇವಂ ಚ ಶೃತಿ ಸಂಸಿದ್ಧಮಿದವೆನಲು
ಕೋವಿದರ ಕಳಕಳಿಕೆಯನ್ಯೋ
ನ್ಯಾವಮರ್ದದ ರಭಸವೀ ಭೂ
ಪಾವಳಿಗಳುಪಹಾಸ್ಯ ಘೋಷಕೆ ಕವಚವಾಯ್ತೆಂದ (ಸಭಾ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ವಿದ್ವಾಂಸರ ತರ್ಕದ ಮಾತುಗಳು, “ಹೀಗೆಂದು ಇಲ್ಲಿ ಹೊಂದುತ್ತದೆ, ಮತ್ತು ಇಲ್ಲಿ ಬಂದೊದಗುತ್ತದೆ. ಇಲ್ಲಿ ಹೀಗಿಲ್ಲ, ಇದು ಶೃತಿಯಿಂದ ಸಿದ್ಧವಾಗುತ್ತದೆ,” ಹೀಗೆ ಮುಂದುವರೆಯಲು, ಪರಸ್ಪರ ತರ್ಕದ ರಭಸವು ಅಲ್ಲಿ ಕುಳಿತಿದ್ದ ರಾಜರ ನಗುವಿಗೆ ಕಾರಣವಾಯಿತು.

ಅರ್ಥ:
ಎನಲು: ಹೇಳಲು; ಕೋವಿದ: ವಿದ್ವಾಂಸ; ಕಳಕಳಿ: ಆಸಕ್ತಿ; ಅನ್ಯೋನ್ಯ:ಪರಸ್ಪರ ಪ್ರೀತಿ; ರಭಸ: ವೇಗ; ಭೂಪ: ರಾಜ; ಭೂಪಾವಳಿ: ರಾಜರ ಸಾಲು; ಉಪಹಾಸ್ಯ: ನಗು; ಘೋಷ: ಜೋರಾಗಿ ಕೂಗು; ಕವಚ: ರಕ್ಷೆ; ಸಂಭಾವನೀಯ: ಗೌರವಕ್ಕೆ ಅರ್ಹನಾದ; ಶೃತಿ: ವೇದ;

ಪದವಿಂಗಡಣೆ:
ಏವಮ್+ಏವ+ಅಸ್ಮಾತ್+ತದ್+ಇತಿ+ ಸಂ
ಭಾವನೀಯಂ+ಇದಂ +ಚ +ನೈತನ್
ಏವಂ+ಇದ +ಮೇವಂ +ಚ +ಶೃತಿ +ಸಂಸಿದ್ಧಂ+ಇದವ್+ಎನಲು
ಕೋವಿದರ+ ಕಳಕಳಿಕೆಯ+ಅನ್ಯೋ
ನ್ಯ+ ಅವಮರ್ದದ +ರಭಸವೀ+ ಭೂ
ಪಾವಳಿಗಳ್+ಉಪಹಾಸ್ಯ +ಘೋಷಕೆ +ಕವಚವಾಯ್ತೆಂದ

ಅಚ್ಚರಿ:
(೧) ಮೊದಲ ಮೂರು ಸಾಲುಗಳು ಸಂಸ್ಕೃತದಲ್ಲಿರುವುದು

ಪದ್ಯ ೩೧: ಯಾಗದ ಅಗಿಯನ್ನು ಹೇಗೆ ಸ್ಥಾಪಿಸಿದರು?

ಬಳಸಿದರು ಪರಿಮಥ್ಯಮಾನಾ
ನಳನನಗ್ಗದ ಸುಪ್ರಣೀತಾ
ನಳನನಾಹವನೀಯ ಗಾರುಹಪತ್ಯ ದಕ್ಷಿಣದ
ಜ್ವಲಿತವೆನೆ ಮೃಗಚರ್ಮವೀ ಜನ
ವಳಯದೊಳು ಪ್ರಾಗ್ವಂಶದಲಿ ಪರಿ
ಮಿಳಿತವಾಯ್ತು ಸದಸ್ಯ ಋತ್ವಿಜ್ಞರ ವಿಧಾನದಲಿ (ಸಭಾ ಪರ್ವ, ೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ಪರಿಮಥ್ಯಮಾನಾಗ್ನಿ, ಸುಪ್ರಣೀತಾಗ್ನಿಗಳನ್ನು ಆಹವನೀಯ ಗಾರ್ಹಪತ್ಯಾಗ್ನಿಯೊಂದಿಗೆ ಪ್ರದಕ್ಷಿಣೆ ಮಾಡಿ ಬಂದು, ಗಾರ್ಹಪತ್ಯಾಗ್ನಿಯಿಂದ ದಕ್ಷಿಣಾಗ್ನಿಯನ್ನು ಜ್ವಲಿಸಿ, ಕೃಷ್ಣಾಜಿನದಿಂದ ಬೀಸಿ, ಋತ್ವಿಜರು, ಸದಸ್ಯರು ಪ್ರಾಗ್ವಂಶದಲ್ಲಿ ನಿರ್ದರಿಸಿದಂತೆ ಅಗ್ನಿ ಸ್ಥಾಪನೆ ಮಾಡಿದರು.

ಅರ್ಥ:
ಬಳಸು: ಉಪಯೋಗಿಸು; ಪರಿಮಥ್ಯ:ಆರಣಿಯಿಂದ ದಡೆದ; ಅಗ್ಗ: ಶ್ರೇಷ್ಠತೆ; ಸುಪ್ರಣೀತ: ಸಂಸ್ಕರಿಸಿದ ಗಾರ್ಹಪತ್ಯವು ಮುಖ್ಯವಾದ ಅಗ್ನಿಕುಂಡದಲ್ಲಿರುವಂಥದು; ಆಹವ: ಯಜ್ಞ; ಗಾರುಹಪತ್ಯ: ಅಗ್ನಿತ್ರಯಗಳಲ್ಲಿ ಒಂದು; ದಕ್ಷಿಣ: ತೆಂಕಣ ದಿಕ್ಕು; ಜ್ವಲಿತ: ಉರಿಯುತ್ತಿರುವ; ಮೃಗ: ಜಿಂಕೆ; ಚರ್ಮ: ತೊಗಲು; ವಳಯ: ಗುಂಪು; ಪರಿಮಿಳಿತ: ಕೂಡಿದ; ಪ್ರಾಗ್ವಂಶ: ಋತ್ವಿಕ್ಕುಗಳು ಇರುವ ಗೃಹ; ಸದಸ್ಯ:ಸಂಘದಲ್ಲಿ ಸಂಬಂಧವನ್ನು ಹೊಂದಿರುವವನು; ಋತ್ವಿಜ್ಞ: ಯಜ್ಞಪುರೋಹಿತ;

ಪದವಿಂಗಡಣೆ:
ಬಳಸಿದರು +ಪರಿಮಥ್ಯಮಾನಾ
ನಳನನ್+ಅಗ್ಗದ +ಸುಪ್ರಣೀತಾ
ನಳನನ್+ಆಹವನೀಯ+ ಗಾರುಹಪತ್ಯ+ ದಕ್ಷಿಣದ
ಜ್ವಲಿತವೆನೆ+ ಮೃಗಚರ್ಮವೀ+ ಜನ
ವಳಯದೊಳು +ಪ್ರಾಗ್ವಂಶದಲಿ+ ಪರಿ
ಮಿಳಿತವಾಯ್ತು +ಸದಸ್ಯ +ಋತ್ವಿಜ್ಞರ +ವಿಧಾನದಲಿ

ಅಚ್ಚರಿ:
(೧) ಪರಿಮಥ್ಯ, ಸುಪ್ರಣೀತ, ಗಾರುಹಪತ್ಯ – ಹಲವು ಬಗೆಯ ಅಗ್ನಿಯ ಹೆಸರು
(೨) ನಳನ – ೨,೩ ಸಾಲಿನ ಮೊದಲ ಪದ

ಪದ್ಯ ೩೦: ರಾಜಸೂಯಯಾಗ ಮಂಟಪದಲ್ಲಿ ಯಾವ ಸಾಮಗ್ರಿಗಳಿದ್ದವು?

ಚರು ತಿಲದ ರಾಶಿಗಳ ಸುಕ್ ಸ್ರುವ
ಬರುಹಿಗಳ ಬಲು ಹೊರೆಗಳಾಜ್ಯೋ
ತ್ಕರದ ಪತ್ರಾವಳಿಯ ನಿರ್ಮಲ ಸಾರ ಸಮಿಧೆಗಳ
ಪರಿವಳೆಯದಾಮೀಕ್ಷೆಗಳ ಪರಿ
ಕರದ ವಿವಿಧ ದ್ರವ್ಯಮಯ ಬಂ
ಧುರದಲೆಸೆದುದು ಯಜ್ಞವಾಟಿಕೆ ರಾಜಸೂಯದಲಿ (ಸಭಾ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಹವಿಸ್ಸು, ಎಳ್ಳಿನ ರಾಶಿ, ಯಜ್ಞದಲ್ಲಿ ಬಳಸುವ ಸೌಟು, ದರ್ಭೆಗಳ ಹೊರೆ, ಪತ್ರೆಗಳ ಗುಡ್ಡೆ, ನಿರ್ಮಲವಾದ ಸಮಿತ್ತುಗಳು, ಪರಿಮಳದಿಂದ ಕೂಡಿದ ಸಿಹಿತಿಂಡಿಗಳ, ಯಾಗದ ಅನೇಕ ಅಗತ್ಯವಾದ ದ್ರವ್ಯಗಳಿಂದ ತುಂಬಿ ರಾಜಸೂಯದ ಯಾಗಶಾಲೆಯು ಮನೋಹರವಾಗಿ ಕಾಣಿಸುತ್ತಿತ್ತು.

ಅರ್ಥ:
ಚರು: ಅಗ್ನಿಗೆ ಕೊಡುವ ಆಹುತಿ, ಹವಿಸ್ಸು; ತಿಲ: ಎಳ್ಳು; ರಾಶಿ: ಗುಂಪು; ಸುಕ್ ಸ್ರುವ: ಯಜ್ಞದಲ್ಲಿ ಬಳಸುವ ಸೌಟು; ಬರುಹಿ: ದರ್ಭೆ; ಬಲು: ಬಹಳ; ಉತ್ಕರ: ಸಮೂಹ; ಪತ್ರ: ಪತ್ರೆ; ಆವಳಿ: ಸಾಲು, ಗುಂಪು; ನಿರ್ಮಲ: ಶುದ್ಧ; ಸಾರ: ಸತ್ವ; ಸಮಿಧೆ: ಅರಳಿಕಡ್ಡಿ; ಪರಿವಳೆ: ಸುತ್ತಲಿರು; ಆಮೀಕ್ಷೆ: ಕಾದ ಹಾಲಿನಲ್ಲಿ ಮೊಸರು ಹಾಕಿ ಮಾಡಿದ ಹೆಪ್ಪು, ಒಂದು ಬಗೆಯ ಸಿಹಿ ತಿಂಡಿ; ಪರಿಕರ: ಸಾಮಗ್ರಿ; ವಿವಿಧ: ಬಹಳ; ದ್ರವ್ಯ: ಪದಾರ್ಥ; ಬಂಧುರ: ಸುಂದರವಾದ; ವಾಟಿಕೆ: ಆವರಣ, ಪ್ರಾಕಾರ;

ಪದವಿಂಗಡಣೆ:
ಚರು+ ತಿಲದ +ರಾಶಿಗಳ +ಸುಕ್ ಸ್ರುವ
ಬರುಹಿಗಳ +ಬಲು +ಹೊರೆಗಳ್+ಅಜ್ಯೋ
ತ್ಕರದ+ ಪತ್ರಾವಳಿಯ+ ನಿರ್ಮಲ +ಸಾರ +ಸಮಿಧೆಗಳ
ಪರಿವಳೆಯದ್+ಆಮೀಕ್ಷೆಗಳ+ ಪರಿ
ಕರದ+ ವಿವಿಧ+ ದ್ರವ್ಯಮಯ +ಬಂ
ಧುರದಲ್+ಎಸೆದುದು +ಯಜ್ಞವಾಟಿಕೆ+ ರಾಜಸೂಯದಲಿ

ಅಚ್ಚರಿ:
(೧) ಯಜ್ಞದಲ್ಲಿ ಬಳಸುವ ಹಲವಾರು ಸಾಮಗ್ರಿಗಳ ಪರಿಚಯ – ಚರು, ತಿಲ್, ಸುಕ್ ಸ್ರುವ, ಸಾರ, ಸಮಿಧೆ, ಆಮೀಕ್ಷೆ
(೨) ರಾಶಿ, ಆವಳಿ, ಉತ್ಕರ – ಗುಂಪು ಅರ್ಥವನ್ನು ಕೊಡುವ ಪದಗಳು
(೩) ಉತ್ಕರ, ಪರಿಕರ – ಪ್ರಾಸಪದಗಳು

ಪದ್ಯ ೨೯: ಯಾಗಶಾಲೆಯ ಆವರಣದ ಸದ್ದು ಎಷ್ಟು ಜೋರಾಗಿತ್ತು?

ನೆರೆದುದವನೀಪಾಲ ಜನ ಸಾ
ಗರ ಬಹಿರ್ವೇದಿಯ ಮಹಾ ಚ
ಪ್ಪರದೊಳಗೆ ತಂತಮ್ಮ ಸಿಂಹಾಸನ ಸಗಾಢದಲಿ
ಪರಮ ಋಷಿಗಳ ವೇದಘೋಷೋ
ತ್ಕರ ನೃಪಾಧ್ವರ ವಿಷಯ ತರ್ಕ
ಸ್ಫುರಣ ಕೋಲಾಹಲದ ಕಳಕಳ ತುಂಬಿತಂಬರವ (ಸಭಾ ಪರ್ವ, ೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಯಾಗಕ್ಕೆ ಬಂದ ರಾಜರ ಸಮೂಹವು ದೊಡ್ಡ ಚಪ್ಪರದಲ್ಲಿ ಬಹಿರ್ವೇದಿಯ ಮೇಲೆ ತಮ್ಮ ತಮ್ಮ ಸಿಂಹಾಸನಗಳಲ್ಲಿ ಕುಳಿತರು. ಋಷಿವರ್ಯರು ವೇದಘೋಷ, ರಾಜಸೂಯಯಾಗದ ವಿಷಯವಾಗಿ ನಡೆಯುತ್ತಿದ್ದ ತರ್ಕ, ಪುರಾಣದ ಪಾರಾಯಣಗಳ ಸದ್ದು ಆಕಾಶವನ್ನು ತುಂಬಿತು.

ಅರ್ಥ:
ನೆರೆ: ಗುಂಪು; ಅವನಿ: ಭೂಮಿ; ಅವನೀಪಾಲ: ರಾಜ; ಜನ: ಮನುಷ್ಯರು; ಸಾಗರ: ಸಮುದ್ರ; ಬಹಿರ್ದೇದಿಯ: ಯಾಗಶಾಲೆಯ ಹೊರಾಂಗಣ; ಮಹಾ: ದೊಡ್ಡ; ಚಪ್ಪರ: ಚಾವಣಿ; ಸಿಂಹಾಸನ: ರಾಜರು ಕುಳಿತುಕೊಳ್ಳುವ ಪೀಠ; ಸಗಾಢ: ರಭಸ, ಹೆಚ್ಚಾದ; ಪರಮ: ಶ್ರೇಷ್ಠ; ಋಷಿ: ಮುನಿ; ಘೋಷ: ಜೋರಾದ ಶಬ್ದ; ಉತ್ಕರ: ಸೀಳುವುದು; ನೃಪ: ರಾಜ; ಅಧ್ವರ: ಯಾಗ; ವಿಷಯ: ವಿಚಾರ, ಸಂಗತಿ; ತರ್ಕ:ಚರ್ಚೆ, ವಾದ; ಸ್ಫುರಣ: ನಡುಗು; ಕೋಲಾಹಲ: ಗದ್ದಲ; ಕಳಕಳ: ಸದ್ದು; ಅಂಬರ: ಆಕಾಶ;

ಪದವಿಂಗಡಣೆ:
ನೆರೆದುದ್+ಅವನೀಪಾಲ+ ಜನ+ ಸಾ
ಗರ +ಬಹಿರ್+ ವೇದಿಯ+ ಮಹಾ +ಚ
ಪ್ಪರದೊಳಗೆ+ ತಂತಮ್ಮ +ಸಿಂಹಾಸನ+ ಸಗಾಢದಲಿ
ಪರಮ+ ಋಷಿಗಳ+ ವೇದ+ಘೋಷೋ
ತ್ಕರ +ನೃಪ+ಅಧ್ವರ +ವಿಷಯ +ತರ್ಕ
ಸ್ಫುರಣ +ಕೋಲಾಹಲದ+ ಕಳಕಳ+ ತುಂಬಿತ್+ಅಂಬರವ

ಪದ್ಯ ೨೮: ಯಜ್ಞಮಂಟಪಕ್ಕೆ ಧರ್ಮರಾಯನು ಹೇಗೆ ಬಂದನು?

ಹುದಿನ ನವನೀತಾನುಲೇಪದ
ಹೊದೆದ ಕೃಷ್ಣಾಜಿನದ ಹಸ್ತಾ
ಗ್ರದಲೆಸೆವ ಸಾರಂಗಶೃಂಗದ ಯಾಜಮಾನ್ಯದಲಿ
ಉದಧಿಗೊರೆಗಟ್ಟುವ ಚತುರ್ವೇ
ದದ ಮಹಾಘೋಷದಲಿ ಮಖ ಕುಂ
ಡದ ತದಂತರ್ವೇದಿಗೈತಂದನು ಮಹೀಪಾಲ (ಸಭಾ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧರ್ಮರಾಯನು ತನ್ನ ತನುವಿಗೆ ಬೆಣ್ಣೆಯನ್ನು ಹಚ್ಚಿಕೊಂಡು, ಜಿಂಕೆಯ ಚರ್ಮವನ್ನು ಧರಿಸಿ, ಬೆರಳುಗಳಲ್ಲಿ ಸಾರಂಗದ ಕೊಂಬಿನ ತುದಿಯನ್ನು ಹಿಡಿದು ಯಜಮಾನನಾದನು. ಸಮುದ್ರಘೋಷಕ್ಕೆ ಸಮನಾದ ಚತುರ್ವೇದಗಳ ಘೋಷಣೆಯ ನಡುವೆ ಯಜ್ಞಕುಂಡದ ಅಂತರ್ವೇದಿಗೆ ಬಂದನು.

ಅರ್ಥ:
ಹುದಿ: ವ್ಯಾಪಿಸು; ನವನೀತ: ಬೆಣ್ಣೆ; ಲೇಪನ: ಹಚ್ಚು; ಹೊದೆ: ಧರಿಸು; ಕೃಷ್ಣಾಜಿನ: ಜಿಂಕೆಯ ಚರ್ಮ; ಹಸ್ತ: ಕೈ; ಅಗ್ರ: ಮುಂಭಾಗ; ಸಾರಂಗ: ಜಿಂಕೆ; ಶೃಂಗ: ಕೊಂಬು; ಯಜಮಾನ: ಒಡೆಯ; ಉದಧಿ: ಸಮುದ್ರ; ಒರೆ: ಸಮಾನ; ಘೋಷ: ಗಟ್ಟಿಯಾದ ಶಬ್ದ; ಮಖ: ಯಾಗ; ಕುಂಡ: ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ; ಅಂತರ್ವೇದಿ: ಯಜ್ಞಶಾಲೆಯ ಒಳಜಗಲಿ; ಮಹೀಪಾಲ: ರಾಜ; ಆನು: ಹಿಡಿದುಕೊಳ್ಳು;

ಪದವಿಂಗಡಣೆ:
ಹುದಿನ +ನವನೀತ+ಆನು+ಲೇಪದ
ಹೊದೆದ +ಕೃಷ್ಣಾಜಿನದ+ ಹಸ್ತ
ಅಗ್ರದಲ್+ಎಸೆವ+ ಸಾರಂಗ+ಶೃಂಗದ +ಯಾಜಮಾನ್ಯದಲಿ
ಉದಧಿಗ್+ಒರೆಗಟ್ಟುವ +ಚತುರ್ವೇ
ದದ +ಮಹಾಘೋಷದಲಿ+ ಮಖ+ ಕುಂ
ಡದ +ತದ್+ಅಂತರ್ವೇದಿಗೈ+ತಂದನು+ ಮಹೀಪಾಲ

ಅಚ್ಚರಿ:
(೧) ಬೆರಳು ಎಂದು ಹೇಳಲು – ಹಸ್ತಾಗ್ರ ಎಂಬ ಪದದ ಬಳಕೆ
(೨) ವೇದದ ಘೋಷವನ್ನು ವರ್ಣಿಸಲು ಉಪಯೋಗಿಸಿದ ರೂಪಕ – ಉದಧಿಗೊರೆಗಟ್ಟುವ
(೩) “ಮ” ಕಾರದ ಪದಗಳು – ಮಖ, ಮಹಾಘೋಷ, ಮಹೀಪಾಲ