ಪದ್ಯ ೧೩: ಕುಮಾರವ್ಯಾಸರು ತಮ್ಮ ಭಾರತದಲ್ಲಿ ಯಾರ ಕಥೆಯನ್ನು ಹೇಳುತ್ತಾರೆ?

ತಿಳಿಯಹೇಳುವೆ ಕೃಷ್ಣಕಥೆಯನು
ಇಳೆಯಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶೃತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಹಲವು ಜನ್ಮದ ಪಾಪರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶೃತಿಯ (ಆದಿ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಲೋಕದಲ್ಲಿರುವ ಸಮಸ್ತ ತಿಳಿದವರಿಗೆ, ಜಾಣರು ಮೆಚ್ಚುವ ಹಾಗೆ ಕೃಷ್ಣನ ಕಥೆಯನ್ನು ಹೇಳುತ್ತೇನೆ, ಐದನೇ ವೇದವನ್ನು ಶ್ರೀಕೃಷ್ಣನು ಪ್ರೀತನಾಗಲೆಂದು ಹೇಳುತ್ತೇನೆ. ಹಲವಾರು ಜನ್ಮದ ಪಾಪರಾಶಿಯನ್ನು ದೂರಮಾಡುವ ಶಕ್ತಿಹೊಂದಿದ ಜಲವಿದು, ಆಗಮ ಕುಲಕೆ ಕಲಶಪ್ರಾಯದಂತಿರುವ ಮಹಾಭಾರತದ ಕೃತಿಯಾದ ಪಂಚಮ ವೇದವನ್ನು ಹೇಳುತ್ತೇನೆ.

ಅರ್ಥ:
ತಿಳಿಯ: ತಿಳುವಳಿಕೆಯುಳ್ಳವರ; ಹೇಳು: ತಿಳಿಸುವೆ; ಕಥೆ: ವಿಚಾರವನ್ನು ಸ್ವಾರಸ್ಯವಾಗಿ ತಿಳಿಸುವ ಬಗೆ; ಇಳೆ: ಭೂಮಿ; ಜಾಣರು: ಬುದ್ಧಿವಂತರು; ಮೆಚ್ಚು: ಪ್ರಶಂಶಿಸು; ನೆಲೆ:ಆಧಾರ, ಚೆನ್ನಾಗಿ; ಪಂಚಮ: ಐದು; ಶೃತಿ:ಶ್ರವಣ, ಕೇಳುವಿಕೆ; ಒರೆ: ಹೇಳಿಕೆ, ಮಾತು; ಹಲವು: ಬಹಳ; ಜನ್ಮ: ಹುಟ್ಟು, ಜನನ; ಪಾಪ: ದುರಾಚಾರ; ರಾಶಿ: ಗುಂಪು; ತೊಳೆ: ಹೋಗಲಾಡಿಸು; ಜಲ: ನೀರು; ಆಗಮ: ಸಂಪ್ರದಾಯದ ಸಿದ್ಧಾಂತ ಗ್ರಂಥ, ಶಾಸ್ತ್ರ ಗ್ರಂಥ; ಕುಲ: ವಂಶ; ನಾಯಕ: ಅಗ್ರಜ, ಈಶ, ಒಡೆಯ; ಕೃತಿ: ಪುಸ್ತಕ; ಶೃತಿ: ವೇದ;

ಪದವಿಂಗಡಣೆ:
ತಿಳಿಯಹೇಳುವೆ +ಕೃಷ್ಣ+ಕಥೆಯನು
ಇಳೆಯ+ಜಾಣರು +ಮೆಚ್ಚುವಂತಿರೆ
ನೆಲೆಗೆ +ಪಂಚಮ +ಶೃತಿಯನ್+ಒರೆವೆನು+ ಕೃಷ್ಣ +ಮೆಚ್ಚಲಿಕೆ
ಹಲವು+ ಜನ್ಮದ+ ಪಾಪರಾಶಿಯ
ತೊಳೆವ +ಜಲವಿದು +ಶ್ರೀಮದ್+ಆಗಮ
ಕುಲಕೆ +ನಾಯಕ +ಭಾರತಾಕೃತಿ+ ಪಂಚಮ +ಶೃತಿಯ

ಅಚ್ಚರಿ:
(೧) ಪಂಚಮ ಶೃತಿ – ೨ ಬಾರಿ ಪ್ರಯೋಗ
(೨) ಆಗಮ ಕುಲಕೆ ನಾಯಕ, ಪಂಚಮ ಶೃತಿ, ಪಾಪರಾಶಿಯ ತೊಳೆವ – ಭಾರತದ ಬಗ್ಗಿನ ಗುಣವಾಚಕಗಳು