ಪದ್ಯ ೯: ಕುಮಾರವ್ಯಾಸರು ಲಕ್ಷ್ಮಿಯನ್ನು ಹೇಗೆ ಆರಾಧಿಸುತ್ತಾರೆ?

ಶರಧಿಸುತೆ ಸನಕಾದಿವಂದಿತೆ
ಸುರನರೋರಗ ಮಾತೆ ಸುಜನರ
ಪೊರೆವ ದಾತೆ ಸುರಾಗ್ರಗಣ್ಯ ಸುಮೌನಿ ವರಸ್ತುತ್ಯೆ
ಪರಮ ಕರುಣಾಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ (ಆದಿ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ಸಮುದ್ರರಾಜನ ಮಗಳೇ, ಸನಕಾದಿ ಮುನಿಗಳಿಂದ ಪೂಜಿಸಲ್ಪಡುವವಳೆ, ಮೂರುಲೋಕಗಳಲ್ಲಿಯ ಎಲ್ಲರಿಗೂ ತಾಯಿಯಾಗಿರುವವಳೆ, ಸಜ್ಜನರನ್ನು ಪೊರೆಯುವವಳೆ, ಇಂದ್ರನೇ ಮೊದಲಾದ ಪ್ರಮುಖರು ಮತ್ತು ಮುನಿಗಳಿಂದ ಸ್ತುತಿಸಲ್ಪಡುವವಳೆ, ಕರುಣೆಯ ಸಾಗರವಾಗಿರುವವಳೆ, ಪಾವನದರಿತಳು, ಬ್ರಹ್ಮಾದಿಗಳಿಂದ ಪೂಜಿಸಲ್ಪಡುವವಳು ಆದ ಶ್ರೀಲಕ್ಷ್ಮಿಯು ನಮಗೆ ಹೆಚ್ಚಿನ ಸಂಪತ್ತನ್ನು ಕೊಡಲಿ.

ಅರ್ಥ:
ಶರಧಿ: ಸಾಗರ, ಸಮುದ್ರ; ಸುತೆ: ಮಗಳು; ಆದಿ: ಮುಂತಾದವರು; ವಂದಿತೆ: ಪೂಜಿಸಲ್ಪಡುವ; ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಮಾತೆ: ತಾಯಿ; ಸುಜನರ: ಸಜ್ಜನ; ಪೊರೆ: ಕಾಪಾಡು; ದಾತೆ: ಉದಾರಿ;ಸುರ: ದೇವತೆ; ಅಗ್ರಗಣ್ಯ: ಒಡೆಯ; ಮೌನಿ: ಋಷಿ; ಸ್ತುತ್ಯೆ: ಸ್ತುತಿಸಲ್ಪಡುವ; ಪರಮ: ಶ್ರೇಷ್ಠ; ಕರುಣ: ದಯೆ; ಸಿಂಧು: ಸಾಗರ; ಪಾವನ: ನಿರ್ಮಲ; ಚರಿತೆ: ಕಥೆ, ಇತಿಹಾಸ; ಪದ್ಮಜ: ಬ್ರಹ್ಮ; ಮುಖ್ಯ: ಹಿರಿಯ; ಸಕಲ: ಎಲ್ಲಾ; ಅಮರ: ದೇವತೆಗಳು; ಪೂಜಿತೆ: ಆರಾಧಿಸಲ್ಪಡುವ; ಕೊಡು: ನೀಡು; ಅಧಿಕ: ಹೆಚ್ಚು; ಸಂಪದ: ಐಶ್ವರ್ಯ;

ಪದವಿಂಗಡಣೆ:
ಶರಧಿಸುತೆ +ಸನಕಾದಿ+ವಂದಿತೆ
ಸುರ+ನರ+ಉರಗ+ ಮಾತೆ +ಸುಜನರ
ಪೊರೆವ+ ದಾತೆ +ಸುರ+ಅಗ್ರಗಣ್ಯ+ ಸುಮೌನಿ +ವರಸ್ತುತ್ಯೆ
ಪರಮ +ಕರುಣಾ+ಸಿಂಧು +ಪಾವನ
ಚರಿತೆ +ಪದ್ಮಜ +ಮುಖ್ಯ +ಸಕಲ
ಅಮರ +ಸುಪೂಜಿತೆ +ಲಕ್ಷ್ಮಿ +ಕೊಡುಗೆಮಗ್+ಅಧಿಕ+ ಸಂಪದವ

ಅಚ್ಚರಿ:
(೧) ಶರಧಿ, ಸಿಂಧು – ಸಾಗರದ ಸಮನಾರ್ಥಕ ಪದ
(೨) ಮೂರುಲೋಕದ ಮಾತೆ ಎಂದು ಹೇಳಲು ಸುರ (ಆಕಾಶ), ನರ (ಭೂಮಿ), ಉರಗ (ಪಾತಾಳ) ಸುರನರೋರಗ ಪದದ ಬಳಕೆ
(೩) “ಸು”ಕಾರದ ಪದಗಳು – ಸುಜನ, ಸುರಾಗ್ರಗಣ್ಯ, ಸುಮೌನಿ, ಸುಪೂಜಿತೆ

ಪದ್ಯ ೮: ಕುಮಾರವ್ಯಾಸರು ರಾಮರನ್ನು ಹೇಗೆ ಆರಾಧಿಸುತ್ತಾರೆ?

ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನನುಪಮ ಮಹಿಮ ಸನ್ಮುನಿವಿನುತ ಜಗಭರಿತ
ಶ್ರೀಮದೂರ್ಜಿತಧಾಮ ಸುದಯಾ
ನಾಮನಾಹವ ಭೀಮ ರಘುಕುಲ
ರಾಮ ರಕ್ಷಿಸು ಒಲಿದು ಗದುಗಿನ ವೀರನಾರಯಣ (ಆದಿ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ದೇವೇಂದ್ರನಿಂದ ನಮಸ್ಕರಿಸಲ್ಪಟ್ಟ ಪಾದಕಮಲಗಳನ್ನುಳ್ಳವನೂ, ಯೋಗಿಗಳ ನಿರ್ಮಲ ಚಿತ್ತದಲ್ಲಿ ರಮಿಸುವವನೂ, ಹೋಲಿಕೆಯಿಲ್ಲದ ಮಹಿಮೆಯುಳ್ಳವನೂ ಮನನಶೀಲರ ವಂದನೆಯನ್ನು ಸ್ವೀಕರಿಸುವವನೂ, ಜಗತ್ತನ್ನು ತುಂಬಿರುವವನೂ, ವೈಕುಂಠವಾಸಿಯೂ, ನಾಮಸ್ಮರಣೆ ಮಾಡುವವರಲ್ಲಿ ದಯೆತೋರುವವನೂ, ಯುದ್ಧದಲ್ಲಿ ಭಯಂಕರನೂ, ರಘುಕುಲದಲ್ಲಿ ಶ್ರೀರಾಮನಾಗಿ ಅವತರಿಸಿದವನೂ ಆದ ಗದುಗಿನ ವೀರನಾರಯಣನೇ ಪ್ರೇಮದಿಂದ ರಕ್ಷಿಸು.

ಅರ್ಥ:
ಅಮರ: ದೇವತೆ; ಅಮರಾಧೀಶ: ಇಂದ್ರ; ನತ:ನಮಸ್ಕರಿಸಿದವ; ಪದ: ಪಾದ; ತಾಮರಸ: ಕಮಲ; ಘನ: ಶ್ರೇಷ್ಠ; ವಿಪುಳ: ಬಹಳ; ನಿರ್ಮಲ: ಶುದ್ಧ; ಅನುಪಮ: ಹೋಲಿಕೆಗೆ ಮೀರಿದ; ಮಹಿಮ: ಹಿರಿಮೆ; ಮುನಿ: ಋಷಿ; ವಿನುತ: ಹೊಗಳಲ್ಪಟ್ಟ; ಜಗ: ಜಗತ್ತು; ಭರಿತ: ತುಂಬಿಕೊಂಡ; ಊರ್ಜಿತ:ಶಕ್ತಿಯಿಂದ ಕೂಡಿದ; ಧಾಮ: ವಾಸಸ್ಥಳ; ಸುದಯಾ: ಕರುಣೆ; ನಾಮ: ಹೆಸರು; ಆವಹ: ಯುದ್ಧ; ಭೀಮ: ಶೂರ; ಕುಲ: ವಂಶ; ರಕ್ಷಿಸು: ಕಾಪಾಡು; ಒಲಿ: ಸಮ್ಮತಿಸು;

ಪದವಿಂಗಡಣೆ:
ಶ್ರೀಮದ್+ಅಮರಾಧೀಶ+ ನತಪದ
ತಾಮರಸ +ಘನ+ವಿಪುಳ +ನಿರ್ಮಲ
ರಾಮನನ್+ಅನುಪಮ +ಮಹಿಮ +ಸನ್ಮುನಿ+ವಿನುತ +ಜಗಭರಿತ
ಶ್ರೀಮದ್+ಊರ್ಜಿತಧಾಮ +ಸುದಯಾ
ನಾಮನ್+ಆಹವ+ ಭೀಮ+ ರಘುಕುಲ
ರಾಮ +ರಕ್ಷಿಸು +ಒಲಿದು +ಗದುಗಿನ +ವೀರನಾರಯಣ

ಅಚ್ಚರಿ:
(೧) ಶ್ರೀಮದ – ೧, ೪ ಸಾಲಿನ ಮೊದಲ ಪದ; ರಾಮ – ೩, ೬ ಸಾಲಿನ ಮೊದಲ ಪದ
(೨) ರಾಮನ ಗುಣವಿಶೇಷಕಗಳನ್ನು ಹೇಳಿರುವುದು – ಅನುಪಮ ಮಹಿಮ, ಮುನಿವಿನುತ, ಜಗಭರಿತ…