ಪದ್ಯ ೧೪: ಯಾಗದ ಮೇಲ್ವಿಚಾರಣೆ ಯಾರು ನೋಡಿಕೊಂಡರು?

ಕರೆಸು ಧೌಮ್ಯಾದಿಗಳ ನಿಲ್ಲಿಯ
ಪರುಠವವ ಮಾಡೆಂದು ಭೀಷ್ಮನು
ಗುರುಸಹಿತ ಕೈಕೊಂಡನೆಲ್ಲರ ಮೇಲು ನೋಟವನು
ಅರಸ ಕೇಳ್ ಧೃತರಾಷ್ಟ್ರ ಬಾಹ್ಲಿಕ
ವರ ಬೃಹದ್ರಥ ಸೋಮದತ್ತರು
ಪರಮಪೂಜ್ಯರು ಮಾನನೀಯರು ಯಜ್ಞವಾಟದಲಿ (ಸಭಾ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಷ್ಮರು ಯುಧಿಷ್ಠಿರನಿಗೆ, ಧೌಮ್ಯನೇ ಮೊದಲಾದವರನ್ನು ಕರೆಸಿ ಯಾಗದ ಏರ್ಪಾಟು ಮಾಡು ಎಂದು ಹೇಳಿದರು. ಭೀಷ್ಮ ದ್ರೋಣರು ಮೇಲ್ವಿಆರಣೆಗೆ ನಿಂತರು. ಧೃತರಾಷ್ಟ್ರ, ಬಾಹ್ಲಿಕ, ಬೃಹದ್ರಥ, ಸೋಮದತ್ತರು ಯಾಗಶಾಲಿಎಯಲ್ಲಿ ಗೌರವಾನ್ವಿತರೂ, ಸರ್ವರಿಗೆ ಮಾನ್ಯರೂ ಆದರು.

ಅರ್ಥ:
ಕರೆಸು: ಬರೆಮಾಡು; ಪರುಠವ:ವಿಸ್ತಾರ, ಹರಹು; ಸಹಿತ: ಜೊರೆ; ನೋಟ: ವಿಚಾರ; ಅರಸ: ರಾಜ; ಗುರು: ಆಚಾರ್ಯ; ವರ: ಶ್ರೇಷ್ಠ; ಪೂಜ್ಯರು: ಶ್ರೇಷ್ಠರು; ಮಾನನೀಯ: ಗೌರವಾನ್ವಿತರು; ಯಜ್ಞ: ಕ್ರತು; ವಾಟ: ಆವರಣ;

ಪದವಿಂಗಡಣೆ:
ಕರೆಸು +ಧೌಮ್ಯ +ಆದಿಗಳ+ ನಿಲ್ಲಿಯ
ಪರುಠವವ +ಮಾಡೆಂದು +ಭೀಷ್ಮನು
ಗುರುಸಹಿತ +ಕೈಕೊಂಡನ್+ಎಲ್ಲರ +ಮೇಲು +ನೋಟವನು
ಅರಸ+ ಕೇಳ್ +ಧೃತರಾಷ್ಟ್ರ+ ಬಾಹ್ಲಿಕ
ವರ+ ಬೃಹದ್ರಥ +ಸೋಮದತ್ತರು
ಪರಮಪೂಜ್ಯರು +ಮಾನನೀಯರು+ ಯಜ್ಞವಾಟದಲಿ

ಅಚ್ಚರಿ:
(೧) ನೋಟ, ವಾಟ – ಪ್ರಾಸ ಪದಗಳು
(೨) ಅರಸ – ಇಲ್ಲಿ ಜನಮೇಜಯ ರಾಜನನ್ನು ಸಂಭೋದಿಸಿರುವುದು