ಪದ್ಯ ೧೩: ಭೀಷ್ಮರು ಯುಧಿಷ್ಠಿರನಿಗೆ ಏನು ಹೇಳಿದರು?

ಚಿಂತೆಯೇಕೈ ಕೃಷ್ಣ ನಾರೆಂ
ದೆಂತು ಕಂಡೆ ಚತುರ್ದಶಾಂಶದ
ತಂತುರೂಪನು ತಾನೆಯೆನ್ನದೆ ನಿನಗೆ ಶ್ರುತಿವಚನ
ತಂತುವಿನ ಪಟ ಮೃತ್ತಿಕೆಯಘಟ
ದಂತೆ ಜಗವೀತನಲಿ ತೋರ್ಕುಮು
ರಾಂತಕನ ಸುಯ್ಧಾನ ನಿಮಗಿರಲಂಜಲೇಕೆಂದ (ಸಭಾ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಷ್ಮರು ಯುಧಿಷ್ಠಿರನನ್ನು ಉದ್ದೇಶಿಸಿ, “ನಿನಗೆ ಚಿಂತೆಯೇಕೆ, ಕೃಷ್ಣನು ಯಾರೆಂದು ತಿಳಿದಿರುವೆ? ಹದಿನಾಲ್ಕು ಲೋಕಗಳನ್ನು ಮಣಿಗಳಂತೆ ಪೋಣಿಸಿರುವ ದಾರವೇ ಇವನು ಎಂದು ವೇದಗಳು ಹೇಳುವುದು. ದಾರಗಳಿಂದ ಆದ ಬಟ್ಟೆಯಂತೆ, ಮಣ್ಣಿನಿಂದಾದ ಮಡಿಕೆಯಂತೆ ಜಗತ್ತು ಇವನಲ್ಲಿ ತೋರುತ್ತದೆ. ಇಂತಹ ಕೃಷ್ಣನ ರಕ್ಷಣೆ ನಿಮಗಿರಲು ನೀವು ಹೆದರುವುದೇಕೆ?” ಎಂದು ಯುಧಿಷ್ಠಿರನನ್ನು ಕೇಳಿದನು.

ಅರ್ಥ:
ಚಿಂತೆ: ಯೋಚನೆ; ಕೃಷ್ಣ: ವಾಸುದೇವ; ಕಂಡೆ: ನೋಡಿದೆ; ತಂತು: ಸೂತ್ರ, ಉಪಾಯ; ರೂಪ: ಆಕಾರ; ಶ್ರುತಿ: ವೇದ; ವಚನ: ಮಾತು; ಪಟ:ತಂತು: ನೂಲು; ಪಟ:ಬಟ್ಟೆ, ವಸ್ತ್ರ; ಮೃತ್ತಿಕೆ: ಮಣ್ಣು; ಘಟ: ಮಡಿಕೆ; ಜಗ: ಜಗತ್ತು; ತೋರ್ಕು: ತೋರುವುದು; ಅಂತಕ: ಕೊನೆಗೊಳ್ಳು; ಸುಯ್ಧಾನ: ರಕ್ಷಣೆ; ಅಂಜಿಕೆ: ಹೆದರಿಕೆ;

ಪದವಿಂಗಡಣೆ:
ಚಿಂತೆಯೇಕೈ+ ಕೃಷ್ಣನ್ + ಆರ್
ಎಂದ್+ಎಂತು+ ಕಂಡೆ +ಚತುರ್+ ದಶಾಂಶದ
ತಂತುರೂಪನು +ತಾನೆ+ಯೆನ್ನದೆ +ನಿನಗೆ+ ಶ್ರುತಿವಚನ
ತಂತುವಿನ +ಪಟ+ ಮೃತ್ತಿಕೆಯ+ಘಟ
ದಂತೆ +ಜಗವ್+ಈತನಲಿ+ ತೋರ್ಕು+ಮು
ರಾಂತಕನ+ ಸುಯ್ಧಾನ +ನಿಮಗಿರಲ್+ಅಂಜಲೇಕೆಂದ

ಅಚ್ಚರಿ:
(೧) ತಂತು – ೩, ೪ ಸಾಲಿನ ಮೊದಲ ಪದ
(೨) ಕೃಷ್ಣನ ಗುಣವಿಶೇಷಗಳು – ಚತುರ್ದಶಾಂಶದ ತಂತುರೂಪನು, ತಂತುವಿನ ಪಟ, ಮೃತ್ತಿಕೆಯಘಟ,ಮುರಾಂತಕ