ಪದ್ಯ ೧೨: ಧರ್ಮರಾಯನು ಭೀಷ್ಮರಲ್ಲಿ ಏನು ನಿವೇದಿಸಿದನು?

ಕರೆಸಿ ಭೀಷ್ಮಂಗೆರಗಿ ನುಡಿದನು
ಧರಣಿಪತಿ ಬಾಲಕರು ನಾವ
ಧ್ವರವಿದಗ್ಗದ ರಾಜಸೂಯ ಮಹಾಮಹೀಶ್ವರರು
ನೆರೆದುದಖಿಳದ್ವೀಪ ಜನವಾ
ದರಿಸಲರಿಯೆನು ಹೆಚ್ಚು ಕುಂದಿನ
ಕುರುಡ ನೀಕ್ಷಿಸಲಾಗದೆಂದನು ಮುಗಿದು ಕರಯುಗವ (ಸಭಾ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಧರ್ಮರಾಯನು ಭೀಷ್ಮನನ್ನು ಬರೆಮಾಡಿ, ನಮಸ್ಕರಿಸಿ, “ನಾವು ಬಾಲಕರು, ಇದು ಮಹಾ ರಾಜಸೂಯ ಯಾಗ, ಇಲ್ಲಿ ಮಹಾ ಕ್ಷತ್ರಿಯರು ಸೇರಿದ್ದಾರೆ, ಸಪ್ತದ್ವೀಪಗಳ ಜನರೂ ಸೇರಿದ್ದಾರೆ, ಅವರೆಲ್ಲರನ್ನು ಉಪಚರಿಸುವುದು ನನಗೆ ಮೀರಿದ ಕೆಲಸ. ನಾವು ಮಾಡುವುದರಲ್ಲಿ ಹೆಚ್ಚಿನ ಲೋಪ, ಅತಿರಿಕ್ತಗಳನ್ನು ಕಾಣಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿ ಕೈಮುಗಿದನು.

ಅರ್ಥ:
ಕರೆಸು: ಬರೆಮಾಡು; ಎರಗು: ನಮಸ್ಕರಿಸು; ನುಡಿ: ಮಾತಾಡು; ಧರಣಿ: ಭೂಮಿ; ಧರಣಿಪತಿ: ರಾಜ; ಬಾಲಕರು: ಮಕ್ಕಳು; ಅಧ್ವರ: ಯಾಗ; ಅಗ್ಗ: ಶ್ರೇಷ್ಠ; ಮಹಾ: ಶ್ರೇಷ್ಠ; ಮಹೀಶ್ವರ: ರಾಜ; ನೆರೆದು: ಸೇರಿದ; ಅಖಿಳ: ಎಲ್ಲಾ; ದ್ವೀಪ: ಕುರುವ, ದೇಶ; ಆದರಿಸು: ಗೌರವಿಸು, ಉಪಚರಿಸು; ಅರಿ: ತಿಳಿ; ಕುಂದು: ಲೋಪ; ಕುರುಡ: ತಿಳುವಳಿಕೆ ಇಲ್ಲದವ; ಈಕ್ಷಿಸು: ನೋಡು; ಕರ: ಹಸ್ತ;

ಪದವಿಂಗಡಣೆ:
ಕರೆಸಿ +ಭೀಷ್ಮಂಗ್+ಎರಗಿ+ ನುಡಿದನು
ಧರಣಿಪತಿ+ ಬಾಲಕರು+ ನಾವ್
ಅಧ್ವರವಿದ್+ಅಗ್ಗದ+ ರಾಜಸೂಯ +ಮಹಾಮಹೀಶ್ವರರು
ನೆರೆದುದ್+ಅಖಿಳದ್ವೀಪ+ ಜನವ್
ಆದರಿಸಲ್+ಅರಿಯೆನು +ಹೆಚ್ಚು+ ಕುಂದಿನ
ಕುರುಡನ್+ಈಕ್ಷಿಸಲ್+ಆಗದ್+ಎಂದನು +ಮುಗಿದು +ಕರಯುಗವ

ಅಚ್ಚರಿ:
(೧) ಮಹೀಶ್ವರ, ಧರಣಿಪತಿ – ಸಮನಾರ್ಥಕ ಪದ
(೨) ಕರೆಸಿ, ಕರಯುಗವ – ಪದ್ಯದ ಮೊದಲನೆ ಮತ್ತು ಕೊನೆ ಪದ “ಕರ” ಅಕ್ಷರಗಳಿಂದ ಪ್ರಾರಂಭ

ನಿಮ್ಮ ಟಿಪ್ಪಣಿ ಬರೆಯಿರಿ