ಪದ್ಯ ೨೧: ಧರ್ಮರಾಯನು ಕೃಷ್ಣನನ್ನು ಕಂಡಾಗ ಹೇಳಿದ ಮಾತುಗಳಾವುವು?

ಇದಿರುವಂದನು ಧರ್ಮಸುತ ಹರಿ
ಪದ ಪಯೋಜದೊಳೆರಗಿದನು ನಿನ
ಗಿದು ವಿನೋದವಲೇ ವಿಮುಕ್ತಗೆ ಭಕ್ತ ಸಂತರಣ
ಕುದಿದು ಮರುಗಿದವರಸಿ ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ
ಸದನವಖಿಳಾಮ್ನಾಯ ನಿಕರವನೇಡಿಸುವದೆಂದ (ಸಭಾ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧರ್ಮರಾಜನು ಶ್ರೀಕೃಷ್ಣನ ಮುಂದೆ ಬಂದು, ಅವನ ಪಾದಾರವಿಂದಗಳಿಗೆ ನಮಸ್ಕರಿಸಿ, “ಸದಾ ಮುಕ್ತನಾಗಿರುವ ನಿನಗೆ, ನಿನ್ನ ಭಕ್ತರ ರಕ್ಷಣೆ ವಿನೋದವಲ್ಲವೇ? ಭಕ್ತರನ್ನು ಸಂತೈಸುವಉದು, ಪಾರುಮಾಡುವುದು ನಿನ್ನ ಲೀಲೆಯಲ್ಲವೇ? ನಿನ್ನನ್ನು ಹುಡುಕಿ ನಿನ್ನನ್ನು ಕಾಣದೆ ಶೃತಿಗಳು ದುಃಖಿಸುತ್ತಿವೆ. ನೀನೆ ನಮ್ಮ ಮನೆಯಲ್ಲಿರುವುದರಿಂದ, ನಮ್ಮ ಮನೆಯು ಶೃತಿಗಳನ್ನು ಅಣಕಿಸುತ್ತಿವೆ, ಎಂದು ಹೇಳಿದನು.

ಅರ್ಥ:
ಇದಿರು: ಎದುರು; ಇದಿರುವಂದು: ಎದುರು ಬಂದು; ಪದ: ಪಾದ; ಪಯ: ನೀರು; ಪಯೋಜ: ಕಮಲ; ಎರಗು: ನಮಸ್ಕರಿಸು; ವಿನೋದ: ಸಂತೋಷ, ಹಾಸ್ಯ; ವಿಮುಕ: ಮುಕ್ತನಾಗಿರುವ; ಭಕ್ತ: ಆರಾಧಕ; ಸಂತರಿಸು: ಪಾರುಮಾಡು; ಕುದಿ: ಸಂಕಟ; ಮರುಗು:ತಳಮಳ; ಅರಸು: ಹುಡುಕು; ಕಾಣದೆ: ದೊರಕದೆ, ಸಿಗದೆ; ಶ್ರುತಿ: ವೇದ; ಸದನ: ಮನೆ; ಅಖಿಳ: ಎಲ್ಲಾ; ಆಮ್ನಾಯ: ವೇದ, ಶೃತಿ; ನಿಕರ: ಗುಂಪು, ಜೊತೆ; ಏಡಿಸು: ಅವಹೇಳನ ಮಾಡು, ನಿಂದಿಸು;

ಪದವಿಂಗಡಣೆ:
ಇದಿರು+ವಂದನು +ಧರ್ಮಸುತ +ಹರಿ
ಪದ +ಪಯೋಜದೊಳ್+ಎರಗಿದನು+ ನಿನ
ಗಿದು +ವಿನೋದವಲೇ +ವಿಮುಕ್ತಗೆ+ ಭಕ್ತ +ಸಂತರಣ
ಕುದಿದು +ಮರುಗಿದವರಸಿ +ನಿನ್ನಯ
ಪದವ +ಕಾಣದೆ +ಶ್ರುತಿಗಳ್+ಎಮ್ಮಯ
ಸದನವ್+ಅಖಿಳ +ಆಮ್ನಾಯ +ನಿಕರವನ್+ಏಡಿಸುವದೆಂದ

ಅಚ್ಚರಿ:
(೧) ನಿನ್ನ ಆಗಮನದಿಂದ ಮನೆಯೇ ಶೃತಿಗಳನ್ನು ಅವಹೇಳನ ಮಾಡುತ್ತಿವೆ ಎಂದು ಹೇಳಿರುವುದು – ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ ಸದನವಖಿಳಾಮ್ನಾಯ ನಿಕರವನೇಡಿಸುವದೆಂದ
(೨) ಕಮಲ ಪದಕ್ಕೆ ಪಯೋಜ ಎಂದು ಪ್ರಯೋಗ
(೩) ಪದ – ೨, ೫ ಸಾಲಿನ ಮೊದಲ ಪದ
(೪) ಆಮ್ನಾಯ, ಶೃತಿ – ವೇದ ಪದದ ಸಮನಾರ್ಥಕ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ