ಪದ್ಯ ೪೮: ಜರೆಯು ಕೊಟ್ಟ ಮಗುವಿನ ಹೆಸರೇನು?

ಅರಸ ಕೋ ನಿನ್ನವನನೀ ಮುನಿ
ವರಕುಮಾರನನೆನ್ನ ಹೆಸರಲಿ
ಕರೆವುದೀತನ ಸೀಳ ಬೆಚ್ಚವಳಾನು ಬೆದರದಿರು
ಜರೆಯೆನಿಪುದಭಿದಾನವೆನ್ನದು
ವರಜರಾಸಂಧಕನಿವನು ಸುರ
ನರರೊಳಗೆ ಬಲುಗೈಯ ನಹನೆಂದಿತ್ತಳರ್ಭಕನ (ಸಭಾ ಪರ್ವ, ೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ರಾಜನನ್ನು ನೋಡಿದ ಜರೆಯು, “ರಾಜ ತೆಗೆದುಕೋ, ಇವನು ಮುನಿಯ ವರದಿಂದ ಹುಟ್ಟಿದ ನಿನ್ನ ಮಗ. ಹೆದರದಿರು, ಇವನ ಸೀಳು ದೇಹವನ್ನು ಸಂಧಿಸಿದವಳ ನಾನು, ಆದ್ದರಿಂದ ಇವನನನ್ನು ನನ್ನ ಹೆಸರಿನಲ್ಲಿ ಕರೆವುದು. ನನ್ನ ಹೆಸರು ಜರೆ, ಇವನು ಜರಾಸಂಧ ನೆಂದು ಕರೆಸಿಕೊಳ್ಳಲಿ. ಇವನು ದೇವತೆಗಳಲ್ಲೂ ಮನುಷ್ಯರಲ್ಲೂ ಪರಮ ವೀರನಾಗುವನು”, ಎಂದು ಹೇಳಿ ಮಗುವನ್ನು ಬೃಹದ್ರಥನಿಗೆ ಕೊಟ್ಟಳು.

ಅರ್ಥ:
ಅರಸ: ರಾಜ; ಕೋ: ತೆಗೆದುಕೋ; ಮುನಿ: ಋಷಿ; ವರ: ಶ್ರೇಷ್ಠ; ಕುಮಾರ: ಮಗ; ಎನ್ನ: ನನ್ನ; ಹೆಸರು: ನಾಮ; ಸೀಳ: ತುಂಡಾದ; ಬೆಚ್ಚು: ಸೇರಿಸು, ಹೆದರು; ಬೆದರು: ಹೆದರು; ಅಭಿಧಾನ: ಹೆಸರು; ಸುರ: ದೇವತೆ; ನರ: ಮನುಷ್ಯ; ಬಲುಗೈ: ವೀರ; ಅರ್ಭಕ: ಎಳೆಯ ಕೂಸು; ಇತ್ತಳು: ಕೊಟ್ಟಳು, ನೀಡಿದಳು;

ಪದವಿಂಗಡಣೆ:
ಅರಸ +ಕೋ +ನಿನ್ನವನನ್+ಈ+ ಮುನಿ
ವರ+ಕುಮಾರನನ್+ಎನ್ನ+ ಹೆಸರಲಿ
ಕರೆವುದ್+ಈತನ +ಸೀಳ +ಬೆಚ್ಚವಳಾನು+ ಬೆದರದಿರು
ಜರೆಯೆನಿಪುದ್+ಅಭಿದಾನ+ವೆನ್ನದು
ವರ+ಜರಾಸಂಧಕನ್+ಇವನು +ಸುರ
ನರರೊಳಗೆ+ ಬಲುಗೈಯ +ನಹನೆಂದ್+ಇತ್ತಳ್+ಅರ್ಭಕನ

ಅಚ್ಚರಿ:
(೧) ವರ – ೨,೫ ಸಾಲಿನ ಮೊದಲ ಪದ
(೨) ಅಭಿದಾನ, ಹೆಸರು – ೨, ೪ ಸಾಲಿನ ಕೊನೆ ಪದ, ಸಮನಾರ್ಥಕ ಪದ
(೩) ೪ ಸಾಲಿನಲ್ಲಿ ಒಂದೇ ಪದವಿರುವುದು “ಜರೆಯೆನಿಪುದಭಿದಾನವೆನ್ನದು”

ನಿಮ್ಮ ಟಿಪ್ಪಣಿ ಬರೆಯಿರಿ