ಪದ್ಯ ೨೭: ಯಾಗದ ಭಾರವನ್ನು ಯಾರು ವಹಿಸಲು ಮುಂದಾದರು?

ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮ ಯಾಗದ
ಹೊರಿಗೆ ತನ್ನದು ಕರೆಸು ಋಷಿಗಳನೆಂದನಾ ಭೀಮ (ಸಭಾ ಪರ್ವ, ೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಯಾಗಕ್ಕೆ ವಿರೋಧಿಸುವ ರಾಜರುಗಳ ಗಂಟಲನಾಳವನ್ನು ಮುರಿಯುತ್ತೇನೆ, ಎಲ್ಲಾ ದ್ವೀಪಗಳ ರಾಜರಿಂದಲು ಕಪ್ಪವನ್ನು ಕೊಂಡು ಅವರ ನೆತ್ತಿಯಮೇಲೆಯೇ ಹೊರಿಸಿಕೊಂಡು ಬರುತ್ತೇನೆ. ಜರಾಸಂಧನು ಯಾಗಕ್ಕೆ ವಿರೋಧಿಯೇ? ಯುದ್ಧದಲ್ಲಿ ಅವನನ್ನು ಕತ್ತರಿಸಿ ಹಾಕುತ್ತೇನೆ. ನೀನು ಮಾಡುವ ರಾಜಸೂಯ ಯಾಗದ ಭಾರ ನನ್ನಮೇಲಿರಲಿ, ಯಾಗಕ್ಕೆ ನೆರವಾಗುವ ಋಷಿಗಳನ್ನು ಕರೆಸು ಎಂದು ಭೀಮನು ಯುಧಿಷ್ಠಿರನಿಗೆ ಅಭಯವನ್ನು ನೀಡಿದನು.

ಅರ್ಥ:
ಮುರುಕಿಸು: ವಿರೋಧಿಸು; ಮನ್ನೆಯ: ಮೆಚ್ಚಿನ; ನಾಳ:ಶ್ವಾಸನಾಳ; ಮುರಿ: ಚೂರುಮಾಡು; ಅಖಿಳ: ಎಲ್ಲಾ; ದ್ವೀಪ: ನೀರಿನಿಂದ ಸುತ್ತುವರಿದ ಭೂಭಾಗ; ದ್ವೀಪಪತಿ: ರಾಜ; ತೆರಿಸು: ಬಿಚ್ಚು; ಹೊರು: ಭಾರವನ್ನು ಹೇರುವಂತೆ ಮಾಡು; ನೆತ್ತಿ: ತಲೆ, ಶಿರ; ವಸ್ತು: ಸಾಮಗ್ರಿ; ಕರುಬು: ಹೊಟ್ಟೆಕಿಚ್ಚುಪಡು; ರಣ: ಯುದ್ಧ; ತರಿ:ಕಡಿ; ಯಾಗ: ಕ್ರತು; ಹೊರೆ: ಭಾರ; ಕರೆ: ಬರೆಮಾಡು; ಋಷಿ: ಮುನಿ;

ಪದವಿಂಗಡಣೆ:
ಮುರುಕಿಸುವ +ಮನ್ನೆಯರ +ನಾಳವ
ಮುರಿವೆನ್+ಅಖಿಳ +ದ್ವೀಪಪತಿಗಳ
ತೆರಿಸುವೆನು +ಹೊರಿಸುವೆನು +ನೆತ್ತಿಯಲ್+ಅವರ+ ವಸ್ತುಗಳ
ಕರುಬನೇ +ಮಾಗಧನು +ರಣದಲಿಮ್ತರಿವೆನ್+ಆತನ +ನಿಮ್ಮ +ಯಾಗದ
ಹೊರಿಗೆ +ತನ್ನದು +ಕರೆಸು +ಋಷಿಗಳನ್+ಎಂದನಾ +ಭೀಮ

ಅಚ್ಚರಿ:
(೧) ಮುರಿ, ತರಿ, ತೆರಿ, ಹೊರಿ – ೨ನೇ ಅಕ್ಷರ “ರಿ”ಕಾರ ವಿರುವ ಪದಗಳು
(೨) ಅಭಯವನ್ನು ನೀಡುವ ಪರಿ – ನಿಮ್ಮ ಯಾಗದ ಹೊರೆ ತನ್ನದು, ಕರೆಸು ಋಷಿಗಳನು…

ನಿಮ್ಮ ಟಿಪ್ಪಣಿ ಬರೆಯಿರಿ