ಪದ್ಯ ೮೯: ಯುಧಿಷ್ಠಿರನು ನಾರದರಿಗೆ ಯಾವ ಪ್ರಶ್ನೆ ಕೇಳಿದನು?

ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜಯೋಗ್ಯಸ್ಥಾನವೋ ಮೇ
ಣೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ (ಸಭಾ ಪರ್ವ, ೧ ಸಂಧಿ, ೮೯ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ನಾರದರ ಹಿರಿಮೆಯನ್ನು ಹೇಳುತ್ತಾ, “ಎಲೈ ಮುನೀಂದ್ರ, ನಿಮ್ಮಲ್ಲಿ ನನ್ನದೊಂದು ಪ್ರಾರ್ಥನೆ, ನೀವು ಇಂದ್ರನ, ಬ್ರಹ್ಮನ, ಯಮನ, ವರುಣನ, ಕುಬೇರನ, ಆದಿಶೇಷನ ಸಭೆಗಳಲ್ಲಿ ನಡೆದಾಡಿದವರು, ಈ ನನ್ನ ಆಸ್ಥಾನಭವನವು ಅವರ ಆಸ್ಥಾನ ಭವನಗಳಿಗೆ ಸರಿಯೋ, ಹೆಚ್ಚೋ, ಅಥವ ಮನುಷ್ಯರಿಗೆ ತಕ್ಕದ್ದೋ ಹೇಳಿ”, ಎಂದು ಕೇಳಿದನು.

ಅರ್ಥ:
ಮುನಿ: ಋಷಿ; ಬಿನ್ನಹ:ಅರಿಕೆ, ವಿಜ್ಞಾಪನೆ; ಇಂದ್ರ: ಶಕ್ರ; ವಿರಿಂಚಿ: ಬ್ರಹ್ಮ; ಯಮ: ಕಾಲ; ವರುಣ: ನೀರಿನ ಅಧಿದೇವತೆ; ಧನಪತಿ: ಕುಬೇರ; ಶೇಷ: ಆದಿಶೇಷ; ಸಭ: ಆಸ್ಥಾನ; ಮಧ್ಯ: ನಡು; ಸುಳಿ: ನಡೆದಾಡು; ಇನಿತು: ಸ್ವಲ್ಪ; ರಚನೆ: ಕಟ್ಟು; ಸರಿ: ಸಮ; ಮೇಣ್: ಅಥವ; ಯೋಗ್ಯ: ಅರ್ಹತೆ; ಮನುಜ: ಮಾನವ; ನಗು: ಹರ್ಷ;

ಪದವಿಂಗಡಣೆ:
ಮುನಿಯೆ+ ಬಿನ್ನಹವ್+ಇಂದು +ನೀವ್
ಇಂದ್ರನ +ವಿರಿಂಚಿಯ +ಯಮನ +ವರುಣನ
ಧನಪತಿಯ+ ಶೇಷನ+ ಸಭಾ+ಮಧ್ಯದಲಿ+ ಸುಳಿವಿರಲೆ
ಇನಿತು+ ರಚನೆಗೆ +ಸರಿಯೊ +ಮಿಗಿಲೋ
ಮನುಜ+ಯೋಗ್ಯ+ಸ್ಥಾನವೋ +ಮೇಣ್
ಎನಲು +ನಗುತ+ಎಂದನು +ಮುನೀಶ್ವರನ್+ಆ+ ಯುಧಿಷ್ಠಿರಗೆ

ಅಚ್ಚರಿ:
(೧) ೩,೪,೫ ಸಾಲಿನ ಮೂರನೆ ಪದ “ಸ” ಕಾರದಿಂದ ಪ್ರಾರಂಭ: ಸಭಾಮಧ್ಯ, ಸರಿಯೊ, ಸ್ಥಾನವೊ
(೨) ೬ ದೇವತೆಗಳ ಹೆಸರನ್ನು ತಿಳಿಸಿರುವುದು