ಪದ್ಯ ೮೫: ರಾಜಧರ್ಮವನು ಮರೆತೆ ರಾಜರ ಪಾಡೇನು?

ನರಕ ಕರ್ಮವ ಮಾಡಿಯಿಹದೊಳು
ದುರಿತ ಭಾಜನರಾಗಿ ಕಡೆಯಲಿ
ಪರಕೆ ಬಾಹಿರರಾಗಿ ನಾನಾಯೋನಿಯೊಳು ಸುಳಿದು
ಹೊರಳುವರು ಕೆಲಕೆಲವು ಭೂಪರು
ಧರಿಸುವರಲೈ ರಾಜಧರ್ಮದ
ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೮೫ ಪದ್ಯ)

ತಾತ್ಪರ್ಯ:
ಈ ಲೋಕದಲ್ಲಿ ಪಾಪಕರ್ಮಗಳನ್ನು ಮಾಡಿ ನರಕ ಭಾಜನರಾಗಿ, ಸದ್ಗತಿಗೆ ಎರವಾಗಿ ನಾನಾಯೋನಿಗಳಲ್ಲಿ ಹುಟ್ಟಿ ಅನೇಕ ರಾಜರು ದುಃಖದಲ್ಲಿ ಹೊರಳಾಡುವರು, ನೀನು ರಾಜಧರ್ಮವನ್ನು ಮರೆತಿಲ್ಲ ತಾನೆ, ಎಂದು ನಾರದರು ಯುಧಿಷ್ಠಿರನನ್ನು ಕೇಳಿದರು.

ಅರ್ಥ:
ನರಕ: ಅಧೋಲೋಕ; ಕರ್ಮ:ಕೆಲಸ; ಮಾಡಿ: ಆಚರಿಸಿ; ಇಹ: ಸಂಸಾರ, ಭೂಮಿ; ದುರಿತ: ಪಾಪ, ಪಾತಕ; ಭಾಜನ:ಭಾಗಿಸುವುದು; ಕಡೆ: ಅಂತ್ಯ; ಪರಕೆ: ಹರಕೆ; ಬಾಹಿರ: ಹೊರಗೆ; ನಾನಾ: ಬೇರೆಬೇರೆ; ಯೋನಿ:ಗರ್ಭಕೋಶ; ಸುಳಿದು:ಸುತ್ತು, ತಿರುಗು; ಹೊರಳು: ತೊಳಲಾಡು; ಕೆಲ: ಸ್ವಲ್ಪ; ಭೂಪ: ರಾಜ; ಧರಿಸು: ಹೊರು, ಹೊತ್ತುಕೊಳ್ಳು; ಹೊರಿಗೆ: ಭಾರ; ಮರೆ: ಮರೆತು, ಜ್ಞಾಪಕವಿಲ್ಲದ; ಭೂಪಾಲ; ರಾಜ;

ಪದವಿಂಗಡಣೆ:
ನರಕ +ಕರ್ಮವ +ಮಾಡಿ+ಇಹದೊಳು
ದುರಿತ +ಭಾಜನರಾಗಿ +ಕಡೆಯಲಿ
ಪರಕೆ +ಬಾಹಿರರಾಗಿ +ನಾನಾ+ಯೋನಿಯೊಳು +ಸುಳಿದು
ಹೊರಳುವರು+ ಕೆಲಕೆಲವು+ ಭೂಪರು
ಧರಿಸುವರಲೈ +ರಾಜಧರ್ಮದ
ಹೊರಿಗೆಯನು+ ಮರೆದಿರೆ+ಯಲಾ +ಭೂಪಾಲ+ ಕೇಳೆಂದ

ಅಚ್ಚರಿ:
(೧) ಕೆಲಕೆಲವು, ನಾನಾ – ಒಂದೆ ಪದ ೨ ಬಾರಿ ಪ್ರಯೋಗ
(೨) ಭಾಜನರಾಗಿ, ಬಾಹಿರರಾಗಿ – ಪದಪ್ರಯೋಗ

ಪದ್ಯ ೮೪: ರಾಜೋತ್ತಮನ ಲಕ್ಷಣವೇನು?

ಸಿರಿಗೆ ಕಂಟಕವಾದ ದೋಷವ
ನೊರೆವೆನಾಲಸ್ಯವನು ಭಯವನು
ಮರವೆಯನು ಕೋಪವನು ನಿದ್ರೆಯ ದೀರ್ಘಸೂತ್ರತೆಯ
ಪರಿಹರಿಸಬಲ್ಲವನಿಪಾಲಂ
ಗೆರವೆನಿಸದೈಶ್ವರಿಯವಹುದು
ರ್ವರೆಯೊಳವ ರಾಜೋತ್ತಮನು ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೮೪ ಪದ್ಯ)

ತಾತ್ಪರ್ಯ:
ಆಲಸ್ಯ, ಭಯ, ಮರೆವು, ಕೋಪ, ನಿದ್ರೆ, ಕಾರ್ಯವನ್ನು ಮುಂದೂಡುತ್ತಾ ಬಹುಕಾಲ ತಡೆಯುವುದು, ಇವು ಐಶ್ವರ್ಯಕ್ಕೆ ಹಾನಿಯುಂಟುಮಾಡುತ್ತದೆ. ಇವನ್ನು ನಿವಾರಿಸಿಕೊಳ್ಳುವ ರಾಜನಿಗೆ ಶಾಶ್ವತ ಐಶ್ವರ್ಯವುಂಟಾಗುತ್ತದೆ. ಅವನು ರಾಜರಲ್ಲಿ ಉತ್ತಮನಾಗುತ್ತಾನೆ.

ಅರ್ಥ:
ಸಿರಿ: ಐಶ್ವರ್ಯ; ಕಂಟಕ: ತೊಡಕು; ದೋಷ: ತಪ್ಪು; ಒರೆ: ಗುಣ; ಆಲಸ್ಯ: ಸೋಮಾರಿತನ, ಜಡತ್ವ; ಭಯ: ಹೆದರಿಕೆ, ಅಂಜಿಕೆ; ಮರವೆ: ಜ್ಞಾಪಕವಿಲ್ಲದ; ಕೋಪ: ಕ್ರೋಧ; ನಿದ್ರೆ: ಶಯನ; ದೀರ್ಘ: ಉದ್ದ; ಸೂತ್ರ:ಸಾರಾಂಶ; ಪರಿಹರಿಸು: ನಿವಾರಿಸು; ಅವನಿಪಾಲ: ರಾಜ; ಅವನಿ: ಭೂಮಿ; ಐಶ್ವರ್ಯ: ಸಿರಿ, ಸಂಪತ್ತು; ಭೂಪಾಲ: ರಾಜ; ಉತ್ತಮ: ಶ್ರೇಷ್ಠ;

ಪದವಿಂಗಡಣೆ:
ಸಿರಿಗೆ +ಕಂಟಕವಾದ +ದೋಷವನ್
ಒರೆವೆನ್+ಆಲಸ್ಯವನು +ಭಯವನು
ಮರವೆಯನು+ ಕೋಪವನು +ನಿದ್ರೆಯ +ದೀರ್ಘ+ಸೂತ್ರತೆಯ
ಪರಿಹರಿಸಬಲ್ಲ+ಅವನಿಪಾಲಂಗ್
ಎರವೆನಿಸದ್+ಐಶ್ವರಿಯವಹುದ್
ಉರ್ವರೆಯೊಳವ+ ರಾಜೋತ್ತಮನು +ಭೂಪಾಲ +ಕೇಳೆಂದ

ಅಚ್ಚರಿ:
(೧) ಅವನಿಪಾಲ, ಭೂಪಾಲ – ಸಮನಾರ್ಥಕ ಪದ