ಪದ್ಯ ೧೦೩: ಅರ್ಜುನನ ಕೀರ್ತಿ ಎಲ್ಲಿ ಪಸರಿಸಿತು?

ನಳಿನಮುಖಿ ಸುರಗಜದ ಮೇಲಿಂ
ದಿಳಿದು ಬಂದಳು ಸುರರ ಸಂ
ಕುಲದಿರದೆ ಕೈಗಳ ಮುಗಿದು ಗಂಗಾತನುಜಗಭಿನಮಿಸಿ
ಬಳಿಕ ಭೀಷ್ಮನ ನೇಮದಲಿ ನಿಜ
ನಿಳಯಕೈದಿದಳರ್ತಿಯಲಿ ಕಡು
ಗಲಿಯು ಪಾರ್ಥಗೆ ಕೀರ್ತಿಯಾಯಿತು ಮೂರುಲೋಕದಲಿ (ಆದಿ ಪರ್ವ, ೨೧ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಅರಮನೆಯ ಆವರಣಕ್ಕೆ ಬಂದು ಐರಾವತದಿಂದ ಕೆಳಗಿಳಿದಳು. ಅಲ್ಲಿ ನೆರೆದಿದ್ದ ಸಕಲ ದೇವತೆಗಳಿಗೆ ನಮಸ್ಕರಿಸಿ, ಭೀಷ್ಮರಿಗೂ ತನ್ನ ನಮಸ್ಕಾರಗಳನ್ನು ಸಲ್ಲಿಸಿ, ಅವರ ನಿಯಮದಂತೆ ತನ್ನ ಅರಮನೆಯನ್ನು ಸೇರಿದಳು. ಈ ವ್ರತವನ್ನು ಮಾಡಲು ಸ್ವರ್ಗದಿಂದ ಐರಾವತವನ್ನೇ ತರಿಸಿದ ಪರಾಕ್ರಮಿಯಾದ ಅರ್ಜುನನ ಕೀರ್ತಿ ಮೂರುಲೋಕಗಳಲ್ಲೂ ಹರಡಿತು.

ಅರ್ಥ:
ನಳಿನಮುಖಿ: ಕಮಲದಂತ ಮುಖದವಳು, ಸುಂದರಿ; ಸುರಗಜ: ಐರಾವತ; ಇಳಿ: ಕೆಳಕ್ಕೆ ಬಾ; ಸುರರು: ದೇವತೆಗಳು; ಸಂಕುಲ: ಸಮಸ್ತರಿಗೂ; ಕೈಮುಗಿದು: ನಮಸ್ಕರಿಸು; ಗಂಗಾಸುತ: ಭೀಷ್ಮ; ಅಭಿನಮಿಸಿ: ವಂದಿಸಿ;
ನೇಮ: ನಿಯಮ; ನಿಜನಿಳಯ: ತನ್ನ ಅರಮನೆ; ಐದು:ಹೊಂದು, ಸೇರು; ಅರ್ತಿ: ಸಂತೋಷ, ಪ್ರೀತಿ; ಕಡುಗಲಿ: ಪರಾಕ್ರಮಿ; ಪಾರ್ಥ: ಅರ್ಜುನ; ಕೀರ್ತಿ:ಯಶಸ್ಸು, ಖ್ಯಾತಿ; ಲೋಕ: ಜಗತ್ತು;

ಪದವಿಂಗಡಣೆ:
ನಳಿನಮುಖಿ +ಸುರಗಜದ+ ಮೇಲಿಂದ್
ಇಳಿದು +ಬಂದಳು +ಸುರರ+ ಸಂ
ಕುಲದಿರದೆ +ಕೈಗಳ+ ಮುಗಿದು+ ಗಂಗಾತನುಜಗ್+ಅಭಿನಮಿಸಿ
ಬಳಿಕ+ ಭೀಷ್ಮನ +ನೇಮದಲಿ +ನಿಜ
ನಿಳಯಕ್+ಐದಿದಳ್+ಅರ್ತಿಯಲಿ +ಕಡು
ಗಲಿಯು +ಪಾರ್ಥಗೆ +ಕೀರ್ತಿಯಾಯಿತು+ ಮೂರುಲೋಕದಲಿ

ಅಚ್ಚರಿ:
(೧) ತನ್ನ ಅರಮನೆಗೆ ಎನ್ನಲು – ನಿಜ ನಿಳಯ ಪದದ ಪ್ರಯೋಗ
(೨) ಗಂಗಾತನುಜ, ಭೀಷ್ಮ – ೩, ೪ ಸಾಲಿನಲ್ಲಿ ಪ್ರಯೋಗ

ನಿಮ್ಮ ಟಿಪ್ಪಣಿ ಬರೆಯಿರಿ