ಪದ್ಯ ೨೫: ಕುಂತಿಯ ದುಗುಡವೇನು?

ಹೇಳಿ ಮಾಡುವುದೇನು ಫಲುಗುಣ
ಬಾಲಕರು ನೀವೆನ್ನ ಪುಣ್ಯವು
ಗಾಳಿಗೊಡ್ಡಿದ ಸೊಡರೊಲಾದುದು ನೃಪನ ಮರಣದಲಿ
ಹೇಳಲೇನದ ಧರೆಯ ಕೌರವ
ರಾಳುತಿಹರಿಂದವರ ಹಂಗಿನ
ಕೂಳಿನಲಿ ಬೆಂದೊಡಲ ಹೊರೆದಿಹೆವೆಂದಳಿಂದುಮುಖಿ (ಆದಿ ಪರ್ವ, ೨೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅಯ್ಯೋ ಅರ್ಜುನ, ನನ್ನ ಬಯಕೆಯನ್ನು ಹೇಳಿ ಮಾಡುವುದಾದರು ಏನು, ನೀವೆಲ್ಲಾ ಬಾಲಕರು, ನನ್ನ ಪುಣ್ಯವು ನಿಮ್ಮ ತಂದೆಯವರು ಸಾವನ್ನಪಿದಾಗಲೆ ಕ್ಷೀಣಿಸಿತು, ಈಗ ಅದು ಗಾಳಿಗೆ ಒಡ್ಡಿದ ದೀಪದಂತಿದೆ, ಕೌರವರು ಈಗ ರಾಜ್ಯವನ್ನು ಆಳುತ್ತಿರುವರು, ಅವರ ಹಂಗಿನಲ್ಲಿ ನಾವು ಊಟವನ್ನು ತಿಂದು, ಬೆಂದ ಹೊಟ್ಟೆಯನ್ನು ಹೊರೆಯುತ್ತಿದ್ದೇವೆ, ಎಂದಳು

ಅರ್ಥ:
ಹೇಳಿ: ಮಾತಾಡಿ; ಬಾಲಕ: ಚಿಕ್ಕ ಮಕ್ಕಳು; ಪುಣ್ಯ: ಸದಾಚಾರ; ಗಾಳಿ: ಅನಿಲ; ಸೊಡರು:ದೀಪ; ನೃಪ: ರಾಜ; ಮರಣ: ಸಾವು; ಧರೆ: ಭೂಮಿ; ಆಳು: ರಾಜ್ಯಭಾರ; ಹಂಗು: ದಾಕ್ಷಿಣ್ಯ, ಆಭಾರ; ಕೂಳು: ಊಟ; ಬೆಂದು: ಕಾಯಿಸು; ಒಡಲ:ಶರೀರ, ಹೊಟ್ಟೆ; ಹೊರೆ: ಭಾರ;ಇಂದುಮುಖಿ: ಚಂದ್ರನ ಮುಖವುಳ್ಳವಳು;

ಪದವಿಂಗಡಣೆ:
ಹೇಳಿ+ ಮಾಡುವುದೇನು +ಫಲುಗುಣ
ಬಾಲಕರು+ ನೀವ್+ಎನ್ನ+ ಪುಣ್ಯವು
ಗಾಳಿಗೊಡ್ಡಿದ+ ಸೊಡರೊಲ್+ಆದುದು +ನೃಪನ +ಮರಣದಲಿ
ಹೇಳಲೇನದ+ ಧರೆಯ +ಕೌರವ
ರಾಳುತಿಹರ್+ಇಂದ್+ಅವರ+ ಹಂಗಿನ
ಕೂಳಿನಲಿ +ಬೆಂದ್+ಒಡಲ +ಹೊರೆದಿಹೆ+ವೆಂದಳ್+ಇಂದುಮುಖಿ

ಅಚ್ಚರಿ:
(೧) ಕುಂತಿಯ ದಯನೀಯ ಸ್ಥಿತಿಯ ವರ್ಣನೆ – ಪುಣ್ಯವು ಗಾಳಿಗೊಡ್ಡಿದ ಸೊಡರೊಲಾದುದು, ಹಂಗಿನ ಕೂಳಿನಲಿ ಬೆಂದೊಡಲ ಹೊರೆದಿಹೆ

ನಿಮ್ಮ ಟಿಪ್ಪಣಿ ಬರೆಯಿರಿ