ಪದ್ಯ ೨೦: ಧರ್ಮವು ಯುಧಿಷ್ಠಿರನ ರಾಜ್ಯದಲ್ಲಿ ಯಾವ ಸ್ಥಿತಿಯಲ್ಲಿತ್ತು?

ಆದಿಯುಗದೊಳು ಧರ್ಮವಿದ್ದುದು
ಪಾದ ನಾಲ್ಕರ ಗಾಢಗತಿಯಲಿ
ಪಾದವೂಣೆಯವಾದುದಾ ತ್ರೇತಾಪ್ರಭಾವದಲಿ
ಪಾದವೆರಡಡಗಿದುದು ದ್ವಾಪರ
ದಾದಿಯಲ್ಲಿ ಯುಧಿಷ್ಠಿರನ ರಾ
ಜ್ಯೋದಯದಲಂಕುರಿಸಿ ಸುಳಿದುದು ನಾಲ್ಕು ಪಾದದಲಿ (ಆದಿ ಪರ್ವ, ೧೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ನಾಲ್ಕು ಯುಗಗಳಲ್ಲಿ ಮೊದಲಾದ ಕೃತಯುಗದಲ್ಲಿ ಧರ್ಮವು ನಾಲ್ಕು ಕಾಲುಗಳಲ್ಲಿ ನಿಂತಿತ್ತು, ತ್ರೇತಾಯುಗದ ಪ್ರಭಾವದಿಂದ ಧರ್ಮಕ್ಕೆ ಒಂದು ಕಾಲು ಹೋಗಿ ಮೂರೆ ಕಾಲುಗಳಮೇಲೆ ನಿಂತಿತು, ದ್ವಾಪರದ ಆದಿಯಲ್ಲಿ ಇನ್ನೊಂದು ಕಾಲು ಸಹ ಹೋಗಿ, ಎರಡೇ ಕಾಲುಗಳ ಮೇಲೆ ನಿಂತಿತು,ಆದರೆ ಯುಧಿಷ್ಠಿರನ ರಾಜ್ಯದಲ್ಲಿ ಧರ್ಮಕ್ಕೆ ಹೋಗಿದ್ದ ಎರಡು ಪಾದಗಳು ಚಿಗುರಿ ಅದು ಮತ್ತೆ ನಾಲ್ಕು ಪಾದಗಳ ಮೇಲೆ ನಿಂತಿತು.

ಅರ್ಥ:
ಆದಿ: ಪ್ರಾರಂಭ; ಯುಗ: ದೀರ್ಘವಾದ ಕಾಲಖಂಡ; ಧರ್ಮ: ಧಾರಣ ಮಾಡಿದುದು, ಶ್ರದ್ಧೆ; ಪಾದ: ಚರಣ; ಗಾಢಗತಿ:ವೇಗವಾದ ನಡಿಗೆ; ಊಣೆ: ಊನ, ಅಂಗಹೀನತೆ; ಪ್ರಭಾವ: ಪ್ರಾಬಲ್ಯ; ಅಡಗು: ಮರೆಯಾಗು; ಉದಯ: ಹುಟ್ಟು; ಅಲಂಕರಿಸು: ಶೃಂಗಾರಗೊಳ್ಳು; ಸುಳಿದು:ಕಾಣಿಸಿಕೊಳ್ಳು;

ಪದವಿಂಗಡಣೆ:
ಆದಿ+ಯುಗದೊಳು +ಧರ್ಮವಿದ್ದುದು
ಪಾದ +ನಾಲ್ಕರ +ಗಾಢಗತಿಯಲಿ
ಪಾದ+ವೂಣೆಯವ್+ಆದುದಾ +ತ್ರೇತಾ+ಪ್ರಭಾವದಲಿ
ಪಾದವೆರಡ್+ಅಡಗಿದುದು +ದ್ವಾಪರದ್
ಆದಿಯಲ್ಲಿ +ಯುಧಿಷ್ಠಿರನ+ ರಾ
ಜ್ಯೋದಯದಲ್+ಅಲಂಕುರಿಸಿ+ ಸುಳಿದುದು +ನಾಲ್ಕು +ಪಾದದಲಿ

ಅಚ್ಚರಿ:
(೧) ಯುಧಿಷ್ಠಿರನ ರಾಜ್ಯದಲ್ಲಿ ಧರ್ಮವು ಹೇಗೆ ತನ್ನ ಹಿರಿಮೆಯನ್ನು ಪಡೆಯಿತು ಎಂದು ಸೂಕ್ತವಾಗಿ ವರ್ಣಿಸಲಾಗಿದೆ
(೨)ಆದಿ – ೧, ೫ ಸಾಲಿನ ಮೊದಲ ಪದ, ಪಾದ – ೨,೩, ೪ ಸಾಲಿನ ಮೊದಲ ಪದ (ಒಟ್ಟು ನಾಲ್ಕು ಬಾರಿ ಪ್ರಯೋಗ)
(೩) ಊಣೆ, ಅಡಗು – ಸಮಾನ ಅರ್ಥ ಕೊಡುವ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ