ಪದ್ಯ ೬೨: ಇಂದ್ರತೇಜಃಪುಂಜದ ಪಾಂಡವರನ್ನು ಕಂಡ ದ್ರುಪದನ ಪ್ರತಿಕ್ರಿಯೆ ಹೇಗಿತ್ತು?

ಮನದ ಝೋಮ್ಮಿನ ಜಡಿವರೋಮಾಂ
ಚನದ ಹುದುಗುವ ಹೊದರುಗಂಗಳ
ಜಿನುಗುವಾತಿನ ಹೂತ ಹರುಷದ ಹೊಂಗಿದುತ್ಸವದ
ಕೊನರೊ ಬೆವರಿನ ಕಳಿದ ಚಿಂತೆಯ
ಮನದ ಭಾವದ ರಾಗರಸದು
ಬ್ಬಿನಲಿ ಹೊಂಪುಳಿವೋದನವರನು ಕಂಡು ಪಾಂಚಾಲ (ಆದಿ ಪರ್ವ, ೧೬ ಸಂಧಿ, ೬೨ ಪದ್ಯ)

ತಾತ್ಪರ್ಯ:
ದ್ರುಪದನು ಪಂಚಪಾಂಡವರನ್ನು ತನ್ನ ದಿವ್ಯನಯನಗಳಿಂದ ನೋಡಿದಾಗ ಅವರು ಇಂದ್ರರಾಗಿ ಗೋಚರಿಸಿದರು. ಆ ದೃಷ್ಯವನ್ನು ನೋಡಿ ಅವನ ಮೈ ಝುಮ್ಮೆಂದಿತು. ರೋಮಾಂಚನಗೊಂಡ ದ್ರುಪದನು ಕಣ್ಣುಗಳನ್ನು ಸ್ವಲ್ಪವೆ ತೆಗೆದು ನೋಡಿದನು. ಮಾತು ಅಲ್ಪಸ್ವಲ್ಪವಾಗಿ ಬಾಯಿಂದ ಬರುತ್ತಿತ್ತು. ಹರ್ಷಲತೆ ಹೂಬಿಟ್ಟಿತು, ಉತ್ಸವವು ಚಿಗುರೊಡೆಯಿತು, ಚಿಂತೆ ಕಳೆದುಕೊಂಡ ದ್ರುಪದನು ಅತಿಶಯ ಸಂತೋಷದಲ್ಲಿ ಮುಳುಗಿದನು.

ಅರ್ಥ:
ಮನ: ಮನಸ್ಸು, ಚಿತ್ತ; ಝೊಂಪು: ಮೈಮರೆವು; ಝಂಪಿಸು: ಹೊಳೆ, ಪ್ರಕಾಶಿಸು; ಜಡಿ: ತುಂಬು, ವ್ಯಾಪಿಸು; ರೋಮಾಂಚನ: ಮೈಗೂದಲು ನಿಮಿರುವಿಕೆ, ಪುಳಕ; ಹುದುಗು:ಸೇರು, ಕೂಡು, ತುಂಬಿಸು; ಹೊದರು: ತೊಂದರೆ, ಕುಳಿ, ಪೊದೆ; ಕಂಗಳು: ಕಣ್ಣು; ಜಿನುಗು: ತೊಟ್ಟಿಕ್ಕು ; ಹೂತ:ಹೂಬಿಟ್ಟ, ಅರಳಿದ; ಹರುಷ: ಸಂತೋಷ; ಹೊಂಗು: ಹಿಗ್ಗು, ಹೊಳೆ, ಉತ್ಸಾಹಿಸು; ಉತ್ಸವ: ಹಬ್ಬ, ಸಮಾರಂಭ; ಕೊನರ್: ಚಿಗುರು, ಅಭಿವೃದ್ಧಿ ಹೊಂದು; ಬೆವರು: ಹೆದರು, ಸ್ವೇದಗೊಳ್ಳು; ಕಳಿ: ತೀರಿದ ಮೇಲೆ, ನಂತರ; ಚಿಂತೆ: ಯೋಚನೆ; ಭಾವ: ಬಾವನೆ, ಚಿತ್ತವೃತ್ತಿ; ರಾಗ: ಒಲುಮೆ, ಪ್ರೀತಿ, ಹಿಗ್ಗು; ರಸ: ಸಾರ; ಉಬ್ಬು: ಹಿಗ್ಗು; ಹೊಂಪು:ಹೆಚ್ಚಲು, ಹಿರಿಮೆ; ಕಂಡು: ನೋಡಿ; ಪಾಂಚಾಲ: ದ್ರುಪದ;

ಪದವಿಂಗಡಣೆ:
ಮನದ +ಝೋಮ್ಮಿನ+ ಜಡಿವ+ರೋಮಾಂ
ಚನದ +ಹುದುಗುವ +ಹೊದರು+ಕಂಗಳ
ಜಿನುಗು+ವಾತಿನ +ಹೂತ +ಹರುಷದ +ಹೊಂಗಿದುತ್ಸವದ
ಕೊನರೊ +ಬೆವರಿನ+ ಕಳಿದ+ ಚಿಂತೆಯ
ಮನದ +ಭಾವದ +ರಾಗರಸದ್
ಉಬ್ಬಿನಲಿ +ಹೊಂಪುಳಿವೋದನ್+ಅವರನು +ಕಂಡು +ಪಾಂಚಾಲ

ಅಚ್ಚರಿ:
(೧) ದ್ರುಪದನಲ್ಲಾದ ಭಾವಗಳನ್ನು ಸರೆದಿಡಿದಿರುವ ಬಗೆ: ಆ ದೃಷ್ಯವನ್ನು ಕಣ್ಣು ನೋಡಲಾಗಲಿಲ್ಲ – ಹುದುಗುವ ಹೊದರುಗಂಗಳ; ಮಾತು ಬರಲಿಲ್ಲ – ಜಿನುಗುವಾತಿನ; ಹರ್ಷಗೊಳ್ಳಕ್ಕೆ ಪ್ರಾರಂಭಿಸಿದನು – ಹೂತ ಹರುಷದ ಹೊಂಗಿದು; ಉತ್ಸವ ಚಿಗುರಿತು – ಉತ್ಸವದ ಕೊನರೊ;
(೨) “ಹ” ಕಾರದ ಪದಗಳು – ಹುದುಗು, ಹೊದರು, ಹೂತ, ಹರುಷ, ಹೊಂಗಿದ, ಹೊಂಪು
(೩) ಮನದ – ೧, ೫ ಸಾಲಿನ ಮೊದಲ ಪದ

ನಿಮ್ಮ ಟಿಪ್ಪಣಿ ಬರೆಯಿರಿ