ಪದ್ಯ ೩೪: ದ್ರೌಪದಿಯು ಅರ್ಜುನನ ಬಳಿ ಬಂದಾಗ ಅವಳಿಲ್ಲಿ ಮೂಡಿದ ಭಾವನೆಗಳಾವುವು?

ಲಲಿತ ಮಧುರಾಪಾಂಗದಲಿ ಮು
ಕ್ಕುಳಿಸಿ ತಣಿಯವು ಕಂಗಳುಬ್ಬಿದ
ಪುಳಕ ಜಲದಲಿ ಮುಳುಗಿ ಮೂಡಿತು ಮೈ ನಿತಂಬಿನಿಯ
ತಳಿತ ಲಜ್ಜಾಭರಕೆ ಕುಸಿದ
ವ್ವಳಿಸಿತಂತಃಕರಣವಾಂಗಿಕ
ಲುಳಿತ ಸಾತ್ವಿಕ ಭಾವವವಗಡಿಸಿತ್ತು ಮಾನಿನಿಯ (ಆದಿ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸುಂದರವಾದ ಮಧುರಭಾವದಿಂದ ಕೂಡಿದ ಕಡೆಗಣ್ಣಿನನೋಟದಿಂದ ಅರ್ಜುನನನ್ನು ಎಷ್ಟು ಬಾರಿ ನೋಡಿದರು ಆ ಕಣ್ಣುಗಳಿಗೆ ಅದು ತಣಿಯಲೇಯಿಲ್ಲ. ರೋಮಾಂಚನಗೊಂಡ ಅವಳ ಸ್ವೇದಗಳಿಂದ ಆಕೆಯ ಮೈ ಒದ್ದೆಯಾಯಿತು. ನಾಚಿಕೆಯ ಭಾರಕ್ಕೆ ಅವಳ ಮನಸ್ಸು ಕುಗ್ಗಿತು, ಮನಸ್ಸು ಒಳ್ಳೆಯ ಭಾವನೆಗಳಿಂದ ಆವೃತಗೊಂಡಿತು.

ಅರ್ಥ:
ಲಲಿತ: ಚೆಲುವು, ಸೌಂದರ್ಯ; ಮಧುರ: ಸಿಹಿಯಾದ, ಸವಿ; ಅಪಾಂಗ: ಕಡೆಗಣ್ಣು; ಮುಕ್ಕುಳಿಸಿ: ಹೊರಹೊಮ್ಮು; ತಣಿ:ತೃಪ್ತಿಹೊಂದು, ಸಮಾಧಾನಹೊಂದು; ಕಂಗಳು: ಕಣ್ಣುಗಳು; ಉಬ್ಬಿದ: ಅಗಲವಾದ; ಪುಳಕ: ರೋಮಾಂಚನ; ಜಲ: ನೀರು; ಮುಳುಗು: ಒಳಸೇರು, ಕಾಣದಾಗು; ಮೂಡು: ತೋರು; ಮೈ: ಅಂಗ; ನಿತಂಬಿನಿ: ಚೆಲುವೆ; ತಳಿತ: ಹೊಂದು; ಲಜ್ಜ: ನಾಚಿಕೆ; ಭರ:ತುಂಬ; ಕುಸಿ: ಕೆಳಗೆ ಬೀಳು; ಅವ್ವಳಿಸು: ಅವ್ವಳಿಸು, ನುಗ್ಗು, ಪೀಡಿಸು; ಅಂತಃಕರಣ: ಮನಸ್ಸು, ಚಿತ್ತವೃತ್ತಿ; ಆಂಗಿಕ:ಶರೀರಕ್ಕೆ ಸಂಬಂಧಿಸಿದ; ಉಳಿ:ಬಿಡು; ಸಾತ್ವಿಕ: ಒಳ್ಳೆಯ ಗುಣ; ಭಾವ: ಸಂವೇದನೆ, ಭಾವನೆ; ಅವಗಡಿಸು: ವ್ಯಾಪಿಸು, ಹರಡು; ಮಾನಿನಿ: ಹೆಂಗಸು, ಚೆಲುವೆ;

ಪದವಿಂಗಡಣೆ:
ಲಲಿತ +ಮಧುರ+ಅಪಾಂಗದಲಿ+ ಮು
ಕ್ಕುಳಿಸಿ+ ತಣಿಯವು +ಕಂಗಳ್+ಉಬ್ಬಿದ
ಪುಳಕ+ ಜಲದಲಿ +ಮುಳುಗಿ +ಮೂಡಿತು +ಮೈ +ನಿತಂಬಿನಿಯ
ತಳಿತ+ ಲಜ್ಜಾ+ಭರಕೆ+ ಕುಸಿದ
ವ್ವಳಿಸಿತ್+ಅಂತಃಕರಣವ್+ಆಂಗಿಕಲ್
ಉಳಿತ+ ಸಾತ್ವಿಕ+ ಭಾವವ್+ಅವಗಡಿಸಿತ್ತು +ಮಾನಿನಿಯ

ಅಚ್ಚರಿ:
(೧) ಮಾನಿನಿ, ಲಲಿತ – ಹೆಂಗಸನ್ನು ವರ್ಣಿಸುವ ಪದ, ಪದ್ಯದ ಮೊದಲ ಮತ್ತು ಕೊನೆ ಪದ
(೨) ಪ್ರಿಯನನ್ನು ನೋಡಿದಾಗ ಮೈಯಲ್ಲಿ ಮೂಡುವ ಭಾವನೆಗಳ ಸ್ಪಷ್ಟ ಚಿತ್ರಣ
(೩) ಮುಳುಗಿ, ಅವ್ವಳಿಸಿ, ಮೂಡು, ಮುಕ್ಕುಳಿಸಿ, ತಣಿ,ಅವಗಡಿಸು – ಭಾವನೆಗಳನ್ನು ಇಮ್ಮಡಿಗೊಳಿಸುವ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ