ಪದ್ಯ ೪: ಪಾಂಡವರು ಪಾಂಚಾಲ ನಗರದಲ್ಲಿ ಏನನ್ನು ನೋಡಿದರು?

ಚತುರ ಉದಧೀ ವಲಯದವನೀ
ಪತಿಗಳೇಕಾಮಿಷ ವಿರೋಧ
ಸ್ಥಿತಿಯ ನೋಡದೆ ನೂಕಿ ನಡೆದರು ದ್ರುಪದ ಪುರಿಗಾಗಿ
ಅತಿಬಲರು ಬಹು ರಾಜಬಲ ಪ
ದ್ಧತಿಗಳನು ನೋಡುತ್ತ ಬಂದರು
ಕೃತಕ ವಿಪ್ರೋತ್ತಮರು ಭಿಕ್ಷಾವಿಹಿತ ವೃತ್ತಿಯಲಿ (ಆದಿ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ನಾಲ್ಕು ಸಮುದ್ರಗಳವರೆಗಿನ ರಾಜರೆಲ್ಲರು ಒಂದು ವಸ್ತುವಿನ ಸಲುವಾಗಿ (ದ್ರೌಪದಿ), ಅದು ಈ ಎಲರಿಗೂ ಸಿಗಲು ಸಾಧ್ಯವೇ ಎಂದು ಮರೆತೇಬಿಟ್ಟರೇನೋ ಎಂಬಂತೆ ದ್ರುಪದನ ರಾಜಧಾನಿಗೆ ಬಂದು ಸೇರಿದರು. ಅತಿಬಲರಾದ ಪಾಂಡವರು ಅನೇಕ ದೇಶಗಳಿಂದ ಬಂದಿದ್ದ ರಾಜರನೆಲ್ಲಾ ನೋಡುತ್ತ, ವಿಪ್ರರವೇಷದಲ್ಲಿ ಭಿಕ್ಷಾಟನೆಯ ವೃತ್ತಿಯಲ್ಲಿ ಪಾಂಚಾಲ ನಗರವನ್ನು ಹೊಕ್ಕರು.

ಅರ್ಥ:
ಚತುರ: ನಾಲ್ಕು; ಉದ: ಜಲ, ನೀರು; ಉದಧಿ: ಸಮುದ್ರ; ವಲಯ: ಕ್ಷೇತ್ರ, ಚೌಕಟ್ಟು; ಅವನೀಪತಿ: ರಾಜ, ನೃಪ; ಆಮಿಷ: ಆಸೆ; ವಿರೋಧ: ತಡೆ, ಅಡ್ಡಿ,ಪ್ರತಿಯಾದ; ಸ್ಥಿತಿ: ಅಸ್ತಿತ್ವ, ದೆಸೆ; ನೋಡದೆ: ಗೋಚರಿಸದೆ; ನೂಕಿ: ತಳ್ಳು; ಪುರಿ: ಊರು; ಬಲ:ಶೌರ್ಯ, ಶಕ್ತಿ; ಅತಿ: ವಿಶೇಷ; ಬಹು: ತುಂಬ; ರಾಜಬಲ: ಸೈನ್ಯ; ಪದ್ಧತಿ: ಕ್ರಮ, ರೀತಿ; ಬಂದರು: ಆಗಮಿಸು; ಕೃತಕ: ನೈಜವಲ್ಲದ; ವಿಪ್ರ: ಬ್ರಾಹ್ಮಣ; ಉತ್ತಮ: ಶ್ರೇಷ್ಠ; ಭಿಕ್ಷ:ಬೇಡು, ಅಂಗಲಾಚು; ವಿಹಿತ: ಇರಿಸಿದ, ಯೋಗ್ಯವಾದ; ವೃತ್ತಿ: ಕೆಲಸ;

ಪದವಿಂಗಡನೆ:
ಚತುರ +ಉದಧೀ +ವಲಯದ್+ಅವನೀ
ಪತಿಗಳ್+ಏಕ+ಆಮಿಷ+ ವಿರೋಧ
ಸ್ಥಿತಿಯ +ನೋಡದೆ +ನೂಕಿ +ನಡೆದರು+ ದ್ರುಪದ+ ಪುರಿಗಾಗಿ
ಅತಿಬಲರು+ ಬಹು+ ರಾಜಬಲ+ ಪ
ದ್ಧತಿಗಳನು +ನೋಡುತ್ತ +ಬಂದರು
ಕೃತಕ+ ವಿಪ್ರೋತ್ತಮರು+ ಭಿಕ್ಷಾವಿಹಿತ+ ವೃತ್ತಿಯಲಿ

ಅಚ್ಚರಿ:
(೧) ಅವನೀಪತಿ, ರಾಜ – ಸಮಾನಾರ್ಥಕ ಪದ
(೨) ಬಲ ಪದದ ಪ್ರಯೋಗ – ಅತಿಬಲ, ರಾಜಬಲ
(೩) ನೋಡದೆ, ನೋಡುತ್ತ – ಪದಗಳ ಬಳಕೆ, ಎಲ್ಲ ರಾಜರು ಒಬ್ಬಳಾದ ದ್ರೌಪದಿ ಎಲ್ಲರಿಗೂ ಸಿಗಲು ಸಾಧ್ಯವೇ ಎನ್ನುವುದನ್ನು ನೋಡದೆ ಬಂದರೆ, ಪಾಂಡವರು ಎಲ್ಲಾ ರಾಜರಬಲವನ್ನು ನೋಡುತ್ತಾ ಬಂದರು ಎಂದು ವರ್ಣಿಸಿದೆ.
(೪)ರಾಜರೆಲ್ಲರು ಬಂದ ರೀತಿ – ನೂಕಿ ನಡೆದರು (ಆತುರ); ಪಾಂಡವರು ಬಂದ ರೀತಿ – ಪದ್ಧತಿಗಳನ್ನು ನೋಡುತ್ತಾ ಬಂದರು (ಸಾವಕಾಶವಾಗಿ)

ನಿಮ್ಮ ಟಿಪ್ಪಣಿ ಬರೆಯಿರಿ