ಪದ್ಯ ೫: ಭೀಮನು ತಮ್ಮೊಂದಿಗೆ ಇರುವುದು ಸುಯೋಧನನಿಗೆ ಏತಕ್ಕೆ ಹೊಂದಲಿಲ್ಲ?

ವನಜವನದಲಿ ತುರುಚೆ ಕಬ್ಬಿನ
ಬನದಿ ಕಡಸಿಗೆ ಚೂತಮಯ ಕಾ
ನನದಿ ಬೊಬ್ಬುಲಿ ಭೀಮಸೇನನಯಿರವು ತಮ್ಮೊಳಗೆ
ಇನಿತು ಪಾರ್ಥನ ಮೇಲೆ ಯಮಳರ
ಜಿನುಗಿನಲಿ ಜಾರೆನು ಯುಧಿಷ್ಠಿರ
ಜನಪನಾಗಲಿ ಮೇಣು ಮಾಣಲಿ ಭೀತಿಯೆಲ್ಲೆಂದ (ಆದಿ ಪರ್ವ, ೮ ಸಂಧಿ, ೫ ಪದ್ಯ)

ತಾತ್ಪರ್ಯ:
ಭೀಮನ ಬಗ್ಗೆ ದುರ್ಯೋಧನನಿಗಿದ್ದ ತೀವ್ರ ಕೋಪ, ಈ ಪದ್ಯದಲ್ಲಿ ವ್ಯಕ್ತವಾಗಿದೆ. ಯಾವರೀತಿ, ಕಮಲಗಳ ನಡುವೆ ತರುಚೆ ಸೊಪ್ಪು, ಕಬ್ಬಿನ ತೋಟದಲ್ಲಿ ಕಹಿಯಾದ ಕಡಸಿಗೆ ಗಿಡ, ಮಾವಿನ ತೋಪಿನಲ್ಲಿ ಜಾಲಿಯ ಗಿಡ ಹೊಂದುವುದಿಲ್ಲವೋ ಅದೇ ರೀತಿ ಈ ಭೀಮನು ನಮ್ಮಲ್ಲಿ ಇರುವುದು ಹೊಂದುವುದಿಲ್ಲ. ಮಿಕ್ಕ ಪಾಂಡವರಾದ ಪಾರ್ಥ, ನಕುಲ ಸಹದೇವರ ಮಾತಿಗೆ ನಾನು ಲೆಕ್ಕಿಸುವುದಿಲ್ಲ, ಯುಧಿಷ್ಠಿರನು ರಾಜನಾಗಲಿ ಬಿಡಲಿ ನನಗೆ ಅದರ ಭಯವು ಇಲ್ಲ ಎಂದು ಹೇಳಿದನು.

ಅರ್ಥ:
ವನಜ: ಕಮಲ, ತಾವರೆ; ವನ:ಕಾನನ, ಅರಣ್ಯ, ಬನ; ತುರುಚೆ: ನೆವೆಯನ್ನುಂಟು ಮಾಡುವ ಗಿಡ; ಕಬ್ಬು: ಇಕ್ಷು; ಕಡಸಿಗ: ಒಂದು ಬಗೆಯ ಗಿಡ; ಚೂತ: ಮಾವು; ಬೊಬ್ಬುಲಿ: ಜಾಲಿ; ಯಮಳ: ಅವಳಿ ಜವಳಿ; ಜಿನುಗು: ಕರಗು, ತೊಂದರೆ, ತುಚ್ಛ; ಜಾರು: ಬೀಳು; ಜನಪ: ರಾಜ; ಮೇಣು: ಅಥವ; ಮಾಣ್: ನಿಲ್ಲು; ಸ್ಥಗಿತಗೊಳ್ಳು; ಭೀತಿ: ಭಯ;

ಪದವಿಂಗಡನೆ:
ವನಜ+ವನದಲಿ+ ತುರುಚೆ +ಕಬ್ಬಿನ
ಬನದಿ +ಕಡಸಿಗೆ+ ಚೂತಮಯ +ಕಾ
ನನದಿ +ಬೊಬ್ಬುಲಿ+ ಭೀಮಸೇನನ್+ಇರವು+ ತಮ್ಮೊಳಗೆ
ಇನಿತು+ ಪಾರ್ಥನ +ಮೇಲೆ +ಯಮಳರ
ಜಿನುಗಿನಲಿ+ ಜಾರೆನು+ ಯುಧಿಷ್ಠಿರ
ಜನಪನಾಗಲಿ+ ಮೇಣು +ಮಾಣಲಿ+ ಭೀತಿಯೆಲ್ಲೆಂದ

ಅಚ್ಚರಿ:
(೧) ೩ ಉಪಮಾನಗಳ ಬಳಕೆ : ವನಜವನದಲಿ ತುರುಚೆ, ಕಬ್ಬಿನ ಬನದಿ ಕಡಸಿಗೆ, ಚೂತಮಯ ಕಾನನದಿ ಬೊಬ್ಬುಲಿ
(೨) ವನ, ಬನ, ಕಾನನ – ಕಾಡು, ಅರಣ್ಯ ಪದದ ಸಮಾನಾರ್ಥ ಪದಗಳು
(೩) ನಕುಲ ಸಹದೇವರನ್ನು ಕರೆಯಲು ಯಮಳರು (ಅವಳಿ ಜವಳಿ) ಎಂಬ ಪದ ಪ್ರಯೋಗ
(೪) ಮೇಣು ಮಾಣಲಿ, ಜಿನುಗಿನಲಿ ಜಾರೆನು – ಒಂದೇ ಅಕ್ಷರದ ಜೋಡಿ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ