ಪದ್ಯ ೧೩: ಭೀಮನನ್ನು ಸಾಯಿಸಲು ದುರ್ಯೋಧನನು ಯಾವ ವಿಷ ಗಳಿಂದ ಲೇಪಿಸಿದ ಕಜ್ಜಾಯವನ್ನು ತಯಾರಿಸಿದನು?

ಕಾಳಕೂಟ ಹಲಾಹಲವ ಕಾ
ರ್ಕೋಟ ದಾರದ ವತ್ಸನಾಭಿ ಕ
ರಾಳ ಸೌರಾಷ್ಟ್ರಿಕವ ಶೌಕ್ಲಿಕ ಸುಪ್ರದೀಪಕವ
ಹೇಳಲರಿದೆನಿಪೆಂಟು ವಿಷವನು
ಮೇಳವಿಸಿ ಬಳಿಕುಳಿದ ಮಧುರ ವಿ
ಶಾಲವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ (ಆದಿ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಮನನ್ನು ಮಡುವಿನಲ್ಲಿ ಮುಳುಗಿಸಿದ, ಹಾವುಗಳಿಂದ ಕಚ್ಚಿಸಿದ ಆದರು ಉಳಿದ ಭೀಮನನ್ನು ಹೇಗಾದರು ಸಾಯಿಸಬೇಕೆಂದು ಕರಾಳ ವಿಷಗಳನ್ನು ಲೇಪಿಸಿ ಸಿಹಿ ತಿಂಡಿಗಳನ್ನು ಮಾಡಿಸಲು, ಎಂಟು ಕರಾಳ ವಿಷ ಗಳಾದ ಕಾಳಕೂಟ ಹಲಾಹಲವ, ಕಾರ್ಕೋಟ, ದಾರದ, ವತ್ಸನಾಭಿ,ಸೌರಾಷ್ಟ್ರಿಕವ, ಶೌಕ್ಲಿಕ ಸುಪ್ರದೀಪಕವ ಉಪಯೋಗಿಸಿ ಕಜ್ಜಾಯಗಳನ್ನು ಮಾಡಿಸಿದ.

ಅರ್ಥ:
ಕರಾಳ: ಭಯಾನಕ, ಘೋರ;ಹೇಳಲು: ತಿಳಿಸಲು,
ಅರಿ: ತಿಳಿಯೆ;ವಿಷ: ನಂಜು; ಮೇಳವಿಸಿ: ಬೆರಸಿ, ಸೇರಿಸಿ
ಮಧುರ: ಸಿಹಿ, ಸವಿ;ವಿಶಾಲ: ತುಂಬ, ಅನೇಕ;ವಸ್ತು: ಸಾಮಗ್ರಿ

ಪದವಿಂಗಡನೆ:
ಕಾಳಕೂಟ+ ಹಲಾಹಲವ+ ಕಾ
ರ್ಕೋಟ +ದಾರದ +ವತ್ಸನಾಭಿ +ಕ
ರಾಳ +ಸೌರಾಷ್ಟ್ರಿಕವ+ ಶೌಕ್ಲಿಕ+ ಸುಪ್ರದೀಪಕವ
ಹೇಳಲ್+ಅರಿದೆನ್+ಇ+ಪೆಂಟು +ವಿಷವನು
ಮೇಳವಿಸಿ +ಬಳಿಕ್+ಉಳಿದ +ಮಧುರ +ವಿ
ಶಾಲ+ವಸ್ತುಗಳಿಂದ +ಕಜ್ಜಾಯಗಳ +ಮಾಡಿಸಿದ

ಅಚ್ಚರಿ:
(೧) ೮ ವಿಷಗಳ ಹೆಸರುಗಳನ್ನು ಪದ್ಯದಲ್ಲಿ ಜೋಡಿಸಿರುವುದು
(೨) ೨ನೆ ಪದ ೨ ಸಾಲಿನಲ್ಲಿ (ಳ ಅಥವ ಲ ಕಾರ) ವಾಗದಿರುವುದು
(೩) ೧ ಸಾಲಿನ ಮೊದಲನೇ ಮತ್ತು ಕೊನೆ ಪದ “ಕಾ”, ಹಾಗು ೨ ಸಾಲಿನ ಮೊದಲು ಮತ್ತು ಕೊನೆ ಪದ “ಕ” ಕಾರ ವಾಗಿರುವುದು

Advertisements